ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ವಾಸಿ ಎಂದು ಕಂಡು ಬಂದಾಗ ಗಂಟಲು ದ್ರವ ಪರೀಕ್ಷೆ ಮಾಡಿ ನೆಗಟಿವ್ ಎಂದು ದೃಢಪಡಿಸಿಕೊಂಡ ನಂತರವೇ ಬಿಡುಗಡೆ ಮಾಡಿ| ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಶಾಸಕ ಜಿ. ಕರುಣಾಕರರೆಡ್ಡಿ|
ಹರಪನಹಳ್ಳಿ(ಜು.18): ಕೋವಿಡ್ ಸೋಂಕು ದೃಢವಾಗಿ ಆಸ್ಪತ್ರೆಗೆ ದಾಖಲಾದ ನಂತರ ಕೆಲವು ದಿನಗಳಲ್ಲಿ ದ್ರವ ಪರೀಕ್ಷೆ ಮಾಡದೆ ಗುಣವಾಗಿದೆ ಎಂದು ರೋಗಿಯನ್ನು ಬಿಡುಗಡೆ ಮಾಡುವುದಕ್ಕೆ ಸ್ಥಳೀಯ ಶಾಸಕ ಜಿ. ಕರುಣಾಕರರೆಡ್ಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಪಟ್ಟಣದ ಮಿನಿವಿಧಾನ ಸೌಧದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ವಾಸಿ ಎಂದು ಕಂಡು ಬಂದಾಗ ಗಂಟಲು ದ್ರವ ಪರೀಕ್ಷೆ ಮಾಡಿ ನೆಗಟಿವ್ ಎಂದು ದೃಢಪಡಿಸಿಕೊಂಡ ನಂತರವೇ ಬಿಡುಗಡೆ ಮಾಡಿ ಮನೆಗೆ ಕಳಿಸಬೇಕು ಎಂದು ಅವರು ಹೇಳಿದರು.
ಆಗ ತಾಲೂಕು ವೈದ್ಯಾಧಿಕಾರಿ ಡಾ. ಶಿವಕುಮಾರ ಅವರು ಇಲ್ಲ ಸರ್, ಇಂದಿನ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಸೊಂಕಿತ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿ 7 ದಿನಗಳಲ್ಲಿ ರೋಗ ಲಕ್ಷಣಗಳು ಮಾಯವಾಗಿ ಮೂರು ದಿನದ ನಂತರ ದ್ರವ ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ, ಹಾಗೆ ಬಿಡುಗಡೆ ಮಾಡಬಹುದು ಎಂದು ಹೇಳಿದರು. ಶಾಸಕರು ಇಂತಹ ಪದ್ಧತಿ ತಪ್ಪು ಈ ಕುರಿತು ಬಳ್ಳಾರಿ ಜಿಲ್ಲಾಧಿಕಾರಿಯವರ ಬಳಿ ಮಾತನಾಡುವೆ ಎಂದು ಹೇಳಿದರು.
ಕೊರೋನಾದಿಂದ ಗುಣಮುಖರಾದವರ ಸಹಕಾರ ಕೋರಿದ ಶ್ರೀರಾಮುಲು..!
50 ಲಕ್ಷ ಹಗರಣ ತನಿಖೆಗೆ ಸೂಚನೆ
ಪಟ್ಟಣದ ಪ್ರಸಿದ್ಧ ಕೋಟೆ ಆಂಜನೇಯ ದೇವಸ್ಥಾನದಲ್ಲಿ . 50 ಲಕ್ಷ ಹಗರಣ ನಡೆದಿದೆ ಎಂಬ ಆರೋಪವಿದೆ. ಈ ಕುರಿತು ತನಿಖೆ ಮಾಡಿ ಎಂದು ಉಪವಿಭಾಗಾಧಿಕಾರಿಯವರಿಗೆ ಸೂಚಿಸಿದರು. ಕೋಟೆ ಆಂಜನೇಯ ದೇವಸ್ಥಾನದ ಬಳಿ ಹೋಲ್‌ಸೇಲ್ ತರಕಾರಿ ಅಂಗಡಿಗಳಲ್ಲಿ ಅನಧಿಕೃತ ಸಮಿತಿಯವರು ಹಣ ವಸೂಲಿ ಮಾಡುತ್ತಾರಂತೆ. ಆ ರೀತಿ ಹಣ ವಸೂಲಿ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಎಂದರಲ್ಲದೆ, ಬೇಕಾದರೆ ಪುರಸಭೆಯವರು ಅಥವಾ ಮುಜರಾಯಿ ಇಲಾಖೆಯವರು ಶುಲ್ಕ ವಸೂಲಿ ಮಾಡಿ ಎಂದು ಸೂಚಿಸಿದರು.
ಹಗರಿಶೀರನಹಳ್ಳಿ ಗ್ರಾಮ ಹೊರತುಪಡಿಸಿ ಉಳಿದಂತೆ ತಾಲೂಕಿನಲ್ಲಿ ಎಲ್ಲೂ ಕುಡಿಯುವ ನೀರಿನ ಕೊರತೆ ಇಲ್ಲ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಸಿದ್ದರಾಜು ಶಾಸಕರಿಗೆ ತಿಳಿಸಿದರು. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಆದರೆ ಈಗ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ಮಳೆಯ ಅವಶ್ಯಕತೆ ಇದೆ ಎಂದು ಕೃಷಿ ಸಹಾಯಕ ನಿರ್ದಶಕ ಮಂಜುನಾಥ ಗೊಂದಿ ತಿಳಿಸಿದರು.
ಉಪವಿಭಾಗಾಧಿಕಾರಿ ಪ್ರಸನ್ನಕುಮಾರ, ತಹಸೀಲ್ದಾರ ಅನಿಲ್ ಕುಮಾರ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಟಿಎಚ್ ಓ ಡಾ. ಶಿವಕುಮಾರ, ಸಿಪಿಐ ಕುಮಾರ, ಇಒ ಅನಂತರಾಜು, ಬಿಇಒ ಎಸ್.ಎಂ. ವೀರಭದ್ರಯ್ಯ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ, ಬಿಸಿಎಂ ಅಧಿಕಾರಿ ಭೀಮನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಆನಂದಡೊಳ್ಳಿನ ಹಾಜರಿದ್ದರು.