ಮಂತ್ರಿ ಡೆವಲಪರ್ಸ್ ನಿಂದ ಕೊಟ್ಯಂತರ ರು. ವಂಚನೆ : ಕೇಸ್ ದಾಖಲು

By Web DeskFirst Published Jul 30, 2019, 7:40 AM IST
Highlights

ಪದೇ ಪದೇ ಭಾರೀ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಮಂತ್ರಿ ಡೆವಲಪರ್ಸ್ ವಿರುದ್ಧವೂ ಕೂಡ ಕೊಟ್ಯಂತರ ರು. ವಂಚನೆ ಪ್ರಕರಣ ದಾಖಲಾಗಿದೆ. 

ಬೆಂಗಳೂರು [ಜು.30] :  ಫ್ಲ್ಯಾಟ್‌ ಕೊಡಿಸುವುದಾಗಿ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಸಂಸ್ಥೆ ಮಂತ್ರಿ ಡೆವಲಪರ್ಸ್‌ ಸಂಸ್ಥೆ ಸಾರ್ವಜನಿಕರಿಂದ ಕೋಟ್ಯಂತರ ರುಪಾಯಿ ಹಣ ಪಡೆದುಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಐವರು ಗ್ರಾಹಕರು ಕಂಪನಿಯ ವಿರುದ್ಧ ದೂರು ನೀಡಿದ್ದಾರೆ. ದೂರಿನ ಮೇರೆಗೆ ಮಂತ್ರಿ ಡೆವಲಪರ್ಸ್‌ ಪ್ರೈ.ಲಿ.ನ ನಿರ್ದೇಶಕರಾದ ಸುಶೀಲ್‌ ಪಾಂಡುರಂಗ ಮಂತ್ರಿ, ಪ್ರತೀಕ್‌ ಸುಶೀಲ್‌ ಮಂತ್ರಿ, ಸ್ನೇಹಲ್‌ ಸುಶೀಲ್‌ಮಂತ್ರಿ, ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಲಿ.ಅಧಿಕಾರಿಗಳು, ಮಂತ್ರಿ ವೆಬ್‌ ಸಿಟಿ ಗೃಹ ವಸತಿ ಯೋಜನೆಯ ಜಾಗದ ಮಾಲಿಕರು ಸೇರಿ 18 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಐವರು ನೀಡಿರುವ ಪ್ರಕರಣದಲ್ಲಿ ಸುಮಾರು ಮೂರು ಕೋಟಿ ವಂಚನೆಯಾಗಿದೆ. ಇದೇ ರೀತಿ ನೂರಾರು ಜನರಿಗೆ ವಂಚನೆ ಆಗಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಐವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕಳೆದ ಎರಡು ವರ್ಷದ ಹಿಂದೆ ಮಂತ್ರಿ ಡೆವಲಪರ್ಸ್‌ ಪ್ರೈ.ಲಿ.ನವರು ಪ್ಲ್ಯಾಟ್‌ ಕೊಡುವುದಾಗಿ ಜಾಹೀರಾತು ನೀಡಿದ್ದರು. ರಿಯಲ್‌ ಎಸ್ಟೇಟ್‌ನಲ್ಲಿ ಪ್ರತಿಷ್ಠಿತ ಕಂಪನಿಯಾಗಿದ್ದರಿಂದ ನೂರಾರು ಮಂದಿ ಪ್ಲ್ಯಾಟ್‌ ಖರೀದಿಸಿದ್ದರು.

ಫ್ಲ್ಯಾಟ್‌ ನೀಡುವ ಮೊದಲೇ ಸಂಸ್ಥೆ ಗ್ರಾಹಕರ ಬಳಿ ಹಂತ-ಹಂತವಾಗಿ ಎರಡು ವರ್ಷಗಳ ಹಿಂದೆಯೇ ಹಣ ಕಟ್ಟಿಸಿಕೊಂಡಿದೆ. ಅಲ್ಲದೆ, ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಲಿ. ಅಧಿಕಾರಿಗಳು ಮಂತ್ರಿ ಡೆವಲಪರ್ಸ್‌ ಅವರೊಂದಿಗೆ ಜೊತೆಗೂಡಿ ಆರ್‌ಬಿಐ ನಿಯಮ ಉಲ್ಲಂಘಿಸಿ ಸಾಲದ ಹಣವನ್ನು ಮಂತ್ರಿವೆಬ್‌ ಸಿಟಿ ಗೃಹ ವಸತಿ ಯೋಜನೆಗೆ ಹಂತ-ಹಂತವಾಗಿ ನಿರ್ಮಾಣವಾದಂತೆ ಸ್ಲಾಬ್‌ ರೀತಿಯಲ್ಲಿ ನೀಡದೆ, ಶೇ.98ರಷ್ಟುಲೋನ್‌ ಹಣವನ್ನು ಸಂಸ್ಥೆಗೆ ಒಮ್ಮೆಲೆ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ನೋಟು ಅಮಾನ್ಯೀಕರಣವಾದ ಬಳಿಕ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ ಎಂಬುದು ಗ್ರಾಹಕರ ಆರೋಪ. ವಂಚನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

click me!