ಸರ್ಕಾರ ಹಾಗೂ ಸಚಿವರ ವಿರುದ್ಧ ಎಚ್. ವಿಶ್ವನಾಥ್ ಆಕ್ರೋಶ

By Kannadaprabha NewsFirst Published Apr 21, 2021, 1:20 PM IST
Highlights

ವಿಧಾನ ಪರಿಷತ್ ಸದಸ್ಯ ಬಿಜೆಪಿ ಮುಖಂಡ ಎಚ್. ವಿಶ್ವನಾಥ್ ಸರ್ಕಾರ ಹಾಗೂ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ಹೆಚ್ಚಾಗುತ್ತಲೇ  ಇದೆ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. 

ಮೈಸೂರು (ಏ.21):  ಕೊರೋನಾ ಹೆಚ್ಚಾಗಲು ಜನರೇ ಕಾರಣವೆಂಬ ಆರೋಗ್ಯ ಸಚಿವ ಡಾ. ಸುಧಾಕರ್‌ ಹೇಳಿಕೆ ಸರಿಯಲ್ಲ. ಸರ್ಕಾರದ ಜವಾಬ್ದಾರಿ ಮಂತ್ರಿಯ ಬೇಜವಾಬ್ದಾರಿ ಹೇಳಿಕೆ ಇದು ಎಂದು ಬಿಜೆಪಿ ವಿಧಾನ ಪರಿಷತ್ತು ಸದಸ್ಯ ಎಚ್‌. ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹೆಚ್ಚಾಗಲು ಜನರೇ ಕಾರಣ ಅಂತೀರಲ್ಲ. ಹಾಗಿದ್ರೆ ನೀವು ಏನ್‌ ಮಾಡ್ತಿದ್ದೀರಾ? ಸಿಎಂ ಆಸ್ಪತ್ರೆಯಲ್ಲಿದ್ದಾರೆ ಸರಿ, ಮೂರು ಜನ ಡಿಸಿಎಂ ಏನ್‌ ಮಾಡ್ತಿದ್ದಾರೆ? ಅವರನ್ನ ಸುಮ್ಮನೆ ಡಿಸಿಎಂ ಮಾಡಿರೋದಾ ಎಂದು ಪ್ರಶ್ನಿಸಿದರು.

ಜನರ ಮೇಲೆ ಹೊಣೆ ಹಾಕಬಾರದು. ಒಬ್ಬ ಮಂತ್ರಿ ಜನ ಕಾರಣ ಅಂತಾರೆ, ಮತ್ತೊಬ್ಬ ಮಂತ್ರಿ ಬೇರೆ ರಾಜ್ಯದ ಪರಿಸ್ಥಿತಿ ನಮ್ಮಲ್ಲಿಲ್ಲ ಅಂತಾರೆ. ಜನ ಈಗಲೇ ಪರಿಪಾಟಲು ಪಟ್ಟಿದ್ದಾರೆ. ಬೆಡ್‌, ಆಕ್ಸಿಜನ್‌ ಸಿಗದೆ ಜನರು ಪರದಾಡುತ್ತಿದ್ದಾರೆ. ಇದಕ್ಕಿಂತಲು ಪರಿಸ್ಥಿತಿ ರಾಜ್ಯಕ್ಕೆ ಬರಬೇಕಾ? ನಾನು ಆಡಳಿತ ಪಕ್ಷದಲ್ಲಿ ಇದ್ದರು ಸರಿ. ಇದನ್ನು ನಾನು ಹೇಳದೆ ಇದ್ದರೆ ನನಗೆ ನಾನೇ ವಂಚನೆ ಮಾಡಿದಂತೆ ಆಗುತ್ತದೆ. ಸರ್ಕಾರ ಈಗಲಾದರು ಎಚ್ಚೆತ್ತುಕೊಳ್ಳಬೇಕು ಎಂದರು.

ಸರ್ಕಾರಿ ಕಚೇರಿಯಲ್ಲೇ ಕೊರೋನಾ ರೂಲ್ಸ್‌ಗಿಲ್ಲ ಕಿಮ್ಮತ್ತು..!

