
ಕರಜಗಿ (ಜು.17): ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಲ್ಲಿ ಹಲವು ಜಲಮೂಲಗಳು ಬತ್ತಿದ್ದು, ರೈತರ ಜೀವನಾಡಿಯಾಗಿರುವ ಭೀಮಾ ನದಿ ಈ ಬಾರಿ ನೀರಿಲ್ಲದೆ ಬಿಕೋ ಎನ್ನುತ್ತಿದೆ.
ನದಿಯನ್ನು ಅವಲಂಬಿಸಿರುವ ಅಫಜಲಪುರ, ಜೇವರ್ಗಿ ಹಾಗೂ ಶಹಾಬಾದ್ ಭಾಗಗಳ ಸಾವಿರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಉಳಿಸಿಕೊಳ್ಳಲು ಮುಗಿಯುತ್ತ ಚಿತ್ತ ನೆಟ್ಟಿದ್ದಾರೆ. ಸಂಕಟದಲ್ಲಿರುವ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ಜೂನ್ ತಿಂಗಳಲ್ಲಿ ಸುರಿದ ಮಳೆಯಿಂದ ಸಂತಸಗೊಂಡ ರೈತರು ಬೀಜ, ರಸಗೊಬ್ಬರ, ಕ್ರಿಮಿನಾಶಕ ಇನ್ನಿತರ ಕೃಷಿ ಪರಿಕರಗಳನ್ನು ಖರೀದಿಸಿ ಬಿತ್ತನೆಗೆ ಸಜ್ಜುಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಲವು ರೈತರು ಬಿತ್ತನೆ ಕಾರ್ಯ ಮಾಡಿದರೆ ಇನ್ನೂ ಕೆಲವರು ಮತ್ತಷ್ಟು ಮಳೆಗಾಗಿ ಕಾಯುತ್ತಿದ್ದು. ಇದೀಗ ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಿದ ಭೂಮಿಗಳಲ್ಲಿ ಚಿಗುರಿದ ಬೆಳೆಯೂ ಒಣಗಿ ಹೋಗುತ್ತಿದೆ. ಇನ್ನೊಂದೆಡೆ, ಬಿತ್ತನೆ ಮಾಡದೆ ಇರುವ ರೈತರು ಕೃಷಿ ಬೀಜ ರಸಗೊಬ್ಬರಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಭೂಮಿಯನ್ನು ಬೀಳು ಬಿಟ್ಟಿದ್ದಾರೆ.
ನೀರಿಲ್ಲದೆ ಒಣಗಿದ ಕಬ್ಬು ಮಳೆ ಹಿನ್ನಡೆಯಾಗಿದ್ದರಿಂದ ನದಿ ತೀರದ ಜಮೀನುಗಳು ಹಾಗೂ ಅಫಜಲಪುರ, ಆಳಂದ, ಜೇವರ್ಗಿ ತಾಲೂಕುಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳೆದಿರುವ ಬಚಾವತ್ ಆಯೋಗದ ಪ್ರಕಾರ ''ಬರ'' ದ ನೀರು ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿರುವ ಕಬ್ಬು, ಉದ್ದು, ಹೆಸರು ಮತ್ತಿತ್ತರ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಸಾಲ ಮಾಡಿ ಕೃಷಿ ಆರಂಭಿಸಿದ್ದ ರೈತರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಕೈತಪ್ಪುವ ಆತಂಕದಲ್ಲಿದ್ದಾರೆ.
ಸೊನ್ನ ಬ್ಯಾರೇಜ್‌ನಲ್ಲಿ 0.248 ಟಿಎಂಸಿ ಮಾತ್ರ ನೀರು: ಮಹಾರಾಷ್ಟ್ರದಿಂದ ಹರಿವ ಭೀಮಾ ನದಿಯು ಅಫಜಲಪುರ, ಜೇವರ್ಗಿ, ತಾಲೂಕಿನ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರು ಒದಗಿಸುತ್ತದೆ.
ದಿಢೀರ್ ಮಳೆ ಬಂದಾಗ ಸೊನ್ನ ಬ್ರಿಡ್ಜ್ ಕಮ್ ಬ್ಯಾರೇಜ್‌ನಲ್ಲಿ ವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡದೆ ಇರುವುದರಿಂದ ಬೇಸಿಗೆಯಲ್ಲಿ ನೀರಿನ ಬವಣೆ ಹೆಚ್ಚಾಗಲು ಕಾರಣವಾಗಿದೆ. 3.166 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಬ್ಯಾರೇಜ್‌ನಲ್ಲಿ ಪ್ರಸ್ತುತ ಕೇವಲ 0.248 ಟಿಎಂಸಿ ನೀರು ಮಾತ್ರ ಉಳಿದಿದ್ದು ನದಿ ತೀರದ ಗ್ರಾಮಗಳಲ್ಲೂ ನೀರಿನ ಅಭಾವ ತೀವ್ರಗೊಂಡಿದೆ.
ಬಚಾವತ್ ಆಯೋಗ ಪ್ರಕಾರ ಬರದ ನೀರು: ಬಚಾವತ್ ಆಯೋಗದ ಪ್ರಕಾರ, ಮಹಾರಾಷ್ಟ್ರದ ಸೋಲಾಪುರದ ಉಜ್ಜನಿ ಬಳಿ ಭೀಮಾ ನದಿಗೆ ಅಡ್ಡ ಲಾಗಿ ಕಟ್ಟಿರುವ ಈ ಅಣೆಕಟ್ಟಿನಿಂದ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಮಳೆಗಾಲದಲ್ಲಿ ಪ್ರವಾಹ ಬಂದಾಗ ನೀಡುವ ನೀರು ಬೇಕಾದ ಸಂದರ್ಭದಲ್ಲಿ ಬಿಡುಗಡೆ ಆಗುವುದಿಲ್ಲ, ಈ ಭಾಗದಲ್ಲಿ 30ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿಲ್ಲ.
ರಾಜ್ಯದ ಬರಪೀಡಿತವಾಗಿ ನರಳುತ್ತಿದ್ದರು ಕೃಷಿ ಸಚಿವರೇ ಇಲ್ಲ, ಸರ್ಕಾರದಲ್ಲಿ ರೈತರ ಗೋಳು ಕೇಳುವವರು ಯಾರು ಇಲ್ಲ, ಸಿಎಂ ಕಾಟಾಚಾರಕ್ಕೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೂಡಲೇ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು. ಮಹಾರಾಷ್ಟ್ರ ಸರ್ಕಾರಕ್ಕೆ ಮನವೊಲಿಸಿ ನೀರು ಬಿಡುವಂತೆ ಒತ್ತಾಯಿಸಬೇಕು. ಇಲ್ಲದಿದ್ದರೆ ಬಚಾವತ್ ಆಯೋಗ ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಬೇಕು. ಆದರೆ, ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯವಹಿಸಿವೆ ಎನ್ನುತ್ತಾರೆ ರೈತ ಶ್ರೀಮಂತ ಬಿರಾದಾರ.