ಶಾಸಕ ಕೆ. ಷಡಕ್ಷರಿ ವಿರುದ್ಧ ಕೈ ಮುಖಂಡ ಲೋಕೇಶ್ವರ ಕಿಡಿ

By Kannadaprabha NewsFirst Published Mar 12, 2024, 10:47 AM IST
Highlights

ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸೇರಿ ನಾನು ಹಾಗೂ ನನ್ನ ಅಭಿಮಾನಿಗಳು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಶಾಸಕ ಕೆ. ಷಡಕ್ಷರಿಯವರನ್ನು ಗೆಲ್ಲಿಸಿದ್ದೇವೆ

 ತಿಪಟೂರು :  ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸೇರಿ ನಾನು ಹಾಗೂ ನನ್ನ ಅಭಿಮಾನಿಗಳು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಶಾಸಕ ಕೆ. ಷಡಕ್ಷರಿಯವರನ್ನು ಗೆಲ್ಲಿಸಿದ್ದೇವೆ. ಗೆದ್ದ ಮೇಲೆ ನನ್ನನ್ನು ಹಾಗೂ ಕಾರ್ಯಕರ್ತರನ್ನು ಅವರು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ರಾಜ್ಯ ಕಾಂಗ್ರೆಸ್ ಪಕ್ಷದ ವರಿಷ್ಠರ ಗಮನಕ್ಕೆ ತಂದರೂ, ಶಾಸಕರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬಾರಿ ಹೊಡೆತ ಬೀಳಲಿದೆ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕಿಬ್ಬನಹಳ್ಳಿಯ ಗುಡ್ಡದಪಾಳ್ಯದ ತಾತನ ಫಾರಂಹೌಸ್‌ನಲ್ಲಿ ನಡೆದ ಲೋಕೇಶ್ವರ ಅಭಿಮಾನಿಗಳು, ನೊಂದ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ಕಾರ್ಯಕರ್ತರನ್ನು ಶಾಸಕರು ದೂರ ಇಟ್ಟಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಕಷ್ಟಪಟ್ಟು ದುಡಿದು ಗೆಲ್ಲಿಸಿದರು. ನಾವು ಸಹಕಾರ ನೀಡದಿದ್ದರೆ ಅವರು ಮನೆಯಲ್ಲಿ ಕೂರಬೇಕಿತ್ತು ಎಂದು ತಾಲೂಕಿನ ಜನತೆಯೇ ಈಗ ಬಹಿರಂಗವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಷಡಕ್ಷರಿ ಜೊತೆ ನಾನು ಜೋಡೆತ್ತಿನಂತೆಯಲ್ಲಿ ದುಡಿದರೂ ಈಗ ಕಡೆಗಣಿಸುತ್ತಿದ್ದಾರೆ ಎಂದು ಆಪಾದಿಸಿದರು.

ಶಾಸಕರ ನಡೆಯಿಂದ ನಮ್ಮ ಕಾರ್ಯಕರ್ತರು ನೊಂದು ಹೋಗಿದ್ದಾರೆ. ತಾಲೂಕಿನಲ್ಲಿ ಬರ ತಾಂಡವವಾಡುತ್ತಿದೆ. ಕುಡಿವ ನೀರು, ಮೇವು, ವಿದ್ಯುತ್ ಸಮಸ್ಯೆ, ಕೊಬ್ಬರಿ ಖರೀದಿ ನಾಫೆಡ್‌ನಲ್ಲಿನ ಗೊಂದಲ ಸೇರಿದಂತೆ ನೂರಾರು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಈ ಯಾವ ಬಗ್ಗೆಯೂ ಶಾಸಕರಿಗೆ ಚಿಂತೆಯೇ ಇಲ್ಲ. ಇಂತಹ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ನಾವು ಜನರಿಂದ ಬೈಗುಳ ಕೇಳುವ ಸ್ಥಿತಿ ಬಂದಿದ್ದು, ಪಕ್ಷದ ವರಿಷ್ಠರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂದರು.

ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಎಸ್.ಪಿ. ಮುದ್ದಹನುಮೇಗೌಡರು ಅಭ್ಯರ್ಥಿಯಾಗಿದ್ದಾರೆ. ನಮಗೆಲ್ಲರಿಗೂ ಅವರ ಮೇಲೆ ಗೌರವವಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ನಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಇಲ್ಲಿ ಗೌರವ ಸಿಗುತ್ತಿಲ್ಲ. ಹಾಗಾಗಿ ಮುಂದೆ ಮುದ್ದಹನುಮೇಗೌಡರ ಪರವಾಗಿ ನಾವು ಕೆಲಸ ಮಾಡಬೇಕೆಂದರೆ ವರಿಷ್ಠರು ಆಗಮಿಸಿ ಸಮಸ್ಯೆ ಬಗೆಹರಿಸಬೇಕು. ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹಿಂದೆ ತಾಲೂಕಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ನೊಂದ ಕಾರ್ಯಕರ್ತರ ಸಭೆಯ ಬಗ್ಗೆ ಮಾಹಿತಿ ಪಡೆದು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಶಾಸಕ ಷಡಕ್ಷರಿಗೆ ತಿಳಿಸಿದ್ದರೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ರಾಜಕೀಯ ಸ್ಥಾನಮಾನ ನೀಡುತ್ತೇವೆಂದು ಹೇಳಿದ್ದ ಶಾಸಕರು ತಾತ್ಸಾರದಿಂದ ನೋಡುತ್ತಿದ್ದಾರೆ. ನಾವೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಮತ ಹಾಕುವ ಸಂದರ್ಭದಲ್ಲಿ ನೋಟಾಕ್ಕೆ ಮತ ಹಾಕುತ್ತೇವೆ ಎಂದು ಪಕ್ಷದ ರಾಜ್ಯ ಹೈಕಮಾಂಡ್‌ಗೆ ಈ ವೇಳೆ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದರು.

ಸಭೆಯಲ್ಲಿ ತಾಲೂಕಿನ 26 ಗ್ರಾಮ ಪಂಚಾಯಿತಿ ಹಾಗೂ ನಗರದ ೩೧ ವಾರ್ಡ್‌ಗಳ ಮತ್ತು ಅಕ್ಕಪಕ್ಕದ ತಾಲೂಕುಗಳ ಲೋಕೇಶ್ವರ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸೊಪ್ಪುಗಣೇಶ್, ಭಾರತಿ ಮಂಜುನಾಥ್, ಆಶೀಫಾ ಬಾನು, ಸೇರಿದಂತೆ ಲೋಕೇಶ್ವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

click me!