
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಜೂ.04): ನಗರದ ಗಂಜ್ ಪ್ರದೇಶದಲ್ಲಿ ಮುಂಗಾರು ಹಬ್ಬದ ಸಂಭ್ರಮ ಜೋರಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಮುಂಗಾರು ಸಾಂಸ್ಕೃತಿಕ ಹಬ್ಬವೂ ಕಳೆದ 23 ವರ್ಷಗಳಿಂದ ನಿರಂತರವಾಗಿ ರಾಯಚೂರು ನಗರದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಬ್ಬಕ್ಕೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಚಾಲನೆ ನೀಡಿದ್ರು. ಮುಂಗಾರು ಹಬ್ಬ ಉದ್ದೇಶಿಸಿ ಮಾತನಾಡಿದ ಶಾಸಕ ಡಾ.ಶಿವರಾಜ್ ಪಾಟೀಲ್, ಮುನ್ನೂರು ಕಾಪು ಸಮಾಜವನ್ನು ಒಗ್ಗೂಡಿಸುವುದರ ಮೂಲಕ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ದೇಶವೇ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರಿಗೆ ಸಲ್ಲುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಬ್ಬ ಸ್ಥಗಿತಗೊಂಡಿತ್ತು. ಮುಂಗಾರು ಸಾಂಸ್ಕೃತಿಕ ಹಬ್ಬ ರಾಯಚೂರು ಜನತೆಗೆ ಉತ್ತಮ ನಿರ್ದೇಶನವಾಗಿದೆ.
ಮುಂಗಾರು ಸಾಂಸ್ಕೃತಿಕ ಹಬ್ಬ ರಾಯಚೂರು ಜಿಲ್ಲೆಯಲ್ಲಿಯೇ ಮಾದರಿ ಹಬ್ಬವಾಗಿದೆ. ಬೇರೆ ಯಾವುದೇ ಜಿಲ್ಲೆಗಳು ಇಂತಹ ಹಬ್ಬವೂ ಮುಂಗಾರು ವೇಳೆ ಕಾಣಲು ಸಿಗುವುದಿಲ್ಲ. ಇಂತಹ ಸಾಂಸ್ಕೃತಿಕ ಹಬ್ಬವನ್ನು ಮುನ್ನೂರು ಕಾಪು ಸಮಾಜ ಕಳೆದ 23 ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಮತ್ತು ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಆಯೋಜಿಸುತ್ತಾ ಬಂದಿದೆ. ಈ ಹಬ್ಬದಿಂದ ರಾಯಚೂರಿನಲ್ಲಿ ಒಂದು ಪಾರಂಪರಿಕಾ ಮೆರುಗು ಹೆಚ್ಚಾಗಿದೆ ಎಂದು ತಿಳಿಸಿದರು. ಇನ್ನೂ ಆಯೋಜಕರು ಹಾಗೂ ಮುಂಗಾರು ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಮಾತನಾಡುತ್ತಾ ಕಳೆದ 23 ವರ್ಷಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಮುನ್ನೂರು ಕಾಪು ಸಮಾಜದಂತೆ ಇತರೆ ಸಮಾಜಗಳು ಬಲಿಷ್ಠಗೊಳಿಷ್ಠಗೊಳ್ಳಬೇಕು. ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಮೈಸೂರು ಮಾದರಿಯಂತೆ ಮಾಡುವುದೇ ನನ್ನ ಗುರಿ ಎಂದರು.
ಗೃಹಲಕ್ಷ್ಮೀಗಾಗಿ ಅತ್ತೆ-ಸೊಸೆ ನಡುವೆ ಪೈಪೋಟಿ: ರೇಷನ್ ಕಾರ್ಡಿಗಾಗಿ ಕುಟುಂಬಗಳು ಇಬ್ಭಾಗ
ರಾಯಚೂರು ಜಿಲ್ಲೆಯನ್ನು ರಾಜ್ಯವೇ ಗುರುತಿಸುವಂತೆ ಮಾಡಬೇಕು ಪ್ರತಿ ವರ್ಷ ಈ ಹಬ್ಬಕ್ಕೆ 50 ಲಕ್ಷ್ಮ ಹಣ ವೆಚ್ಚ ಭರಿಸಿ ಅತ್ಯಂತ ವೈಭವದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದರು. ಅಧಿಕಾರ ದೊಡ್ಡದು ಅಲ್ಲ ಜನರ ಹೃದಯದಲ್ಲಿ ದೊರೆಯುವ ಪ್ರೀತಿ ದೊಡ್ಡದು ಅದಕ್ಕಾಗಿ ಜನರ ಮತ್ತು ರೈತರ ಪ್ರೀತಿಗಾಗಿ ಮುಂಗಾರು ಹಬ್ಬ ನಡೆದಿದೆ ಎಂದು ತಿಳಿಸಿದರು. ಇತ್ತ ಮುಂಗಾರು ಹಬ್ಬದಲ್ಲಿ ಭಾಗವಹಿಸಲು ರಾಜ್ಯದ ನಾನಾ ಕಡೆಗಳಿಂದ ಕಲಾತಂಡಗಳು ತಮ್ಮ ಕಲೆ ಪ್ರದರ್ಶನ ಮಾಡಿದ್ರು.
