ಜೆಡಿಎಸ್ ಪಕ್ಷ ಸತ್ತು ಹೋಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತ್ಯುತ್ತರ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಸತ್ತು ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸತ್ತಂತೆ ಎಂದಿದ್ದಾರೆ.
ಮಂಡ್ಯ(ಆ.23): ರಾಜಕೀಯ ಪಕ್ಷಗಳು ಸತ್ತು ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸತ್ತಂತೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಪರೋಕ್ಷವಾಗಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದಲ್ಲಿ 5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸಚಿವ ಈಶ್ವರಪ್ಪ ಜೆಡಿಎಸ್ ಪಕ್ಷ ಸತ್ತು ಹೋಗಿದೆ ಎಂದು ಹೇಳಿಕೆ ನೀಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶಾಸಕರು, ಸಚಿವ ಈಶ್ವರಪ್ಪ ತಮ್ಮ ಹಿರಿತನಕ್ಕೆ ತಕ್ಕಂತೆ ಮಾತನಾಡಬೇಕು ಎಂದರು.
ರಾಜಕೀಯ ಪಕ್ಷಗಳು ಸತ್ತು ಹೋದರೆ ಪ್ರಜಾಪ್ರಭುತ್ವವೂ ಸತ್ತು ಹೋದಂತಾಗುತ್ತದೆ. ರಾಜಕೀಯ ಪಕ್ಷಗಳು ಉಳಿಯಬೇಕು. ಅಧಿಕಾರದಲ್ಲಿರುವರ ಕೆಲಸ ಕಾರ್ಯಗಳನ್ನು ಗಮನಿಸಿ ಅವುಗಳ ಸರಿ ತಪ್ಪುಗಳ ಬಗ್ಗೆ ಚರ್ಚೆ ಮಾಡುವುದಕ್ಕಾದರೂ ಬೇರೆ ಪಕ್ಷಗಳು ಇರಬೇಕು ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕಾಗಿದೆ. ಇಂತಹ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ:
ಮೈಸೂರು ರಿಂಗ್ ರಸ್ತೆಯಿಂದ ಹಂಪಾಪುರ, ಹುರಳಿ ಕ್ಯಾತನಹಳ್ಳಿ ಮಾರ್ಗವಾಗಿ 5 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ. ಚಿಕ್ಕಅಂಕನಹಳ್ಳಿ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮತ್ತೆ 1.5 ಕೋಟಿ ರು ಕಾವೇರಿ ನೀರಾವರಿ ನಿಗಮದ ವತಿಯಿಂದ ಅನುದಾನ ತರಲಾಗಿದೆ. ಗ್ರಾಮದ ಅಭಿವೃದ್ಧಿಗೆ ಇನ್ನೂ 1 ಕೋಟಿ ರು. ಅವಶ್ಯಕವಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ತಾಲೂಕಿನ ಪಿ.ಹಳ್ಳಿ ಗ್ರಾಮದ ರಸ್ತೆಯನ್ನು 1 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಶ್ರೀರಂಗಪಟ್ಟಣ ಸೇರಿ ಇನ್ನಷ್ಟು ಸ್ಮಾರಕಕ್ಕೆ ಯುನೆಸ್ಕೋ ಮಾನ್ಯತೆಗೆ ಅರ್ಜಿ
ಈ ವೇಳೆ ಸಾರ್ವಜನಿಕರು ಶಾಸಕರಿಗೆ ಅಹವಾಲುಗಳನ್ನು ಸಲ್ಲಿಸಿದರು. ಚಿಕ್ಕಅಂಕನಹಳ್ಳಿ ಗ್ರಾಮದ ವೃದ್ಧೆ ದೊಡ್ಡತಾಯಮ್ಮ ಅವರು ತಮ್ಮ ಪುತ್ರ ಪುನಿತ್ ಅಂಗವಿಕಲನಾಗಿದ್ದು ಆತನಿಗೆ ಸಹಾಯ ಮಾಡಿ ಎಂದು ಮನವಿ ಸಲ್ಲಿಸಿದರು. ಅರಸು ಯೋಜನೆಯಡಿ ಅರ್ಜಿ ಸಲ್ಲಿಸಿ, ಅವರಿಗೆ ಸಾಲ ದೊರೆಯುವಂತೆ ಮಾಡುತ್ತೇನೆ. ಅದರಿಂದ ವ್ಯಾಪಾರ ಮಾಡಿ ತಮ್ಮ ಜೀವನ ಕಟ್ಟಿಕೊಳ್ಳಿ ಎಂದು ಹೇಳಿದರು.
ಮಂಡ್ಯ: ಬದುಕಿರುವ ಮಗು ಸತ್ತಿದೆ ಎಂದ ವೈದ್ಯ..!
ಗ್ರಾಮದಲ್ಲಿ ಸ್ಮಶಾನ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಸ್ಮಶಾನ ಕಲ್ಪಿಸಿಕೊಡಿ ಎಂದು ಗ್ರಾಪಂ ಸದಸ್ಯಚಾಮುಂಡಯ್ಯ ಮನವಿ ಸಲ್ಲಿಸಿದರು. ಜಿಪಂ ಸದಸ್ಯೆ ಕಾವ್ಯಶಿವಕುಮಾರ್, ತಾಪಂ ಸದಸ್ಯೆ ಭಾರತಿ, ಗ್ರಾಪಂ ಅಧ್ಯಕ್ಷೆ ರತ್ನ ಶಿವಮಲ್ಲು, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಸದಸ್ಯ ಪುಟ್ಟಸ್ವಾಮಿ ಇದ್ದರು.