‘ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು : ನಂಬಿದ್ರೆ ಕೇಡು ಗ್ಯಾರಂಟಿ’

By Kannadaprabha News  |  First Published Jan 19, 2020, 10:19 AM IST

ಇವರಿಬ್ಬರೂ ಒಂದೇ ನಾಣ್ಯದ ಎರಡೂ ಮುಖಗಳು ಇಬ್ಬರನ್ನು ನಂಬಿದ್ರೆ ಕೇಡು ಗ್ಯಾರಂಟಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. 


ಮೂಡಿಗೆರೆ [ಜ.19]: ಅಮಿತ್‌ ಷಾ ಅವರು ದೇಶಕ್ಕೆ ಬಂದಿರುವ ನುಸುಳುಕೋರರನ್ನು ಗುಂಡಿಕ್ಕಿ ಕೊಲ್ಲುತ್ತೇವೆ ಎನ್ನುತ್ತಾರೆ. ಮತ್ತೊಂದು ಕಡೆ ಮೋದಿ ಹೇಳುತ್ತಾರೆ, ಪೌರತ್ವ ಕಾಯಿದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲವೆಂದು. ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು, ಇವರನ್ನು ನಂಬಿದರೆ ಕೆಡುವುದು ಗ್ಯಾರಂಟಿ ಎಂದು ಮಾಜಿ ವಿಧಾನ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಟೀಕಿಸಿದರು.

ಅವರು ಶನಿವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ಸಂರಕ್ಷಣಾ ದಿನಾಚರಣೆ ಹಾಗೂ ಕೇಂದ್ರ ಸರ್ಕಾರದ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌ ಮತ್ತು ಸಿಸಿಸಿ ಕಾಯಿದೆ ವಿರೋಧಿಸಿ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

Tap to resize

Latest Videos

ವಾಜಪೇಯಿ ಮತ್ತು ಅಡ್ವಾಣಿ ಅವರಿಗಿಂತಲೂ ಮೋದಿ ಮತ್ತು ಅಮಿತ್‌ ಷಾ ಅವರೇ ದೊಡ್ಡವರಾಗಿದ್ದಾರೆ. ಇವರಿಗೆ ಆಡಳಿತ ನಡೆಸುವುದೇ ಗೊತ್ತಿಲ್ಲ. ದೇಶ ಒಂದು ಕುಟುಂಬವಿದ್ದಂತೆ. ಆಹಾರ, ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಅನೇಕ ಮೂಲಭೂತ ಸಮಸ್ಯೆಗಳು ಇರುತ್ತದೆ. ಇಂತಹ ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟು ಗೋಡೆಗೆ ಸುಣ್ಣ ಹೊಡೆಯಲು ಮುಂದಾದರೆ ಸಮಸ್ಯೆ ಬಗೆಹರಿಯುವುದಿಲ್ಲ. ಭಾರತ ಸಂವಿಧಾನ ಪ್ರಜೆಗಳ ಇಚ್ಛೆಯಂತೆ ರೂಪಿತವಾಗಿದೆ. ಯಾವುದೇ ಸರ್ಕಾರ ಬಂದರೂ ಸಂವಿಧಾನದ ಆಶಯದಂತೆ ಆಡಳಿತ ನಡೆಸಬೇಕು. ಅದನ್ನು ಉಲ್ಲಂಘಿಸಿ ಆಡಳಿತ ನಡೆಸಲು ಯಾವ ಸರ್ಕಾರಕ್ಕೂ ಅಧಿಕಾರವಿಲ್ಲ ಎಂದು ಹೇಳಿದರು.

ಧರ್ಮ ಅವರವರ ಸ್ವಂತ ವಿಚಾರ. ಆದರೆ ದೇಶ ಎಲ್ಲ ಜಾತಿ, ಧರ್ಮದವರ ಸ್ವತ್ತು. ಪೌರತ್ವ ಕಾಯಿದೆಯನ್ನು ಒಂದು ಧರ್ಮಕ್ಕೆ 5 ವರ್ಷ, ಇನ್ನೊಂದು ಧರ್ಮಕ್ಕೆ 11 ವರ್ಷ ಭಾರತದ ಭೂಮಿಯಲ್ಲಿ ನೆಲೆಸಿದವರಿಗೆ ನೀಡಲಾಗುತ್ತದೆ ಎಂದು ತಾರತಮ್ಯ ಮಾಡಿರುವುದು ಸಂವಿಧಾನದ ವಿರೋಧವಲ್ಲವೇ? ಹೀಗೆ ಜನವಿರೋಧಿ ಶಾಸನ ಮಾಡಿದಾಗ ಇಡೀ ದೇಶದ ಜನರು ಬೀದಿಗೆ ಬೀಳುತ್ತಾರೆ. ಇತಿಹಾಸ ಮೆಲುಕು ಹಾಕಿದರೆ ಜನಶಕ್ತಿ ಮುಂದೆ ಬೇರೊಂದಿಲ್ಲ. ಜನ ದಂಗೆ ಎದ್ದರೆ ಗೆಲ್ಲೋದು ಜನರೇ ಎಂಬುದು ಅರ್ಥ ಮಾಡಿಕೊಂಡರೆ ಒಳ್ಳೆಯದು. ಇಲ್ಲವಾದರೆ ಸರ್ವನಾಶ ಖಂಡಿತ ಎಂದು ಕಿಡಿಕಾರಿದರು.

