
ಗಂಗಾವತಿ (ಜು.11): ಆರ್‌ಎಸ್‌ಎಸ್ ಸೇರಿದಂತೆ ಹಿಂದು ಸಂಘಟನೆಗಳ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದಲ್ಲಿ ನಿಶಕ್ತ ಸಚಿವರಾಗಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಟೀಕಿಸಿದರು. ತಾಲೂಕಿನ ಆನೆಗೊಂದಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದಲ್ಲಿ ಸಂಪೂರ್ಣ ನಿಶಕ್ತರಾಗಿದ್ದಾರೆ ಎಂದು ಟೀಕಿಸಿದ ರೆಡ್ಡಿ, ಅವರು ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದನ್ನು ಬಿಟ್ಟು, ಕೇವಲ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಬೇಕು ಎನ್ನುವ ಚಟದಿಂದ ದಿನಾಲೂ ಆರ್‌ಎಸ್ಎಸ್ ಸಂಘಟನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏಕಾಏಕಿ ಇವರಿಗೆ ಪ್ರಮುಖ ಜವಾಬ್ದಾರಿ ನೀಡಿದ್ದು, ಆದರೆ ಇವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ.
ಇನ್ನು ಹದಿನೈದು ದಿನಗಳ ಕಾಲ ಇವರ ನಡವಳಿಕೆಯನ್ನು ಗಮನಿಸಿ, ತದನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಇವರ ಮಾನಸಿಕ ಸ್ಥಿತಿ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ತಪಾಸಣೆ ಒಳಪಡಿಸಬೇಕಿದೆ ಎಂದು ಲೇವಡಿ ಮಾಡಿದರು. ದೇಶದಲ್ಲಿ ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅವರ ಕಾಲದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್ಎಸ್) ಯಾರಿಗೂ ಅಲುಗಾಡಿಸಲು ಸಾಧ್ಯವಾಗಿಲ್ಲ.
ಇಂತಹ ಬಲಿಷ್ಠ ಸಂಘಟನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಶಾಸಕರು, ಕೇವಲ ರಾಜಕೀಯ ದ್ವೇಷವಲ್ಲ, ಬದಲಿಗೆ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇತ್ತೀಚೆಗೆ ನಡೆದ ಆರ್‌ಎಸ್ಎಸ್ ಪಥಸಂಚಲನ ವಿಚಾರವು ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಕಂಡು ಸಚಿವರಿಗೆ ದಿಗಿಲಾಗಿದೆ, ಅದೇ ಭಯದಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆಕ್ರೋಶವನ್ನು ವ್ಯಕ್ತಪಡಿಸಿದರು.