ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್ಆರ್ಪುರಗಳಲ್ಲಿ ದಿನವಿಡೀ ಎಡಬಿಡದೆ ಮಳೆ ಸುರಿಯುತ್ತಿದೆ.ನದಿ ಪಾತ್ರಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತುಂಗ, ಭದ್ರಾ, ನೇತ್ರಾವತಿ ಹಾಗೂ ಅದರ ಉಪ ನದಿಗಳು ಮೈದುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಭೋರ್ಗರೆಯುತ್ತಿರುವ ಭದ್ರಾನದಿ ಪ್ರವಾಹದ ಭೀತಿ ಮೂಡಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.06): ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣ ಅಬ್ಬರಿಸುತ್ತಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲಾರಿಂಭಿಸಿವೆ. ಹಲವೆಡೆ ಮರಗಳು ಧರಾಶಾಹಿಯಗಿದ್ದು, ರಸ್ತೆಗಳಿಗೆ ಹಾನಿ ಉಂಟಾಗಿದೆ. ಮಲೆನಾಡು ತಾಲ್ಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್ಆರ್ಪುರಗಳಲ್ಲಿ ದಿನವಿಡೀ ಎಡಬಿಡದೆ ಮಳೆ ಸುರಿಯುತ್ತಿದೆ.ನದಿ ಪಾತ್ರಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತುಂಗ, ಭದ್ರಾ, ನೇತ್ರಾವತಿ ಹಾಗೂ ಅದರ ಉಪ ನದಿಗಳು ಮೈದುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಭೋರ್ಗರೆಯುತ್ತಿರುವ ಭದ್ರಾನದಿ ಪ್ರವಾಹದ ಭೀತಿ ಮೂಡಿಸಿದೆ.
undefined
ನಾಲ್ಕು ಹೋಬಳಿಗಳಲ್ಲಿ ರಜೆ
ಸತತ ಮೂರನೇ ದಿನವೂ ವರುಣಾರ್ಭಟ ಮುಂದಿವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ.ಆಲ್ದೂರು, ಖಾಂಡ್ಯ, ಜಾಗರ ಮತ್ತು ವಸ್ತಾರೆ ಹೋಬಳಿಯ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.ಇನ್ನು ಕಳಸ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಅಂಗನವಾಡಿಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರಲ್ಲಿ ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು: ಮುಂದಿನ 3 ದಿನ ಭಾರೀ ಮಳೆ..!
ಅಪಾಯದ ಮಟ್ಟದಲ್ಲಿ ಭದ್ರೆ
ಕುದುರೇಮುಖ ಘಟ್ಟ ಪ್ರದೇಶದಲ್ಲೂ ನಿರಂತರ ಮಳೆ ಸುರಿಯುತ್ತಿರುವುದು ಭದ್ರಾ ನದಿ ಉಕ್ಕಿ ಹರಿಯಲು ಕಾರಣವಾಗುತ್ತಿದೆ. ನದಿಯಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳು ಕೊಚ್ಚಿಕೊಂಡು ಬರುತ್ತಿರುವುದು ಕಂಡುಬಂದಿದೆ.
ಮುಳುಗಡೆ ಹಂತಕ್ಕೆ ಸೇತುವೆ
ಜಿಲ್ಲೆಯ ಮುಳುಗುವ ಸೇತುವೆ ಎಂದೇ ಹೆಸರಾಗಿರುವ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಭದ್ರಾ ನದಿ ನೀರಿನಲ್ಲಿ ಮುಳುಗಲು ಇನ್ನು ಕೆಲವೇ ಅಡಿಗಳಷ್ಟೇ ಬಾಕಿ ಇದೆ.ತಾಲ್ಲೂಕು ಆಡಳಿತ ಮುಂಜಾಗ್ರತೆಯಾಗಿ ನದಿಯ ಎರಡೂ ತುದಿಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದು, ಸೇತುವೆ ಮೇಲೆ ನೀರು ಹರಿಯುವಾಗ ವಾಹನ ಚಲಾಯಿಸದಂತೆ ಸೂಚನೆ ನೀಡಿದೆ.ಮೂಡಿಗೆರೆ ತಾಲ್ಲೂಕಿನ ನಿರಂತರ ಮಳೆಯಿಂದಾಗಿ ಹೇಮಾವತಿ ನದಿ ನೀರಿನ ಮಟ್ಟ ಹೆಚ್ಚುತ್ತಿದ್ದು ಜೀವ ಕಳೆ ಬಂದಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.ಶೃಂಗೇರಿ ತಾಲ್ಲೂಕಿನ ಕೆರೆ ಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ಒಳಹರಿವು ಭಾರೀ ಏರಿಕೆಯಾಗಿದ್ದು, ನದಿ ಮೈದುಂಬಿಕೊಂಡು ವಿಶಾಲವಾಗಿ ಹರಿಯುತ್ತಿರುವ ನೋಟ ರೋಮಾಂಚನಗೊಳಿಸುತ್ತಿದೆ.
