ಚಾಮುಂಡಿ ಬೆಟ್ಟದ ಧಾರಣಾ ಸಾಮರ್ಥ್ಯ ತಿಳಿಯದೆ ಕಟ್ಟಡ ಕಟ್ಟುವುದು ಅಪಾಯ: ಜಿ.ಟಿ. ದೇವೇಗೌಡ

By Kannadaprabha News  |  First Published Jan 24, 2023, 10:57 AM IST

ಚಾಮುಂಡಿ ಬೆಟ್ಟದ ಮೇಲೆ ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆಯಡಿ ಮಾಡಲು ಉದ್ದೇಶಿಸಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭ ಮಾಡುವ ಮೊದಲು ಭೂ ವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ಪರಂಪರೆ ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ. ವಿವಿಧ ತಜ್ಞರು ತಮ್ಮ ಅಭಿಪ್ರಾಯ ಕೊಡುವವರೆಗೆ ಬೆಟ್ಟದ ಮೇಲೆ ಯಾವುದೇ ರೀತಿಯ ಕೆಲಸ ಮಾಡಬಾರದು ಎಂದು ಸಂಬಂಧಿಸಿದವರಲ್ಲಿ ಆಗ್ರಹಿಸುವುದಾಗಿ ಹೇಳಿದ ಶಾಸಕ ಜಿ.ಟಿ. ದೇವೇಗೌಡ 


ಮೈಸೂರು(ಜ.24):  ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಮುನ್ನ ಚಾಮುಂಡಿಬೆಟ್ಟದ ಧಾರಣಾ ಸಾಮರ್ಥ್ಯ ತಿಳಿಯದೆ ಕಾಂಕ್ರೀಟ್‌ ಕಟ್ಟಡಗಳನ್ನು ಕಟ್ಟುವುದು ಅಪಾಯಕಾರಿ ಆಗುವ ಸಂಭವವಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಚಾಮುಂಡಿ ಬೆಟ್ಟದ ಮೇಲೆ ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆಯಡಿ ಮಾಡಲು ಉದ್ದೇಶಿಸಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭ ಮಾಡುವ ಮೊದಲು ಭೂ ವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ಪರಂಪರೆ ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ. ವಿವಿಧ ತಜ್ಞರು ತಮ್ಮ ಅಭಿಪ್ರಾಯ ಕೊಡುವವರೆಗೆ ಬೆಟ್ಟದ ಮೇಲೆ ಯಾವುದೇ ರೀತಿಯ ಕೆಲಸ ಮಾಡಬಾರದು ಎಂದು ಸಂಬಂಧಿಸಿದವರಲ್ಲಿ ಆಗ್ರಹಿಸುವುದಾಗಿ ಅವರು ಹೇಳಿದರು.

ಜಿಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿವಿಧ ತಜ್ಞರ ಜೊತೆಗೆ ಸಮಾಲೋಚಿಸಬೇಕು. ಪ್ರಸಾದ್‌ ಯೋಜನೆಯಡಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾಡಲು ಉದ್ದೇಶಿಸಿರುವ ಅಭಿವೃದ್ಧಿ ಕೆಲಸಗಳು ಬೆಟ್ಟದ ಪ್ರಾಕೃತಿಕ ಸಂರಚನೆ, ಸಹಜ ಸೌಂದರ್ಯ ಮತ್ತು ಧಾರ್ಮಿಕ ಪಾವಿತ್ರ್ಯಕ್ಕೆ ಕುಂದು ತರಬಹುದು ಎಂದು ಪರಿಸರ ಕಾಳಜಿವುಳ್ಳ ನಾಗರಿಕರು ಮತ್ತು ಈ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಭಕ್ತರು ಕಳವಳ ವ್ಯಕ್ತಪಡಿಸಿದ್ದಾರೆ.

Latest Videos

undefined

Mysuru: ವಸ್ತ್ರಸಂಹಿತೆ ಜಾರಿಗಿಂತ, ತಾವೇ ಸೂಕ್ತ ವಸ್ತ್ರಧರಿಸುವುದು ಒಳ್ಳೆಯದು: ಪ್ರತಾಪ್‌ ಸಿಂಹ

ಈ ಅಭಿವೃದ್ಧಿ ಕೆಲಸ ಮಾಡುವ ಮೊದಲು ತಜ್ಞರ ಅಭಿಪ್ರಾಯ ಪಡೆಯಬೇಕು. ಪರಿಸರಕ್ಕೆ ಪೂರಕ ಕೆಲಸಗಳನ್ನು ಮಾತ್ರ ಮಾಡಬೇಕು ಎಂದು ಒತ್ತಾಯಿಸುತ್ತಿರುವುದು ಮಾಧ್ಯಮಗಳ ಮೂಲಕ ತಿಳಿಯಿತು. ಚಾಮುಂಡಿ ಬೆಟ್ಟನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ಈ ವಿಷಯವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ಕೆಲವು ತಜ್ಞರು ಮತ್ತು ಪರಿಸರ ಪ್ರೇಮಿಗಳ ಜೊತೆಗೆ ಚರ್ಚಿಸಿದಾಗ ಇವರೆಲ್ಲ ವ್ಯಕ್ತಪಡಿಸುತ್ತಿರುವ ಅಭಿಪ್ರಾಯ ಸರಿ ಇದೆ ಎಂದು ನನಗೆ ಅನಿಸಿದೆ. ಚಾಮುಂಡಿ ಬೆಟ್ಟದ ಪ್ರಾಕೃತಿಕ ಸಂರಚನೆ ತುಂಬಾ ಸೂಕ್ಷ್ಮ ಮತ್ತು ದುರ್ಬಲವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗಿರುವಾಗ ಬೆಟ್ಟದ ಧಾರಣಾ ಸಾಮರ್ಥ್ಯ ತಿಳಿಯದೆ ಕಾಂಕ್ರೀಟ್‌ ಕಟ್ಟಡಗಳನ್ನು ಕಟ್ಟುವುದು ಅಪಾಯಕಾರಿ ಆಗುವ ಸಂಭವವಿದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಕ್ಷೇತ್ರದ ಶಾಸಕನಾಗಿ ಚಾಮುಂಡಿ ಬೆಟ್ಟದ ರಕ್ಷಣೆ ಮಾಡುವುದು ಮತ್ತು ಚಾಮುಂಡೇಶ್ವರಿ ದೇವಿಯ ಭಕ್ತರು ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗರಿಕರ ಭಾವನೆಯನ್ನು ಅರ್ಥ ಮಾಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯ ಎಂದು ಅವರು ಹೇಳಿದ್ದಾರೆ.

click me!