ಮುಂಗಾರು ಹಬ್ಬದಲ್ಲಿ ಜನವೋ ಜನ: ರಾಯಚೂರಿನ ಮುಂಗಾರು ಹಬ್ಬದಲ್ಲಿ ಎತ್ತುಗಳು ಬಾರದ ಕಲ್ಲು ಎಳೆಯುವುದು ನೋಡುವುದೇ ಒಂದು ಮಹಾ ಆನಂದ..ಈ ಎತ್ತುಗಳ ಬಾರದ ಕಲ್ಲು ಎಳೆಯುವ ಸ್ಪರ್ಧೆ ನೋಡಲು ಜನರು ಆಂಧ್ರ- ತೆಲಂಗಾಣದಿಂದ ರಾಯಚೂರಿಗೆ ಬರುತ್ತಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಬಂದ ಎತ್ತುಗಳು ಹಾಗೂ ತೆಲಂಗಾಣ, ಆಂಧ್ರ ಪ್ರದೇಶದಿಂದ ಒಟ್ಟು 12 ಜೋಡು ಎತ್ತುಗಳು ಸ್ಪರ್ಧೆಯಲ್ಲಿ ಪೈಪೋಟಿ ನಡೆದಿದ್ದವು. ಎತ್ತುಗಳ ಭಾರದ ಕಲ್ಲುನ್ನು ಎಳೆಯುವುದು ನೋಡಲು ಜನರು ನಿರೀಕ್ಷೆಗೂ ಮೀರಿ ಹರಿದು ಬಂದಿತ್ತು.
ಇನ್ನೂ ಆಂಧ್ರ ತೆಲಂಗಾಣದಿಂದ ಬಂದ ಭಾರಿ ಗಾತ್ರದ ಎತ್ತುಗಳು ನೋಡುಗರ ಮನ ಸೆಳೆದವು. ರೈತರು ಸುತ್ತು- ಮುತ್ತ ಕುಳಿತುಕೊಂಡು ಆ ಎತ್ತುಗಳ ಬಗ್ಗೆಯೇ ಚರ್ಚೆ ನಡೆಸಿದ್ರೆ, ಯುವಕರ ದಂಡು ಎತ್ತುಗಳು ಭಾರದ ಕಲ್ಲು ಎಳೆದುಕೊಂಡು ಹೋಗುತ್ತಿದ್ರೆ, ನೋಡಿ ಕೇಕೆ ಹಾಕಿ ಎಂಜಾಯ್ ಮಾಡಿದ್ರು.ಕೆಲ ಪ್ರೇಕ್ಷಕರು ಸಿಳ್ಳೆ, ಕೇಕೆ ಹಾಕುವ ಮೂಲಕ ರೈತರಿಗೆ ಹುರಿದುಂಬಿಸಿ ಪಂದ್ಯಕ್ಕೆ ಕಳೆತಂದರು. ಇನ್ನೂ ಬಾರ ಎಳೆಯುವ ಸ್ಪರ್ಧೆಯಲ್ಲಿ 12 ಜೋಡಿ ಎತ್ತುಗಳು 20 ನಿಮಿಷದಲ್ಲಿ ಅತಿ ಹೆಚ್ಚು ದೂರ ಕಲ್ಲು ಎಳೆಯುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿ, ಅತಿ ಹೆಚ್ಚು ದೂರ ಎಳೆದ ಎತ್ತುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಇತರೆ ಬಹುಮಾನ ಘೋಷಿಸಲಾಯಿತು.
