Council Election Result : ಕಾಂಗ್ರೆಸ್‌ ಗೆಲುವಿನ ಹಿಂದೆ ಜೋಡೆತ್ತುಗಳಾದ ಸುಧಾಕರ್‌- ಕೊತ್ತನೂರು

By Kannadaprabha NewsFirst Published Dec 15, 2021, 1:16 PM IST
Highlights
  • ಕಾಂಗ್ರೆಸ್‌ ಗೆಲುವಿಗೆ ಹಿಂದಿರುವ ಶಕ್ತಿ ಜೋಡೆತ್ತುಗಳಾದ ಸುಧಾಕರ್‌- ಕೊತ್ತನೂರು  
  •  ವರ್ತೂರು, ಚಂದ್ರಾರೆಡ್ಡಿಯನ್ನು ಸೆಳೆದರೂ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿಲ್ಲ 

ಚಿಕ್ಕಬಳ್ಳಾಪುರ (ಡಿ.15):  ವಿಧಾನ ಪರಿಷತ್ತು ಚುನಾವಣೆಯಲ್ಲಿ(MLC Election) ಕಾಂಗ್ರೆಸ್‌ (Congress) ಅಭ್ಯರ್ಥಿ ಎಂ.ಎಲ್‌.ಅನಿಲ್‌ ಕುಮಾರ್‌ (Anil Kumar) ಗೆಲುವಿಗೆ ಜೋಡೆತ್ತು ಆಗಿ ಕೆಲಸ ಮಾಡಿದ್ದು ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ (MC Sudhakar) ಹಾಗೂ ಮತ್ತೊಬ್ಬರು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತನೂರು ಮಂಜುನಾಥ (Kottanuru Manjunath).  ಹೌದು, ಕಾಂಗ್ರೆಸ್‌ (Congress) ವಿಧಾನ ಪರಿಷತ್ತು ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಗೆಲುವಿನ ನಗೆ ಬೀರಲು ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ನಾಯಕರು ಎನ್ನುವ ಮಾತು ಆ ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದು ಸುಧಾಕರ್‌ ಹಾಗೂ ಕೊತ್ತನೂರು ಮಂಜುನಾಥ ಜೋಡೆತ್ತುಗಳಾಗಿ ಕಾಂಗ್ರೆಸ್‌ ಪರ ಬ್ಯಾಟಿಂಗ್‌ ಬೀಸಿದ್ದಕ್ಕೆ ಕಾಂಗ್ರೆಸ್‌ ಗೆಲುವಿನ ದಡ ಮುಟ್ಟಿದೆ ಎನ್ನುವ ರಾಜಕೀಯ (Politics) ವಿಶ್ಲೇಷಣೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈ ಇಬ್ಬರು ನಾಯಕರೇ ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ (Loksabha Election) ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕೋಲಾರ(Kolar) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಎಸ್‌.ಮುನಿಸ್ವಾಮಿಯನ್ನು ಗೆಲ್ಲಿಸುವ ಮೂಲಕ ಕಮಲ ಅರಳಲು ಕಾರಣರಾಗಿದ್ದರು. ಆದರೆ ವಿಧಾನ ಪರಿಷತ್ತು ಚುನಾವಣೆ ಘೋಷಣೆಗೂ ಮೊದಲೇ ಕಾಂಗ್ರೆಸ್‌ ನಾಯಕರು ಚಿಂತಾಮಣಿಯ ಸುಧಾಕರ್‌ ಹಾಗೂ ಕೊತ್ತೂನೂರು ಮಂಜುನಾಥರನ್ನು ಕಾಂಗ್ರೆಸ್‌ಗೆ ಸೆಳೆಯುವ ಮೂಲಕ ವಿಧಾನ ಪರಿಷತ್ತು ಚುನಾವಣೆಯಲ್ಲಿ ಪಕ್ಷದ ಗೆಲ್ಲುವಿಗೆ ತಂತ್ರ ರೂಪಿಸಿದ್ದರು. ಈ ಮೂಲಕ ಕಾಂಗ್ರೆಸ್‌ ಗೆಲುವಿನ ನಗೆ ಬೀರಲು ಜೋಡೆತ್ತುಗಳು ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ.

