ತಾತ್ಕಾಲಿಕ ಟ್ರಕ್ ಟರ್ಮಿನಲ್, ಚೆಕ್‌ಪೋಸ್ಟ್ ಪರಿಶೀಲಿಸಿದ ಶಾಸಕ ದಢೇಸ್ಗೂರು| ಬತ್ತದ ವಹಿವಾಟಿಗೆ ತೆಲಂಗಾಣ ಮತ್ತು ತಮಿಳುನಾಡಿನಿಂದ ನಿತ್ಯ ನೂರಾರು ಲಾರಿಗಳು ಬರುತ್ತವೆ| ಆ ರಾಜ್ಯದಲ್ಲಿ ಕೊರೊನಾ ಸೋಂಕು ಅಧಿಕ ಇರುವುದರಿಂದ ಜನರಲ್ಲೂ ಭೀತಿ ಸಾಮಾನ್ಯ| ರಾಜ್ಯ ಸರಕಾರ ರಾಜ್ಯವನ್ನು ಪ್ರವೇಶ ಮಾಡುವ ಹೊರ ರಾಜ್ಯದ ಪ್ರತಿ ಲಾರಿಗಳ ಪರೀಕ್ಷೆ|
ಕಾರಟಗಿ(ಏ.26): ಬತ್ತ ವಹಿವಾಟಿಗೆ ನೆರೆ ರಾಜ್ಯಗಳಿಂದ ಬರುವ ಪ್ರತಿ ಲಾರಿಗಳಲ್ಲಿದ್ದವರ ಆರೋಗ್ಯ ಪರೀಕ್ಷಿಸಿ ವಾಣಿಜ್ಯ ಪಟ್ಟಣದೊಳಗೆ ಪ್ರವೇಶ ಮಾಡಲು ಅವಕಾಶ ನೀಡಲಾಗುತ್ತಿದ್ದು, ಉದ್ಯಮಿಗಳು, ವರ್ತಕರು ಮತ್ತು ರೈತರು ಆತಂಕ ಪಡುವ ವಾತಾವರಣವಿಲ್ಲ ಎಂದು ಶಾಸಕ ಬಸವರಾಜ್ ದಢೇಸ್ಗೂರು ಹೇಳಿದ್ದಾರೆ.
ಇಲ್ಲಿನ ಹೊರವಲಯದ ಸಿದ್ಧಲಿಂಗ ನಗರದ ಸಿಎಂಎನ್ ಕಾಲೇಜು ಮೈದಾನದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಟ್ರಕ್ ಟರ್ಮಿನಲ್‌ನ ಸ್ಥಳ ಮತ್ತು ಜಿಲ್ಲಾ ಗಡಿ ಪ್ರದೇಶದ ಚೆಕ್‌ಪೋಸ್ಟ್ ತಪಾಸಣಾ ಕೇಂದ್ರವನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.
ಕೋವಿಡ್-19 ವಿರುದ್ಧ ಹೋರಾಟ: ಕೊರೋನಾ ತಡೆಯಲು ಟ್ರಕ್ ಟರ್ಮಿನಲ್
ಬತ್ತದ ವಹಿವಾಟಿಗೆ ತೆಲಂಗಾಣ ಮತ್ತು ತಮಿಳುನಾಡಿನಿಂದ ನಿತ್ಯ ನೂರಾರು ಲಾರಿಗಳು ಬರುತ್ತವೆ. ಆ ರಾಜ್ಯದಲ್ಲಿ ಕೊರೊನಾ ಸೋಂಕು ಅಧಿಕ ಇರುವುದರಿಂದ ಜನರಲ್ಲೂ ಭೀತಿ ಸಾಮಾನ್ಯ. ಆದರೆ, ರಾಜ್ಯ ಸರಕಾರ ರಾಜ್ಯವನ್ನು ಪ್ರವೇಶ ಮಾಡುವ ಹೊರ ರಾಜ್ಯದ ಪ್ರತಿ ಲಾರಿಗಳ ಪರೀಕ್ಷೆ ಮಾಡುತ್ತಿದೆ ಎಂದರು.
ಕೊರೋನಾ ವೈರಸ್ ಹರಡುವ ಭೀತಿಯಿಂದ ಕಳೆದ ವಾರದಿಂದ ಪಟ್ಟಣದ ವರ್ತಕರು ತಮಿಳುನಾಡು ವ್ಯವಹಾರವನ್ನೆ ಸ್ಥಗಿತಗೊಳಿಸಿದ್ದರು. ವ್ಯಾಪಾರಿಗಳ ಅಭಿಪ್ರಾಯ ಅರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ, ಆರೋಗ್ಯ ತಪಸಣೆಯ ವ್ಯವಸ್ಥೆ ಮಾಡಿ, ಲಾರಿಗಳ ಮುಕ್ತ ಓಡಾಟಕ್ಕೆ ಅವಕಾಶ ಮಾಡಲಾಗಿದೆ. ಬತ್ತದ ವರ್ತಕರಿಗೆ ತಮಿಳುನಾಡು ಪ್ರಶಸ್ತ ಮಾರುಕಟ್ಟೆಯಾಗಿದ್ದು, ನಿತ್ಯವೂ ನೂರಾರು ಲಾರಿಗಳ ಬತ್ತ ಹೋಗುತ್ತಿದೆ. ಹೀಗಾಗಿ, ಈ ಕ್ರಮಕೈಗೊಳ್ಳಲಾಗಿದೆ.
