ಬೆಳಗಾವಿ: ಕ್ವಾರಂಟೈನ್‌ನಲ್ಲಿದ್ದವರ ಬಿಡುಗಡೆ, ಜಾರಕಿಹೊಳಿ ಆಕ್ರೋಶ

By Kannadaprabha NewsFirst Published Jun 4, 2020, 11:27 AM IST
Highlights

ಕ್ವಾರಂಟೈನ್‌ನಲ್ಲಿ ಇದ್ದವರನ್ನು ಸರ್ಕಾರದ ನಿಯಮದಂತೆ ದಿಢೀರ್‌ ಬಿಡುಗಡೆ ಮಾಡಿರುವುದರಿಂದಲೇ ಕೊರೋನಾ ವ್ಯಾಪಿಸಲು ಕಾರಣ| ಜನರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ ಎಂದ ಶಾಸಕ ಸತೀಶ ಜಾರಕಿಹೊಳಿ| ಕೊರೋನಾ ಸೋಂಕು ದೃಢವಾಗಿದ್ದರಿಂದಾಗಿ ದಡ್ಡಿ ಗ್ರಾಮ ಸಂಪೂರ್ಣ ಸೀಲ್‌ಡೌನ್‌| 

ಯಮಕನಮರಡಿ(ಜೂ.04): ಮುಂಬೈನಿಂದ ಬಂದ ವಲಸೆ ಕಾರ್ಮಿಕರನ್ನು ಕ್ಷೇತ್ರದಲ್ಲಿ ಕ್ವಾರಂಟೈನ್‌ನಲ್ಲಿದ್ದವರನ್ನು ಸರ್ಕಾರದ ಆದೇಶದ ಮೇರೆಗೆ ಬಿಡುಗಡೆ ಮಾಡಿರುವುದಕ್ಕೆ ಶಾಸಕ ಸತೀಶ ಜಾರಕಿಹೊಳಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ವಾರಂಟೈನ್‌ನಲ್ಲಿ ಇದ್ದವರನ್ನು ಸರ್ಕಾರದ ನಿಯಮದಂತೆ ದಿಢೀರನೆ ಬಿಡುಗಡೆ ಮಾಡಿರುವುದರಿಂದಲೇ ಕೊರೋನಾ ವ್ಯಾಪಿಸಲು ಕಾರಣವಾಗಿದ್ದು, ಜನರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಹಾಗೂ ಯಮಕನಮರಡಿ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ದಡ್ಡಿ ಗ್ರಾಮದಲ್ಲಿ ಕೊರೋನಾ ಸೋಂಕು ಮಂಗಳವಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ ಬುಧವಾರ ದಡ್ಡಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಶಾಸಕ ಸತೀಶ ಜಾರಕಿಹೊಳಿ ಅವರು, ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜತೆಗೆ ಕಂಟೋನ್ಮೆಂಟ್‌ ಝೋನ್‌ ಆಗಿ ಇದು ಒಳಪಡುವುದರಿಂದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಸೂಚನೆ ನೀಡಿದರು.

ಇಂಗ್ಲೆಂಡ್‌ನಲ್ಲಿ ಯೋಗದಿಂದ ಕೊರೋನಾ ಗೆದ್ದ ಬೆಳಗಾವಿ ಮೂಲದ ದಂಪತಿ

ಕೊರೋನಾ ಸೋಂಕು ದೃಢವಾಗಿದ್ದರಿಂದಾಗಿ ದಡ್ಡಿ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಕ್ಷೇತ್ರದಲ್ಲಿ ಸ್ವಚ್ಛತೆ ಕುರಿತು ತೀವ್ರ ನಿಗಾ ವಹಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಸರ್ಕಾರದ ತಪ್ಪು ನಿರ್ಧಾರಗಳಿಂದ ದಡ್ಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು ಕೊರೊನಾ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಈ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದರ ಮೂಲಕ ಜನರ ಅವಶ್ಯಕ ಸೌಲಭ್ಯಗಳನ್ನು ಒದಗಿಸಬೇಕು. ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

ಸಭೆಯಲ್ಲಿ ಹುಕ್ಕೇರಿ ತಹಶೀಲ್ದಾರ ಅಶೋಕ ಗುರಾಣಿ, ಪಿಎಸ್‌ಐ ರಮೇಶ ಪಾಟೀಲ, ಜಿಪಂ ಸದಸ್ಯ ಮನೀಷಾ ರಮೇಶ ಪಾಟೀಲ, ಪ್ರಮೇದ ರಗಶೆಟ್ಟಿ, ವಿಷ್ಣು ರೇಡೆಕರ್‌, ತಾನಾಜ ಸುಂಟಕರ, ಕಿರಣಸಿಂಗ ರಜಪೂತ, ಆರ್‌.ಕೆ.ದೇಸಾಯಿ, ಸಂಜು ಮೂಡಲಗಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
 

click me!