ರಾಜ್ಯದಲ್ಲಿ ಈ ಬಾರಿ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ವ್ಯಕ್ತಪಡಿಸಿದರು.
ತುಮಕೂರು : ರಾಜ್ಯದಲ್ಲಿ ಈ ಬಾರಿ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ವ್ಯಕ್ತಪಡಿಸಿದರು.
ನಗರದ ಹೊರವಲಯದ ಗೊಲ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತಮ್ಮ ಪತ್ನಿ ಕನ್ನಿಕ ಪರಮೇಶ್ವರಿ ಅವರೊಂದಿಗೆ ತೆರಳಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಹೊಸ ಸರ್ಕಾರ ಮತ್ತು ಬದಲಾವಣೆಯನ್ನು ಬಯಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಅಧಿಕಾರ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ಬರುತ್ತದೆ ಎಂದು ಅವರು ಹೇಳಿದರು.
ಈ ಬಾರಿ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತದೆ. ಇದನ್ನು ಅನೇಕ ಸಮೀಕ್ಷೆಗಳು ಸಹ ಹೇಳಿವೆ. ಜನರ ಭಾವೆಯೂ ಕೂಡಾ ಇದೇ ಆಗಿದೆ. ಈ ಬಗ್ಗೆ ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಗಮನಿಸಿದ್ದೇನೆ. ರಾಜ್ಯದಲ್ಲಿ ಈ ಬಾರಿ ನೂರಕ್ಕೆ ನೂರರಷ್ಟುಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಒಳ್ಳೆಯ ಆಡಳಿತ ಕೊಡಬೇಕು ಎಂದು ನಾವು ಪ್ರಣಾಳಿಕೆಯಲ್ಲಿ ಅನೇಕ ಪ್ರಮುಖವಾದ ಅಂಶಗಳನ್ನು ನಮೂದಿಸಿದ್ದೇವೆ. ಈ ಎಲ್ಲ ಭರವಸೆಗಳನ್ನು ಈಡೇರಿಸುವ ವಿಶ್ವಾಸ ತಮಗಿದೆ. ಈ ಹಿಂದೆಯೂ ಕೂಡ ನಮ್ಮ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೇವೆ ಎಂದರು.
ಜಿಲ್ಲೆಯಲ್ಲಿ ಅತ್ಯಧಿಕ ಸ್ಥಾನ:
ತುಮಕೂರು ಜಿಲ್ಲೆಯಲ್ಲೂ ಸಹ ಕಾಂಗ್ರೆಸಗ ಪಕ್ಷವೇ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಹಾಗೆಯೇ ಕೊರಟಗೆರೆಯಲ್ಲೂ ಸಹ ನಾನು ಗೆದ್ದೇ ಗೆಲ್ಲುತ್ತೇನೆ. ನಾನು ಉದ್ದೇಶಪೂರ್ವಕವಾಗಿಯೇ ನನ್ನ ಮತವನ್ನು ಗೊಲ್ಲಹಳ್ಳಿಯಲ್ಲೇ ಇಟ್ಟುಕೊಂಡಿದ್ದೇನೆ. ಇದು ನನ್ನ ಸ್ವಂತ ಊರು, ನಾನು ಓದಿದ ಶಾಲೆ. ಹಾಗಾಗಿ ನನಗೆ ಭಾವನಾತ್ಮಕ ಸಂಬಂಧ ಇದೆ. ಆದ್ದರಿಂದ ನಾನು ಸ್ಪರ್ಧೆ ಮಾಡುವ ಕೊರಟಗೆರೆ ಕ್ಷೇತ್ರಕ್ಕೆ ನನ್ನ ಮತವನ್ನು ವರ್ಗಾವಣೆ ಮಾಡಿಕೊಂಡಿಲ್ಲ. ಇಂದು ಸಂತೋಷದಿಂದ ಮತ ಚಲಾವಣೆ ಮಾಡಿದ್ದೇನೆ. ತುಮಕೂರು ಗ್ರಾಮಾಂತರ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.
ನಾವು ಯಾವಾಗಲೂ ಹೆಚ್ಚಿನ ಮತಗಳ ಅಂತರದಿಂದಲೇ ಗೆದ್ದಿದ್ದೇವೆ. ಒಂದು ಅಥವಾ ಎರಡು ಮತಗಳ ಕೊರತೆಯಂತಹ ಸಂದರ್ಭ ಎಂದೂ ಸಹ ಎದುರಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕೊರಟಗೆರೆ ಕ್ಷೇತ್ರದಲ್ಲಿ ಸಂಚಾರ:
ತುಮಕೂರಿನ ಸಿದ್ದಾರ್ಥನಗರದಲ್ಲಿ ಮತದಾನ ಮಾಡಿದ ನಂತರ ಕೊರಟಗೆರೆ ಕ್ಷೇತ್ರದಲ್ಲಿ ಪ್ರಮಖ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ ಡಾ.ಜಿ.ಪರಮೇಶ್ವರ್ ಮತದಾನದ ಸನ್ನಿವೇಶ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಂತಸವನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಶಾಂತಿಯುತ ಚುನಾವಣೆ ನಡೆಸುವ ದಿಟ್ಟತನ ಪ್ರದರ್ಶನ ಮಾಡುವ ಮೂಲಕ ಕೊರಟಗೆರೆ ಮತದಾರರು ಗೌರವಯುತವಾಗಿ ನಡೆದುಕೊಂಡಿರುವುದು ಘನತೆಯನ್ನು ತಂದುಕೊಟ್ಟಿದೆ. ಶೇ 80ಕ್ಕೂ ಅಧಿಕ ಮತದಾನವಾಗಿರುವುದು ಖುಷಿಯ ಸಂಗತಿ ಎಂದು ಅವರು ಹೇಳಿದ್ದಾರೆ. ಕ್ಷೇತ್ರದ 6 ಹೋಬಳಿಗಳ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸಹಕಾರವನ್ನು ಸ್ಮರಿಸಿದರು.