ವರ್ತೂರು ಬಂದರೂ ಲಾಭವಾಗಲಿಲ್ಲ

ಇನ್ನೂ ವಿಧಾನ ಪರಿಷತ್ತು ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚು ತಂತ್ರಗಾರಿಕೆ ಪ್ರಚಾರದ ಭರಾಟೆಯಲ್ಲಿ ಬಿಜೆಪಿ (BJP) ಮುಂದಿತ್ತು. ಅಲ್ಲದೇ ಅನ್ಯ ಪಕ್ಷಗಳಿಗೆ ಗಾಳ ಹಾಕಿದ ಪಕ್ಷಗಳಲ್ಲಿ ಬಿಜೆಪಿ ಮುಂಚೂಣಿಯಲ್ಲಿತ್ತು. ಕೋಲಾರ (Kolar) ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಬಂಗಾರಪೇಟೆಯ ಚಂದ್ರಾರೆಡ್ಡಿ ಹಾಗೂ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನು ಬಿಜೆಪಿ ಸೆಳೆದರೂ ಈ ಚುನಾವಣೆಯಲ್ಲಿ ಹೆಚ್ಚು ರಾಜಕೀಯ ಲಾಭ ಆಗದೇ ಇರುವುದು ಎದ್ದು ಕಾಣುತ್ತಿದೆ.

ಕಮಲದ ಕನಸು ಛಿದ್ರ :  ಎರಡೂ ಜಿಲ್ಲೆಗಳಲ್ಲಿ ರಾಜಕೀಯವಾಗಿ ಮತದಾರರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ವಿಧಾನ ಪರಿಷತ್ತು ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಸ್ಥಳೀಯ ಸಂಸ್ಥೆಗಳಲ್ಲಿನ ತನ್ನ ಕೋಟೆಯನ್ನು ಭದ್ರಪಡಿಸಿಕೊಂಡರೆ ಅದೃಷ್ಟದ ಗೆಲುವು ನಿರೀಕ್ಷಿಸಿದ್ದ ಬಿಜೆಪಿ ಕನಸು ಮತದಾರರು ಛಿದ್ರಗೊಳಿಸಿದ್ದಾರೆ. ಕಳೆದ ಬಾರಿ ಗೆಲುವಿನ ನಗೆ ಬಿದ್ದ ಜೆಡಿಎಸ್‌ ಮೂರನೇ ಸ್ಥಾನ ಕುಸಿದಿದೆ. 

ಹೇಳಿ ಕೇಳಿ ಕೋಲಾರ ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್‌ನ ಭದ್ರಕೋಟೆ. ಆದರೆ ಕಳೆದ ಬಾರಿ ಜೆಡಿಎಸ್‌ (JDS) ಕಾಂಗ್ರೆಸ್‌ ಒಳ ಜಗಳವನ್ನು ಲಾಭ ಮಾಡಿಕೊಂಡು ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ ಎರಡು ಜಿಲ್ಲೆಗಳಲ್ಲಿನ ನಾಯಕರು ಸಂಘಟಿತ ಹೋರಾಟ ನಡೆಸಿ ತನ್ನ ಕೋಟೆಯನ್ನು ಭದ್ರಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ (Chikkaballapura) ಹೊರತುಪಡಿಸಿದರೆ ಅಷ್ಟೊಂದು ರಾಜಕೀಯ (Politics) ಗಟ್ಟಿನೆಲೆ ಇಲ್ಲದೇ ಇದ್ದರೂ ಅದೃಷ್ಟದ ಗೆಲುವು ನಿರೀಕ್ಷಿಸಿದ್ದ ಬಿಜೆಪಿಗೆ ಈ ಫಲಿತಾಂಶ ಅಘಾತ ನೀಡಿದೆ. ಬಿಜೆಪಿ ನಾಯಕರಿಗೆ ಈ ಫಲಿತಾಂಶ ಬಿಗ್‌ ಶಾಕ್‌ ಕೊಟ್ಟಿದೆ.

ಕಳೆದ ಬಾರಿ ಗೆಲುವಿನ ನಗೆ ಬಿದ್ದ ಜೆಡಿಎಸ್‌ಗೆ (JDS)  ಈ ಚುನಾವಣೆ ಹೆಚ್ಚು ಸಾಕಷ್ಟುಅಘಾತ ಕೊಟ್ಟಿದೆ. ಖುದ್ದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿ ಹೋದರೂ ಕಳೆದ ಬಾರಿ ಗೆಲುವು ಸಾಧಿಸಿದ್ದ ಜೆಡಿಎಸ್‌ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಜೆಪಿ ತನ್ನ ರಾಜಕೀಯ ಪ್ರಭಾವ ಕಡಿಮೆ ಇದ್ದರೂ ಈ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಏರಿರುವುದು ಆ ಪಕ್ಷದಲ್ಲಿ ಸಮಾಧಾನಕ್ಕೆ ಕಾರಣವಾಗಿದೆ.

click me!