ಕ್ಯಾಬಿನೆಟ್‌ ಯಾಕೆ ಬೇಕು? : ರಾಜ್ಯದಲ್ಲಿ ತೀರ್ಮಾನ ತೆಗೆದುಕೊಳ್ಳೋದು ಮುಖ್ಯಮಂತ್ರಿ ಒಬ್ಬರೇ. ಹಾಗಾದರೆ ಕ್ಯಾಬಿನೆಟ್‌ ಯಾಕೆ ಬೇಕು? ಕ್ಯಾಬಿನೆಟ್‌ ಮಿನಿಸ್ಟರ್‌ಗಳೇ ಸರ್ಕಾರ. ಆದ್ರೆ ಇಲ್ಲಿ ಏನ್‌ ಆಗ್ತಿದೆ. ಕೊರೋನಾ ಬಗ್ಗೆ ರಾಜ್ಯಪಾಲರು ಮೀಟಿಂಗ್‌ ತೆಗೆದುಕೊಳ್ತಾರೆಂದು ಮಾಹಿತಿ ಇದೆ. ಚುನಾಯಿತ ಸರ್ಕಾರ ವಿಫಲವಾದಾಗ ಮಾತ್ರ ರಾಜ್ಯಪಾಲರು ಎಂಟ್ರಿ ಆಗ್ಬೇಕು. ಹಾಗಿದ್ರೆ ಸರ್ಕಾರ ವಿಫಲವಾಗಿದ್ಯಾ ಎಂದು ಅವರು ಪ್ರಶ್ನಿಸಿದರು.

2 ಸಾವಿರ ಹಾಸಿಗೆ ತಂದ್ರಲ್ಲ ಅದು ಏನಾಯ್ತು..? ಅದಕ್ಕೆ ಮಾಡಿದ ವ್ಯವಸ್ಥೆ ಏನಾಯ್ತು? ಡಬ್ಲ್ಯೂಎಚ್‌ಒ ಹೇಳಿದ್ರು, ನೀವ್‌ ಏನ್‌ ತಯಾರಿ ಮಾಡಿಕೊಂಡಿದ್ರಿ. ಕೊರೋನಾ ಮೊದಲ ಅಲೆ ಮುಗಿದ ಮೇಲೆ ಬರೀ ಬಿಲ್‌ ಮಾಡೋದ್ರಲ್ಲಿ ಕಾಲ ಕಳೆದ್ರಿ. ಜನರಿಗೆ ಸೇವೆ ನೀಡುವುದ್ರಲ್ಲಿ ಸರ್ಕಾರ ಸೋತಿದೆ ಎಂದು ಅವರು ಕಿಡಿಕಾರಿದರು.

ಬರೀ ಮೀಟಿಂಗ್‌ ಮಾಡ್ತೀರಾ..? ತೀರ್ಮಾನ ಏನಾಗಿದೆ ಹೇಳಿ. ಸಿಎಂ ಹಾಗೂ ಸಚಿವರು, ಡಿಸಿಎಂ ನಡುವೆ ಸಮನ್ವಯತೆ ಹೋಗಿದೆ. ಅದು ಹೋದ ಕಾರಣವೇ ಈ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಐಎಸ್‌ಎಸ್‌ ಅಧಿಕಾರಿಗಳು ಯಾವ ಮಂತ್ರಿಯ ಮಾತನ್ನ ಕೇಳ್ತಿಲ್ಲ. ಇನ್ನಾದರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪವರ್‌ ಕೊಡಬೇಕು. ನಿರ್ಧಾರ ತೆಗೆದುಕೊಳ್ಳುವ ಹಣಕಾಸು ವ್ಯವಸ್ಥೆ ಸರ್ಕಾರ ಮಾಡಿಕೊಡಬೇಕು ಎಂದು ಎಚ್‌. ವಿಶ್ವನಾಥ್‌ ಸರ್ಕಾರಕ್ಕೆ ಸಲಹೆ ನೀಡಿದರು.

click me!