Tumakuru: ಸಂಕಷ್ಟದ ನಡುವೆಯೂ ಈಡಿಗ ಸಮುದಾಯದಿಂದ ಸಾಧನೆ: ಶಾಸಕ ಕುಮಾರ್‌ ಬಂಗಾರಪ್ಪ

By Govindaraj S  |  First Published Sep 21, 2022, 10:55 PM IST

ಬಿಲ್ಲವ, ನಾಮಧಾರಿ, ಈಡಿಗ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈಡಿಗ ಸಮುದಾಯದಲ್ಲಿ ಸಂಕಷ್ಟಗಳ ನಡುವೆಯೂ ಸಾಧನೆ ಮಾಡಿದ ಅನೇಕ ಸಾಧಕರಿದ್ದಾರೆ. ಹಾಗಾಗಿ ನಮ್ಮದು ಹಿಂದುಳಿದ ಸಮಾಜ ಎಂಬ ಕೀಳಿರಿಮೆಯನ್ನು ನಾವೆಲ್ಲರೂ ಮರೆತು, ಶೈಕ್ಷಣಿಕ, ಸಾಮಾಜಿಕವಾಗಿ ಮುಂದುವರೆಯಲು ಪ್ರಯತ್ನಿಸಬೇಕಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ತಿಳಿಸಿದ್ದಾರೆ. 


ತುಮಕೂರು (ಸೆ.21): ಬಿಲ್ಲವ, ನಾಮಧಾರಿ, ಈಡಿಗ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈಡಿಗ ಸಮುದಾಯದಲ್ಲಿ ಸಂಕಷ್ಟಗಳ ನಡುವೆಯೂ ಸಾಧನೆ ಮಾಡಿದ ಅನೇಕ ಸಾಧಕರಿದ್ದಾರೆ. ಹಾಗಾಗಿ ನಮ್ಮದು ಹಿಂದುಳಿದ ಸಮಾಜ ಎಂಬ ಕೀಳಿರಿಮೆಯನ್ನು ನಾವೆಲ್ಲರೂ ಮರೆತು, ಶೈಕ್ಷಣಿಕ, ಸಾಮಾಜಿಕವಾಗಿ ಮುಂದುವರೆಯಲು ಪ್ರಯತ್ನಿಸಬೇಕಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ತಿಳಿಸಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘ, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ, ಜಗದ್ಗುರು ನಾರಾಯಣಗುರು ಸಮಾಜಟ್ರಸ್ಟ್‌, ಬ್ರಹ್ಮಶ್ರೀ ನಾರಾಯಣಗುರು ಜಿಲ್ಲಾ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ನಾರಾಯಣಗುರುಗಳ 168ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಸಮಾಜ ಬೆಳವಣಿಗೆ ಹೊಂದಬೇಕಾದರೆ, ಕೆಲ ಸಮುದಾಯಗಳ ಸಹಕಾರವೂ ಇರುತ್ತದೆ. ಅದರಲ್ಲಿಯೂ ತಳ ಸಮುದಾಯಗಳ ಬೆಳವಣಿಗೆಯಲ್ಲಿ, ಇತರೆ ಸಮುದಾಯಗಳ ಪಾತ್ರವನ್ನು ನಾವು ಕಡೆಗಣಿಸುವಂತಿಲ್ಲ. ಕಲಾವಿದರಾಗಿ ಡಾ.ರಾಜ್‌ಕುಮಾರ್‌, ಪುನಿತ್‌ ರಾಜಕುಮಾರ್‌, ರಾಜಕಾರಣಿಗಳಾಗಿ ಬಂಗಾರಪ್ಪ, ಆರ್‌.ಎಲ್‌.ಜಾಲಪ್ಪ, ಕಾಗೋಡು ತಿಮ್ಮಪ್ಪ ಸೇರಿದಂತೆ ನಮ್ಮ ಸಮುದಾಯದ ಹಲವರು ತಮ್ಮ ಜಾತಿ,ಭಾಷೆ ಎಲ್ಲವನ್ನು ಮೀರಿ ಬೆಳೆದವರು. ಅತಿ ಚಿಕ್ಕವಯಸ್ಸಿನಲ್ಲಿಯೇ ಅಪ್ಪು ಮಾಡಿದ ಸಾಧನೆ ನಾವ್ಯಾರು ಮರೆಯುವಂತಿಲ್ಲ. ಕುಲಕಸುಬಿಗೆ ಅಂಟಿಕೊಂಡಿದ್ದ ಸಮುದಾಯದಲ್ಲಿ ಉದ್ದಿಮೆದಾರರು, ಶಿಕ್ಷಣ ತಜ್ಞರನ್ನು ನಾವು ಕಾಣುತ್ತಿದ್ದೇವೆ. ಬಂಗಾರಪ್ಪ ಅವರ 20 ಅಂಶಗಳ ಕಾರ್ಯಕ್ರಮ ಇಡೀ ದೇಶದಲ್ಲಿಯೇ ಅತ್ಯುತ್ತಮ ಕಾರ್ಯಕ್ರಮಗಳು ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ ಎಂದು ಕುಮಾರಬಂಗಾರಪ್ಪ ತಿಳಿಸಿದರು.

