Depositors First: ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ ಹಣ

By Kannadaprabha News  |  First Published Dec 13, 2021, 8:52 AM IST

*   ಠೇವಣಿ ವಿಮಾ ರಕ್ಷಣ ಕಾಯ್ದೆಯಡಿ ತಲಾ 5 ಲಕ್ಷದಂತೆ 753.61 ಕೋಟಿ ಖಾತೆಗೆ ಜಮೆ
*   ಹಣ ವಿತರಣೆಗೆ ಪ್ರಧಾನಿ ಮೋದಿ ಚಾಲನೆ
*   ಬಾಕಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇನೆ: ಸಂಸದ ತೇಜಸ್ವಿ ಸೂರ್ಯ 
 


ಬೆಂಗಳೂರು(ಡಿ.13):  ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ನ(Guru Raghavendra Co-operative Bank) ಸುಮಾರು 33 ಸಾವಿರ ಠೇವಣಿದಾರರ ಕ್ಲೇಮುಗಳಿಗೆ ಠೇವಣಿ ವಿಮಾ ರಕ್ಷಣೆ ಕಾಯ್ದೆಯಡಿ ಒಟ್ಟು 753.61 ಕೋಟಿಯನ್ನು ಖಾತೆಗೆ ವಾಪಸ್‌ ಜಮೆ ಮಾಡಲಾಗಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ(Pralhad Joshi) ಹೇಳಿದ್ದಾರೆ. ಬ್ಯಾಂಕುಗಳ(Bank) ನಷ್ಟದಿಂದಾಗಿ ಠೇವಣಿ(Deposit) ಇರಿಸಿದ್ದ ಹಣವನ್ನು ಹಿಂಪಡೆಯಲು ಕಷ್ಟ ಅನುಭವಿಸುತ್ತಿರುವ ಠೇವಣಿದಾರರಿಗೆ 5 ಲಕ್ಷಗಳ ವಿಮೆ ಹಣ ವಿತರಿಸುವ ಯೋಜನೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಸಭಾಂಗಣದಿಂದ ವರ್ಚುವಲ್‌ ಆಗಿ ಪ್ರಹ್ಲಾದ ಜೋಶಿ ಭಾಗವಹಿಸಿದರು.

ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ ಜೊತೆಗೆ ರಾಜ್ಯದ ಬಾಗಲಕೋಟೆಯ ಮುಧೋಳ ಕೋ-ಆಪರೇಟೀವ್‌ ಬ್ಯಾಂಕ್‌, ವಿಜಯಪುರದ ಡೆಕ್ಕನ್‌ ಅರ್ಬನ್‌ ಕೋ- ಆಪರೇಟೀವ್‌ ಬ್ಯಾಂಕ್‌, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಿಲ್ಲಾತ್‌ ಕೋ-ಆಪರೇಟೀವ್‌ ಬ್ಯಾಂಕ್‌ಗಳ ಒಟ್ಟು 77,819 ಠೇವಣಿದಾರರಿಗೂ ಈ ಯೋಜನೆ ಅನ್ವಯಿಸಲಿದೆ. ಅವರು ಈ ಕಾರ್ಯಕ್ರಮದಡಿ ತಮ್ಮ ಕ್ಲೇಮುಗಳಿಗೆ ಹಣ ಮರುಪಾವತಿ ಪಡೆಯಲಿದ್ದಾರೆ ಎಂದವರು ತಿಳಿಸಿದರು.

Tap to resize

Latest Videos

Guru Raghavendra Bank: ಒಂದೇ ದಿನ ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ 400 ಕೋಟಿ ಸಂದಾಯ

ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟವರಿಗೆ ಬ್ಯಾಂಕ್‌ ಆ ಹಣ ನೀಡಲು ವಿಫಲವಾದರೆ ಅದರಿಂದ ಬ್ಯಾಂಕ್‌ಗಳು ಮತ್ತು ಠೇವಣಿದಾರರಿಗೆ ಸಮಸ್ಯೆ ಆಗುತ್ತಿತ್ತು. ಇಂತಹ ಖಾತೆಗಳಿಗೆ 1993ರಿಂದ 1 ಲಕ್ಷ ವಿಮೆ ನೀಡಲಾಗುತ್ತಿತ್ತು. ಈಗ ವಿಮೆ ಮೊತ್ತವನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಈ ಹಿಂದೆ ಬ್ಯಾಂಕ್‌ ದಿವಾಳಿ ಆಗುವ ಮುನ್ಸೂಚನೆ ಇದ್ದರೂ ಆ ಸಂದರ್ಭದಲ್ಲಿ ಹಣ ಹಿಂತೆಗೆಯಲು ಆರ್‌ಬಿಐ(RBI) ನಿರ್ಬಂಧ ಇತ್ತು. ಈ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಇನ್ನುಂದೆ ಬ್ಯಾಂಕ್‌ ದಿವಾಳಿ ಆದರೆ 90 ದಿನದಲ್ಲಿ ವಿಮೆ ಮೊತ್ತ ಸಿಗುವಂತೆ ಕಾನೂನು ಮಾಡಲಾಗಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ 69 ಸಾವಿರ ಠೇವಣಿದಾರರು ಇದ್ದರು. ಅದರಲ್ಲಿ 33 ಸಾವಿರ ಖಾತೆಗಳಿಗೆ .5 ಲಕ್ಷ ಜಮೆ ಮಾಡಲಾಗಿದೆ. ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಠೇವಣಿದಾರರಿಗೆ ವಿಮೆ ಹಣ ಬರುವಂತೆ ಮಾಡುವಲ್ಲಿ ಸಂಸದ ತೇಜಸ್ವಿ ಸೂರ್ಯ(Tejasvi Surya) ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ನ ಐವರು ಠೇವಣಿದಾರರಿಗೆ ಕೇಂದ್ರ ಸಚಿವರು ಹಾಗೂ ನೆರೆದ ಇತರೆ ಗಣ್ಯರು ಹಣ ಮರುಪಾವತಿ ಚೆಕ್‌ ವಿತರಿಸಿದರು. ಅತ್ತ ದೆಹಲಿಯಲ್ಲಿ ಪ್ರಧಾನಮಂತ್ರಿಗಳು ಗುರು ರಾಘವೇಂದ್ರ ಕೋ ಅಪರೇಟಿವ್‌ ಬ್ಯಾಂಕ್‌ನಲ್ಲಿ ಹಣ ಕಳೆದುಕೊಂಡ ಐವರಿಗೆ ಹಣ ಮರುಪಾವತಿಯ ಚೆಕ್‌ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್‌, ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಸೇರಿದಂತೆ ಬ್ಯಾಂಕುಗಳ ಅಧಿಕಾರಿಗಳು, ಠೇವಣಿದಾರರು ಉಪಸ್ಥಿತರಿದ್ದರು.

