
ಬೆಳಗಾವಿ (ಜ.03): ಬೆಳಗಾವಿ ರಾಜಕಾರಣದಲ್ಲಿ ಮತ್ತೊಂದು ಸ್ಫೋಟಕ ವಿವಾದ ಸೃಷ್ಟಿಯಾಗಿದೆ. ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ಅವರು ಡಿಸಿಸಿ ಬ್ಯಾಂಕ್ ನೌಕರ ಹಾಗೂ ಹಾಲುಮತ ಸಮಾಜದ ಮುಖಂಡರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಸತ್ಯಪ್ಪ ಬಾಗನ್ನವರ್ ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸತ್ಯಪ್ಪ ಬಾಗನ್ನವರ್ ಅವರ ಆರೋಪದ ಪ್ರಕಾರ, 'ಹಾಲುಮತ ಸಮಾಜದ ಜಿಲ್ಲಾ ಯೂನಿಯನ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನೌಕರರನ್ನು ಶಾಸಕ ಲಕ್ಷ್ಮಣ ಸವದಿ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಶಾಸಕರು ಹಾಗೂ ಅವರ ಪುತ್ರ ಚಿದಾನಂದ ಸವದಿ ಇಬ್ಬರೂ ಸೇರಿ ನೌಕರನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಅಪ್ಪ-ಮಗನ ಹೊಡೆತಕ್ಕೆ ಬೆದರಿ ಸಂತ್ರಸ್ತ ನೌಕರ ಅಲ್ಲಿಂದ ಓಡಿ ಬಂದಿದ್ದಾನೆ. ಇದು ಲಕ್ಷ್ಮಣ ಸವದಿ ಅವರ ದುರಾಡಳಿತದ ಪರಮಾವಧಿ' ಎಂದು ಕಿಡಿಕಾರಿದ್ದಾರೆ.
ಲಕ್ಷ್ಮಣ ಸವದಿ ಶಾಸಕರಾಗಲು ಹಾಲುಮತ ಸಮಾಜದ ಬೆಂಬಲವೇ ಕಾರಣ. ಆದರೆ ಈಗ ಅದೇ ಸಮಾಜದ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. '2018ರಲ್ಲಿಯೂ ಇದೇ ರೀತಿಯ ದರ್ಪ ತೋರಿದ್ದಕ್ಕೆ ಜನ ಸವದಿಯನ್ನು ಮನೆಗೆ ಕಳುಹಿಸಿದ್ದರು. ಈಗ ಮತ್ತೆ ಅವರ ಅಹಂಕಾರ ಮುಗಿಲು ಮುಟ್ಟಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶಕ್ತಿ ಕುಂದಿರುವುದರಿಂದ ಇಂತಹ ಕೆಲಸಕ್ಕೆ ಇಳಿದಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರ ರಾಜಕೀಯ ಅಂತ್ಯ ಈಗ ಆರಂಭವಾಗಿದೆ' ಎಂದು ಬಾಗನ್ನವರ್ ವಾಗ್ದಾಳಿ ನಡೆಸಿದರು.
ಹಲ್ಲೆಗೊಳಗಾದ ವ್ಯಕ್ತಿಯ ಮೇಲೆಯೇ ಉಲ್ಟಾ ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಕೇಸ್ ದಾಖಲಿಸಲು ಶಾಸಕರ ತಂಡ ತಯಾರಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, 'ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಸ್ತಕ್ಷೇಪ ಮಾಡಬೇಕು. ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿಯನ್ನು ಕೂಡಲೇ ಬಂಧಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಲಕ್ಷ್ಮಣ ಸವದಿ ಅವರಿಗೆ ಅಥಣಿ ಬಿಟ್ಟು ಗ್ರಾಮೀಣ ಭಾಗದಲ್ಲಿ ಓಡಾಡುವುದು ಕಷ್ಟವಾಗಲಿದೆ' ಎಂದು ಎಚ್ಚರಿಕೆ ನೀಡಿದ್ದಾರೆ. ಅಥಣಿಯಲ್ಲಿ ಕಳೆದ 27 ವರ್ಷಗಳಿಂದ ಬೀಡುಬಿಟ್ಟಿರುವ ಶಾಸಕರ ಅಳಿಯನ ಹಸ್ತಕ್ಷೇಪದ ಬಗ್ಗೆಯೂ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಲಾಯಿತು.
ಈ ಬಗ್ಗೆ ಮಾತನಾಡಿರುವ ಡಿಸಿಸಿ ಬ್ಯಾಂಕ್ ನೌಕರ ನಿಂಗಪ್ಪ ಕರೆಣ್ಣವರ ಅವರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅವರ ಮಗ ನನ್ನನ್ನು ಮನೆಗೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಹಲ್ಲೆಯ ನಂತರ ಅಥಣಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ವೈದ್ಯರ ಸೂಚನೆ ಮೇರೆಗೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದೇನೆ ಎಂದು ತಿಳಿಸಿದರು. ಶಾಸಕ ಲಕ್ಷ್ಮಣ ಸವದಿ ಹಾಗೂ ಚಿದಾನಂದ ಸವದಿ ಇಬ್ಬರು ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮನೆಗೆ ಕರೆಸಿಕೊಂಡು ಹಲ್ಲೆ ಮಾಡುವುದಕ್ಕೆ ಕಾರಣವೇನೆಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.