Tap to resize

Latest Videos

ಐಕ್ಯತಾ ಯಾತ್ರೆ ಮೂಲಕ ದೇಶದಲ್ಲಿ ಬದಲಾವಣೆ ತರಬೇಕು: ಡಿಕೆಶಿ

ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ನಾರಾಯಣಗುರುಗಳು, ದೇವರ ನಾಡು ಎಂದು ಕರೆಯಿಸಿಕೊಳ್ಳುತಿದ್ದ ಕೇರಳದಲ್ಲಿ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರ ಎಂಬ ತತ್ವದ ಮೂಲಕ ಹಲವಾರು ಸಾಮಾಜಿಕ ಪರಿವರ್ತನೆಗಳನ್ನು ಮಾಡಿದರು. ಶಿಕ್ಷಣ ಮತ್ತು ಧಾರ್ಮಿಕ ಕ್ರಾಂತಿಯ ಮೂಲಕ ದೇವರ ನಾಡಿನಲ್ಲಿ ನಡೆಯುತ್ತಿದ್ದು, ಮೌಢ್ಯ, ಕಂದಾಚಾರ,ಆನಾಚಾರಗಳಿಗೆ ಕಡಿವಾಣ ಹಾಕಿ, ಅಲ್ಲಿನ ಜನರನ್ನು ಜಾಗೃತಗೊಳಿಸಿ, ಸಾಕ್ಷರರ ನಾಡಾಗಿಸಿದ ಕೀರ್ತಿ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದರು.

ನಾರಾಯಣಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿವಿ ಸಂಶೋಧನಾ ನಿರ್ದೇಶಕ ಡಾ.ರಮೇಶ್‌ ಸಾಲಿಯಾನ, ವಿದ್ಯೆಯಿಂದ ಬುದ್ದಿವಂತರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ತತ್ವದ ಮೂಲಕ ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸುಧಾರಣೆಗಳನ್ನು ಜಾರಿಗೆ ತಂದ ನಾರಾಯಣಗುರುಗಳು, ಹುಟ್ಟಿನಲ್ಲಿ ಬ್ರಾಹ್ಮಣರಾಗುವುದಕ್ಕಿಂತ, ವ್ಯಕ್ತಿತ್ವದಲ್ಲಿ ಬ್ರಾಹ್ಮಣರಾಗುವಂತೆ ಪ್ರೇರೆಪಿಸಿದವರು. ಮಹಿಳಾ ಸಬಲೀಕರಣ, ಶಿಶುಪಾಲನೆ ಸೇರಿದಂತೆ ಹಲವಾರು ಕ್ಷೇತ್ರಗಳ ಬಗ್ಗೆ ಅಪಾರವಾಗಿ ದುಡಿದಿದ್ದಾರೆ. ಡಾ.ರವೀಂದ್ರನಾಥ ಟ್ಯಾಗೋರ್‌, ಮಹಾತ್ಮಗಾಂಧಿ ಅವರು ನಾರಾಯಣಗುರುಗಳನ್ನು ಭೇಟಿಯಾಗಿ, ಅವರ ಮಾಡಿದ ಸಮಾಜಸೇವೆಯನ್ನು ಗುರುತಿಸಿ, ಗೌರವಿಸಿ, ಬ್ರಹ್ಮಶ್ರೀ ಎಂದು ಬಿರುದು ನೀಡಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಅಜಯಕುಮಾರ್‌ ವಹಿಸಿದ್ದರು. ದಿವ್ಯಸಾನಿಧ್ಯವನ್ನು ಸೋಲೂರಿನ ವಿಖ್ಯಾತನಂದ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಬಿಲ್ಲವ ಅಸೋಸಿಯೇಷನ್‌ನ ವೇದಕುಮಾರ್‌, ಜೆಪಿ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಲಕ್ಷ್ಮಿನರಸಿಂಹಯ್ಯ, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಎಂ.ಕೆ.ವೆಂಕಟಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಮೈಸೂರು ಡೈಯರ್‌ ಟೆಕ್‌ನ ಎಂ.ಡಿ.ಸದಾಶಿವ ಆರ್‌.ಅಮೀನ್‌, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್‌ ಮುಖಂಡ ಎನ್‌.ಗೋವಿಂದರಾಜು, ಪಾಲಿಕೆ ಉಪಮೇಯರ್‌ ಟಿ.ಕೆ.ನರಸಿಂಹಮೂರ್ತಿ, ಕನ್ನಡ ಸೇನೆಯ ಧನಿಯಕುಮಾರ್‌ ಮತ್ತಿತರರು ಪಾಲ್ಗೊಂಡಿದ್ದರು.

ಪಾವಗಡ: ಸ್ಫೋಟಕ ಬಳಸಿ ಗ್ರಾಪಂ ಕಚೇರಿ ಧ್ವಂಸಕ್ಕೆ ಯತ್ನ

ಒಬ್ಬ ವ್ಯಕ್ತಿಗೆ ಸ್ವಾಭಿಮಾನ ಮತ್ತು ಗೌರವಯುತ ಬದುಕು ಸಿಗಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಎಲ್ಲಿಯವರಗೆ ಅವಕಾಶ ವಂಚಿತ ಸಮುದಾಯಗಳು ರಾಜಕೀಯ ಅಧಿಕಾರ ಹಿಡಿಯುವುದಿಲ್ಲವೋ, ಅಲ್ಲಿಯವರೆಗೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ಕನ್ನಡಿಯೊಳಗಿನ ಗಂಟಾಗಲಿದೆ.
-ಕೆ.ಎನ್‌.ರಾಜಣ್ಣ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌

click me!