ಪೂರ್ಣ ಹಣ ಪಾವತಿಗಾಗಿ ಒತ್ತಾಯ: 

ಇದೇ ವೇಳೆ ಕೆಲ ಠೇವಣಿದಾರರು 5 ಲಕ್ಷಕ್ಕೂ ಹೆಚ್ಚು ಠೇವಣಿ ಹಣ ಇಟ್ಟವರ ಹಣವನ್ನು ಸಂಪೂರ್ಣವಾಗಿ ಮರು ಪಾವತಿ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಒತ್ತಾಯಿಸಿದ ಘಟನೆ ನಡೆಯಿತು.

ಕಾರ್ಯಕ್ರಮ ಮುಗಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಂಸದ ತೇಜಸ್ವಿ ಸೂರ್ಯ, ಜಿಲ್ಲಾಧಿಕಾರಿ ಮಂಜುನಾಥ್‌ ಅವರು ನಿರ್ಗಮಿಸುವಾಗ ಬ್ಯಾಂಕ್‌ನ ಕೆಲ ಠೇವಣಿದಾರರು ಅವರನ್ನು ಸುತ್ತುವರಿದು 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಹಣ ಇಟ್ಟವರ ಸಂಪೂರ್ಣ ಹಣ ಮರು ಪಾವತಿ ಮಾಡಿ, ಬ್ಯಾಂಕ್‌ನ ನಷ್ಟಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ಆಗುವಂತೆ ಮಾಡಿ ಮತ್ತು ಠೇವಣಿಯ ವಿಮೆ ಹಣ ಮಾತ್ರವಲ್ಲ ಠೇವಣಿಯ ಹಣವು ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

Guru Raghavendra Bank: ಗುರು ರಾಘವೇಂದ್ರ ಬ್ಯಾಂಕ್‌ ಗ್ರಾಹಕರಿಗೆ ಇಂದಿನಿಂದ ಹಣ ಮರುಪಾವತಿ ಆರಂಭ!

ಬಾಕಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇನೆ: ಸಂಸದ

ಅಮಾನತ್‌ ಬ್ಯಾಂಕ್‌ ದಿವಾಳಿ ಆಗಿ ಎಷ್ಟೋ ವರ್ಷಗಳಾಗಿದ್ದರೂ ಠೇವಣಿದಾರರಿಗೆ ಇನ್ನೂ ಹಣ ಸಿಕ್ಕಿಲ್ಲ. ಆದರೆ ಗುರು ರಾಘವೇಂದ್ರ ಬ್ಯಾಂಕ್‌ ತ್ವರಿತವಾಗಿ ಠೇವಣಿದಾರರ ಹಣ ಹಿಂತಿರುಗಿಸುತ್ತಿದೆ. ಠೇವಣಿದಾರರ ಬಾಕಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಶ್ರಮವಹಿಸುವುದಾಗಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಬೆಂಗಳೂರಿನಲ್ಲಿರುವ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ ಮತ್ತು ಕರ್ನಾಟಕದಲ್ಲಿ ಐದು ಕೇಂದ್ರಗಳಲ್ಲಿರುವ ಇತರ ನಾಲ್ಕು ಸಹಕಾರ ಬ್ಯಾಂಕ್‌ಗಳು ವಿಫಲವಾದ ನಂತರ ಭಾರತ ಸರ್ಕಾರವು(Government of India) ಹಣ ಕಳೆದುಕೊಂಡ ಗ್ರಾಹಕರಿಗೆ(Customers) ಕ್ಲೈಮು ಮೊತ್ತವನ್ನು ಗರಿಷ್ಠ 5 ಲಕ್ಷಗಳಿಗೆ ಏರಿಸಿತು ಎಂದು ಹೇಳಿದರು.
 

click me!