ಲಾರಿಯ ಚಾಲಕ ಸಹಿತ ಜೊತೆಗಿರುವವರ ಆರೋಗ್ಯವನ್ನು ತಪಾಸಣಾ ಕೇಂದ್ರದಲ್ಲಿ ಕಡ್ಡಾಯವಾಗಿ ಪರೀಕ್ಷಿಸಲಾಗುತ್ತದೆ. ಬಳಿಕ ಅವರಿಗೆ ಪಾಸ್ ನೀಡಲಾಗುತ್ತದೆ. ನಿರಾಂತಕವಾಗಿ ವರ್ತಕರು ವ್ಯಾಪಾರ ಮಾಡಬಹುದು. ಈ ಭಾಗದ ಬತ್ತ ತಮಿಳುನಾಡಿಗೆ ರವಾನೆಯಾದರೆ ಮಾತ್ರ ರೈತರಿಗೆ ಒಳ್ಳೆಯ ಬೆಲೆ ದೊರೆಯಲಿದೆ. ಇದೇ ಸದುದ್ದೇಶದಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ವರ್ತಕರು ಎಂದಿನಂತೆ ಸಹಕರಿಸಿ ತಮಿಳುನಾಡಿನೊಂದಿಗೆ ಬತ್ತದ ವ್ಯವಹಾರ ನಡೆಸಬಹುದು. ವ್ಯಾಪಾರಿಗಳ ಇತರ ಬೇಡಿಕೆಗಳೇನಾದರೂ ಇದ್ದರೆ ಆದ್ಯತೆ ನೀಡಿ ಪರಿಹರಿಸಲಾಗುವುದು ಎಂದು ಶಾಸಕ ದಢೇಸ್ಗೂರು ಭರವಸೆ ನೀಡಿದರು.
ವಿಶೇಷ ಎಪಿಎಂಸಿ ಅಧ್ಯಕ್ಷ ಶರಣಪ್ಪ ಭಾವಿ ಮತ್ತು ಸದಸ್ಯ ನಾಗರಾಜ್ ಅರಳಿ ಮಾತನಾಡಿ, ಎಪಿಎಂಸಿಯು ಶಾಸಕರ ಸಹಕಾರದೊಂದಿಗೆ ವರ್ತಕರ, ರೈತರ ಬೇಡಿಕೆ, ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವುದು. ಪರ್ಯಾಯ ವ್ಯವಸ್ಥೆಯಿಂದ ರೈತರಿಗೆ, ವರ್ತಕರಿಗೆ ತುಂಬಾ ಅನುಕೂಲ ಆಗಲಿದೆ ಎಂದರು.
ಸ್ಥಳೀಯರ ಆಕ್ಷೇಪ:
ಸಿದ್ದಲಿಂಗ ನಗರದ ನಿವಾಸಿಗಳನೇಕರು ಲಾರಿ ನಿಲುಗಡೆಗೆ ಆಕ್ಷೇಪಿಸಿ, ಬೇರೆಡೆ ನಿಲುಗಡೆ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಬೇರೆ ವ್ಯವಸ್ಥೆ ಮಾಡಲಾಗುವುದು, ತಾತ್ಕಾಲಿಕವಾಗಿ ಈಗಿರುವಲ್ಲೆ ನಡೆಯಲಿದೆ ಎಂದು ಶಾಸಕ ದಢೇಸ್ಗೂರು ಸಮಾಧಾನಪಡಿಸಿದರು.
ಪುರಸಭೆ ಸದಸ್ಯ ಜಿ. ತಿಮ್ಮನಗೌಡ, ಉದ್ಯಮಿ ಗುರುರಾಜ್ ಶ್ರೇಷ್ಠಿ, ಎಪಿಎಂಸಿ ಸದಸ್ಯ ರಾಮಮೋಹನ್, ಶಿವಶರಣೇಗೌಡ, ಹಿರೇಬಸಪ್ಪ ಸಜ್ಜನ್, ಜೆ. ರಾಮರಾವ್, ಬಸವರಾಜ್ ಅಂಗಡಿ, ಮಲ್ಲೇಶಗೌಡ ಇದ್ದರು.