ಮುಂಗಾರು ಹಬ್ಬಕ್ಕೆ ಮೈಸೂರು ಮಾದರಿಯಂತೆ ಮೆರುಗು ಮುನ್ನೂರು ಕಾಪು ಸಮಾಜ ಆಯೋಜಿಸಿದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಇಂದು ಕಾರ ಹುಣ್ಣಿಮೆ ಅಂಗವಾಗಿ ನಡೆದ ಮೆರವಣಿಗೆಯನ್ನು ಇಡೀ ನಗರವೇ ನಿಂತು ನೋಡುವಂತೆ ಮಾಡಿತು. ಮಾತಾ ಲಕ್ಷ್ಮಮ್ಮ ದೇವಿಯ ಉತ್ಸವ ಮೂರ್ತಿಯ ಈ ಅದ್ಧೂರಿ ಮೆರವಣಿಗೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 40ಕ್ಕೂ ಕಲಾ ತಂಡಗಳ ಮೆರವಣಿಗೆ ನಡೆಯಿತು. ಮೈಸೂರು ಜಂಬೂ ಸವಾರಿಯ ಮಾದರಿಯಲ್ಲಿ ನಡೆದ ಮೆರವಣಿಗೆ ಕಾಶಿ ಶ್ರೀಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು.
ಅಪಾರ ಜನಸ್ತೋಮದ ಮಧ್ಯೆ ವಿವಿಧ ಕಲಾ ತಂಡಗಳ ಪ್ರದರ್ಶನ ಅತ್ಯಂತ ಆಕರ್ಷಣೀಯವಾಗಿತ್ತು ಹಬ್ಬದ ರೂವಾರಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ನಿವಾಸದಲ್ಲಿ ಮುನ್ನೂರು ಕಾಪು ಸಮಾಜದ ಕುಲದೇವತೆ ಶ್ರೀ ಮಾತಾ ಲಕ್ಷ್ಮಮ್ಮ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ಕುಣಿತ, ನಂದಿ ಕುಣಿತ, ಕೋಲಾಟ, ಹಗಲು ವೇಷಧಾರಿ ಕುಣಿತ,ಆನೆ, ಕುದುರೆ ಮತ್ತು ಮದ್ದಲೆ, ಕರಡಿ ಮಜುಲು, ಹನುಮಾನವತಾರ, ಶಿವನವತಾರ, ಕುಂಭನೃತ್ಯ ಹಾಗೂ ಇತರೆ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.
ಆರೋಗ್ಯ, ಶಿಕ್ಷಣದ ವಲಸೆ ತಪ್ಪಿಸುವುದು ನನ್ನ ಗುರಿ: ಡಿ.ಕೆ.ಶಿವಕುಮಾರ್
ನಗರದ ಪ್ರಮುಖ ರಸ್ತೆಗಳಲ್ಲಿ ಜನರು ಸಾಲುಗಟ್ಟಿ ಕಾರಹುಣ್ಣಿಮೆಯ ಮೆರವಣಿಗೆ ನೋಡಿ ಸಂಭ್ರಮಿಸಿದರು. ಜಂಬೂ ಸವಾರಿಗೆ ಮಾದರಿ ಎನ್ನುವ ಅನೇಕ ವೈವಿಧ್ಯತೆಗಳೊಂದಿಗೆ ರಾಯಚೂರು ಮುಂಗಾರು ಹಬ್ಬದ ಮೆರವಣಿಗೆ ನಡೆಯಿತು. ಜನರ ನಿರೀಕ್ಷೆಗೂ ಮೀರಿ ಕಲಾ ತಂಡಗಳು ಮೆರವಣಿಗೆಯಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. ಮುಂಗಾರು ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ , ಮುನ್ನೂರು ಕಾಪು ಸಮಾಜ ಅಧ್ಯಕ್ಷ ಬೆಲ್ಲಂ ನರಸರಡ್ಡಿ, ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ, ಜಿ.ಶೇಖರರೆಡ್ಡಿ, ಭಂಗಿ ನರಸರೆಡ್ಡಿ, ಜೆ.ವಿ ಬಯ್ಯಣ್ಣ, ಗುಡ್ಸಿ ನರಸರೆಡ್ಡಿ, ಪಾಳ್ಯಂ ವಿನಯ ರೆಡ್ಡಿ, ಬಾಯಿಕಾಡ್ ಶೇಖರರೆಡ್ಡಿ, ಜಿಟಿರೆಡ್ಡಿ, ಮನೋಹರ್, ಜಿಟಿ ನರಸರೆಡ್ಡಿ, ಹಾಗೂ ಮಹೇಂದ್ರ ರೆಡ್ಡಿ, ಸೇರಿದಂತೆ ಹಲವರು ಭಾಗವಹಿಸಿದರು.