ಇಂತಹ ಯುಗಪುರುಷ ಪಡೆದ ಕರ್ನಾಟಕವೇ ಧನ್ಯ: ಈಶ್ವರಪ್ಪ, ಕುಮಾರಸ್ವಾಮಿ ವಾಕ್ಸಮರ.

ಮಾಜಿ ಸಭಾಪತಿ ಬಿ.ಎಲ್‌. ಶಂಕರ್‌ ಮಾತನಾಡಿ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರು ಆಹಾರ, ಉದ್ಯೋಗ ನೆಲೆ ಬಯಸಿ ವಲಸೆ ಹೋಗುವುದು ಸಹಜ. ಕೇವಲ ಮಾನವರು ಮಾತ್ರವಲ್ಲ. ಪ್ರಾಣಿ- ಪಕ್ಷಿಗಳು ಹೊರದೇಶಕ್ಕೆ ವಲಸೆ ಹೋಗಿಬರುತ್ತವೆ. ಇವರ ಕಾನೂನಿಗೆ ಪ್ರಾಣಿ-ಪಕ್ಷಿಗಳ ವಲಸೆ ತಡೆಯಲು ಸಾಧ್ಯವೇ? ಸಂವಿಧಾನದ ಮೂಲಭೂತ ಅಂಶ ತಿದ್ದುಪಡಿ ಮಾಡಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಏನೇ ಮಾತನಾಡಿದರೂ ಸಂವಿಧಾನದ ಒಂದು ಅಕ್ಷರ ಬದಲಾಯಿಸಲು ಸಾಧ್ಯವೇ ಇಲ್ಲ. ಕೆಲವೊಂದು ಬಾರಿ ವಿರೋಧಿಗಳಿಗೆ ಧನ್ಯವಾದಗಳು ಹೇಳಬೇಕಾಗುತ್ತದೆ. ಅವರಿಗೆ ಗೊತ್ತಿಲ್ಲದಂತೆ ಸಹಾಯ ಮಾಡಿ ನಮ್ಮೆಲ್ಲರ ಕೈಗೆ ರಾಷ್ಟ್ರಧ್ವಜ ಹಿಡಿಯುವಂತೆ ಮಾಡಿದ್ದಾರೆ. ಈ ದೇಶದಲ್ಲಿ ಸವಾಲಿಗೆ ಒಳಪಟ್ಟವರೆಲ್ಲರೂ ಹೋರಾಟಕ್ಕೆ ಮುಂದಾದರೆ ರಾಷ್ಟ್ರಧ್ವಜವನ್ನು ಅವರೇ ಕೈಗೆ ಕೊಟ್ಟಂತೆ ಎಲ್ಲವನ್ನೂ ಪಡೆಯಬಹುದು ಎಂದು ಹೇಳಿದರು.

ಇಂತಹ ಯುಗಪುರುಷ ಪಡೆದ ಕರ್ನಾಟಕವೇ ಧನ್ಯ: ಈಶ್ವರಪ್ಪ, ಕುಮಾರಸ್ವಾಮಿ ವಾಕ್ಸಮರ...

ಮಾಜಿ ಸಚಿವರಾರ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ವೈಎಸ್‌ವಿ ದತ್ತ, ಸಿಪಿಐಎಂಎಲ್‌ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಡಾ.ನಜ್ಮಾ ಮಾತನಾಡಿದರು.

ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಬಿ.ಎಸ್‌.ಜಯರಾಂಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಷಣಕಾರರಿಗೆ ಮಾತ್ರ ವೇದಿಕೆ ಮೇಲೇರುವ ಅವಕಾಶ ಮಾಡಿದ್ದು ವಿಶೇಷವಾಗಿತ್ತು.

ಸಮಿತಿ ಕಾರ್ಯಾಧ್ಯಕ್ಷ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಜಿ. ಸುರೇಂದ್ರಗೌಡ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾಕೀರ್‌ ಹುಸೇನ್‌, ಎಂ.ಪಿ.ಮನು, ಉಪಾಧ್ಯಕ್ಷರಾದ ಬಿಎಸ್‌ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್‌, ಮುಖಂಡರಾದ ಹೊಸಕೆರೆ ರಮೇಶ್‌, ಹಂಝಾ, ಎಂ.ಎಸ್‌. ಅನಂತ್‌, ಸಿ.ಕೆ. ಇಬ್ರಾಹಿಂ, ಮರಗುಂದ ಪ್ರಸನ್ನ, ಜಕಾರಿಯಾ, ಸಂಪತ್‌, ಅಂಜುಮಾನ್‌ ಕಮಿಟಿ ಅಧ್ಯಕ್ಷ ಹುಸೇನ್‌ ಬಾಷ ಸೇರಿದಂತೆ ಎಲ್ಲ ಮಸೀದಿ ಧರ್ಮಗುರುಗಳು ಕಮಿಟಿ ಅಧ್ಯಕ್ಷರು ಉಪಸ್ಥಿತರಿದ್ದರು.

click me!