ಹಲವೆಡೆ ಅನಾಹುತ
ಭಾರೀ ಮಳೆಯಿಂದಾಗಿ ಜಯಪುರ ಸಮೀಪದ ಮಡುವಿನಕೆರೆ ಎಂಬಲ್ಲಿ ಮರವೊಂದು ಬಿದ್ದ ಪರಿಣಾಮ ಮನೆ ಮತ್ತು ಕೊಟ್ಟಿಗೆಗೆ ಹಾನಿಯಾಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಕಳಸದಿಂದ ಕುದುರೇಮುಖಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.ಜಿಲ್ಲೆಯ ಒಟ್ಟು 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 77 ಗ್ರಾಮಗಳನ್ನು ಅತೀವೃಷ್ಠಿ ಬಾಧಿತ ಪ್ರದೇಶಗಳೆಂದು ಗುರುತಿಸಿರುವ ಜಿಲ್ಲಾಡಳಿತ ಅಗತ್ಯ ಸಂದರ್ಭದಲ್ಲಿ ಎಲ್ಲಾ ರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದೆ.
ಮನೆಗಳಿಗೆ ಹಾನಿ:
ಮಲೆನಾಡಿನಲ್ಲಿ ಮಳೆ ಮಾತ್ರವಲ್ಲ ಗಾಳಿಯೂ ಬಲವಾಗಿ ಬೀಸುತ್ತಿದೆ. ಹೀಗಾಗಿ ಮರಗಳು, ವಿದ್ಯುತ್ ಕಂಬಗಳು ಕೆಲವೆಡೆ ಧರೆಗುರುಳಿವೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ- ತನಿಕೋಡು ರಸ್ತೆಯಲ್ಲಿ ಮರಗಳು ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು.ಮೂಡಿಗೆರೆ ತಾಲೂಕಿನ ಗೋಣಿಬೀಡು ಹಾಗೂ ಎನ್.ಆರ್.ಪುರ ತಾಲೂಕಿನ ಮಾಗುಂಡಿಯಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ.ಮಲೆನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಆದರೆ, ಜಿಲ್ಲೆಯ ಬಯಲುಸೀಮೆಯ ತಾಲೂಕುಗಳಾದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಆಗಾಗ ಸಾಧಾರಣ ಮಳೆಯಾಗುತ್ತಿದೆ.
ಚಿಕ್ಕಮಗಳೂರು: ಬೈಕ್‌ಗಳ ಕರ್ಕಶ ಶಬ್ಧ, ಪ್ರವಾಸಿಗರಿಂದ ಸ್ಥಳೀಯರಿಗೆ ಕಿರಿ ಕಿರಿ..!
ಕೆಮ್ಮಣ್ಣುಗುಂಡಿ ದೃಶ್ಯಕಾವ್ಯ
ಮುಂಗಾರಿನ ಹಿನ್ನೆಲೆಯಲ್ಲಿ ಕರ್ನಾಟಕದ ಊಟಿ ಎಂದೇ ಖ್ಯಾತಿ ಹೊಂದಿರುವ ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ಮಂಜುನಿಂದಾವೃತವಾದ ಹೊಸದೊಂದು ದೃಶ್ಯಕಾವ್ಯವೇ ಸೃಷ್ಠಿಯಾಗಿದೆ.ಝಡ್ ಪಾಯಿಂಟ್ನಲ್ಲಿ ನಿಂತು ನೋಡಿದರೆ ಸ್ವರ್ಗಕ್ಕೆ ಮೂರೇಗೇಣು ಎನ್ನುವ ಅನುಭವ ಆಗುತ್ತಿದೆ. ಮೈಕೊರೆಯುವ ಚಳಿ, ಕ್ಷಣವೂ ಬಿಡುವು ನೀಡದೆ ಸುರಿಯುತ್ತಿರುವ ಮಳೆಯಲ್ಲಿ ಕಾಲ ಕಳೆಯುವುದೇ ಅವಿಸ್ಮರಣೀಯ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.
ವಿಪತ್ತು ನಿರ್ವಹಣಾ ಸಭೆ :
ಚಿಕ್ಕಮಗಳೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಪತ್ತು ನಿರ್ವಹಣಾ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭವಿಸಬಹುದಾದ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಳೆಗಾಲದ ಹಿನ್ನೆಲೆಯಲ್ಲಿ ಯಾವುದೇ ಸಬೂಬು ಹೇಳದೇ ಮುನ್ನೆಚ್ಚರಿಕೆ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಮಳೆಯಿಂದ ಆಗಬಹುದಾದ ಹಾನಿಗಳನ್ನು ಸಾಧ್ಯವಾದಷ್ಟು ತಡೆಯಲು ಯತ್ನಿಸಬೇಕು ಮಳೆಗಾಲ ಮುಗಿಯುವವರೆಗೂ ಎಲ್ಲಾ ಅಧಿಕಾರಿಗಳು ಅಲರ್ಟ್ ಆಗಿರಬೇಕು ಎಂದು ಹೇಳಿದರು.ಮಳೆಗಾಲದಲ್ಲಿ ಪ್ರತಿವರ್ಷ ಹಾನಿ ಸಂಭವಿಸುವ ಸ್ಥಳಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಬೇಕು ಎಂದರು.ಮಳೆಗಾಲ ಮುಗಿಯುವವರೆಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.