'ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ'

By Kannadaprabha NewsFirst Published Feb 15, 2021, 10:35 AM IST
Highlights

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿಕೆಗೆ ಶಾಸಕ ರಾಘ​ವೇಂದ್ರ ಹಿಟ್ನಾಳ ತಿರು​ಗೇ​ಟು| ತಮಗೊಂದು ಟಿಕೆಟ್‌ ಸಿಗದವರು ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೊಡುವುದು ಹಾಸ್ಯಸ್ಪದ| ಬಿಜೆಪಿಯಲ್ಲಿ ಒಬ್ಬ ಕುರುಬರಿಗೆ ಲೋಕಸಭೆಗೆ ಟಿಕೆಟ್‌ ಕೊಡಲಾಗಿಲ್ಲ| 

ಕೊಪ್ಪಳ(ಫೆ.15): ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಲೋಕ​ಸಭಾ ಕ್ಷೇತ್ರ​ದ​ಲ್ಲಿ ಸ್ಪರ್ಧೆ ಮಾಡಿದರೆ ಅವರ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ವಿರೂಪಾಕ್ಷಪ್ಪ ಸೇರಿದಂತೆ ಯಾರಿಗೂ ಇಲ್ಲ. ಅವರನ್ನು ಅತ್ಯಧಿಕ ಲೀಡ್‌ನಿಂದ ಗೆಲ್ಲಿಸುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಕೊಪ್ಪಳದಲ್ಲಿ ಸ್ಪರ್ಧೆ ಮಾಡಿದರೆ ಅವರ ವಿರುದ್ಧ ನಾನೇ ಸ್ಪರ್ಧೆ ಮಾಡುವೆ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿಂಧನೂರಿನಲ್ಲಿ ಬಿಜೆಪಿ ಟಿಕೆಟ್‌ ಸಿಗದವರು ಸಿದ್ದರಾಮಯ್ಯ ಕುರಿತು ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಶೋಷಿತ ವರ್ಗ ಸೇರಿದಂತೆ ಎಲ್ಲ ವರ್ಗಗಳ ನೇತಾರರಾಗಿದ್ದಾರೆ. ಅವರ ಸರ್ಕಾರದ ಅವಧಿಯಲ್ಲಿ ಕೊಟ್ಟಯೋಜನೆಗಳನ್ನು ಈಗಿನ ಸರ್ಕಾರ ಮುಂದುವರಿಸಿದ್ದರೆ ಸಾಕಿತ್ತು. ಆದರೆ, ಆ ಎಲ್ಲ ಯೋಜನೆಗಳನ್ನು ಬಂದ್‌ ಮಾಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲಲಿದ್ದಾರೆ ಎಂದರು.

ತಾಕತ್ ಇದ್ರೆ ಮೋದಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಿ: ಸಂಸದರಿಗೆ ಮಾಜಿ ಸಚಿವ ಸವಾಲ್​

ತಮಗೊಂದು ಟಿಕೆಟ್‌ ಸಿಗದವರು ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೊಡುವುದು ಹಾಸ್ಯಸ್ಪದವಾಗುತ್ತದೆ. ಬಿಜೆಪಿಯಲ್ಲಿ ಒಬ್ಬ ಕುರುಬರಿಗೆ ಲೋಕಸಭೆಗೆ ಟಿಕೆಟ್‌ ಕೊಡಲಾಗಿಲ್ಲ. ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್‌ ಏನಾಯ್ತು? ಹೋರಾಟದಿಂದ ಹಿಂದೆ ಸರಿಯುವಂತೆ ಅಮಿತ್‌ ಶಾ ಈಶ್ವರಪ್ಪ ಅವರಿಗೆ ಸಂದೇಶ ಕಳಿಸಿದ್ದಾರೆ ಎನ್ನುವುದು ಮಾಧ್ಯಮದಲ್ಲಿಯೇ ಬಿತ್ತರವಾಗಿದೆ ಎಂದು ಹೇಳಿದರು.

ರಾಜಕಾರಣ:

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗೆ ಹೋರಾಟ ಮಾಡುತ್ತಿರುವುದು ಸರಿ. ಆದರೆ, ಕಾಗಿನೆಲೆ ಸ್ವಾಮೀಜಿಗಳು ಮಾತನಾಡುವ ಭರಾಟೆಯಲ್ಲಿ ಮೀಸಲಾತಿ ಕೊಟ್ಟರೆ ಮೋದಿ ಬೆಂಬಲಿಸುತ್ತೇವೆ ಎನ್ನುವುದು ರಾಜಕೀಯ ಮಾತಾಗುತ್ತದೆ. ಈ ರೀತಿ ಹೇಳುವುದು ಎಷ್ಟುಸರಿ ಎನ್ನುವುದನ್ನು ನನ್ನ ಬಾಯಿಂದ ಹೇಳಿಸಬೇಡಿ ಎಂದರು. ಹೀಗೆ ಹೇಳುತ್ತಲೇ ಕಾಗಿನೆಲೆ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದಾಗಿ ಹೇಳಿವುದಕ್ಕೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಹೀಗೆ ಹೇಳಿದ ಮೇಲೆ ನನಗೆ ಕನಕಗುರು ಪೀಠದ ಬಗ್ಗೆ ಅಪಾರವಾದ ಗೌರವ ಇದೆ ಎಂದೂ ಹೇಳಿದರು.

ತಮ್ಮದೇ ಸರ್ಕಾರ ಇದ್ದರೂ ಸಚಿವರು ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಮೊದಲು ಎಸ್ಟಿಮೀಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಿ. ಆಗ ನಾವೇ ನಮ್ಮ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಹೋರಾಟ ಮಾಡುತ್ತೇವೆ ಎಂದರು. ಈಗಾಗಲೇ ನಾಲ್ಕು ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಪ್ರಸ್ತಾವನೆ ಇದ್ದು, ಅದನ್ನು ಮೊದಲು ಜಾರಿ ಮಾಡಲಿ ಎಂದರು.

ಇನ್ನು ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಟಿಕೆಟ್‌ ಸಿಗದಂತಾಗಿದೆ. ಹೀಗಾಗಿ, ಅವರು ಈ ರೀತಿ ಮಾಡುತ್ತಿದ್ದಾರೆ. ಶಿಕಾರಿಪುರದಲ್ಲಿ ಸ್ವಂತ ಬಲದ ಮೇಲೆ ಗೆದ್ದು ಬರಲಿ ನೋಡೋಣ. ಅಲ್ಲಿ ಯಡಿಯೂರಪ್ಪ ಅವರ ಕೃಪೆಯಿಂದ ಗೆಲ್ಲುತ್ತಾರೆ. ಇಂಥವರು ಸಿದ್ದರಾಮಯ್ಯ ಅವರ ಕುರಿತು ಮಾತನಾಡುತ್ತಾರೆ ಎಂದರೇ ಏನರ್ಥ? ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಎಲ್ಲಿಯೇ ಸ್ಪರ್ಧೆ ಮಾಡಿದರೂ ಜಯ ಸಾಧಿಸುತ್ತಾರೆ. ಅವರನ್ನು ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಅನೇಕ ಕಡೆ ಸ್ಪರ್ಧೆ ಮಾಡುವಂತೆ ಅಹ್ವಾನ ಮಾಡುತ್ತಾರೆ. ವಯಸ್ಸಾದ ಮೇಲೆ ಅರಳು ಮರಳು ಎನ್ನುವಂತೆ ವಿರೂಪಾಕ್ಷಪ್ಪ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.

click me!