ಲಾಕ್‌ಡೌನ್‌ ಸಡಿಲಿಕೆ: ಬೈಕ್‌ ಸೀಜ್‌ ಮಾಡಲು ಪೊಲೀಸರಿಗೆ ಟಾರ್ಗೆಟ್‌!

By Kannadaprabha News  |  First Published Apr 26, 2020, 7:41 AM IST

ಲಾಕ್‌ಡೌನ್‌ ಸಡಿಲಿಕೆ, ಸಾರ್ವಜನಿಕರಿಗೆ ತಂದ ಗೊಂದಲ| ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್‌ಡೌನ್‌ ನಿಯಮಗಳು ಸಾರ್ವಜನಿಕರಿಗೆ ಗೊಂದಲ ಮೂಡಿಸಿವೆ| ಇದರ ಪರಿಣಾಮ ಸಾಮಾನ್ಯ ಜನರು ಪರಿತಪಿಸುವಂತಾಗಿದೆ| 


ಧಾರವಾಡ(ಏ.26): ಇನ್ನೇನು ಲಾಕ್‌ಡೌನ್‌ ಸಡಿಲಿಕೆಯಾಯ್ತು ಎಂದು ಹೊರ ಹೋದಿರಿ ಜೋಕೆ! ನಿಮ್ಮ ಬಳಿ ಪಾಸ್‌ ಇದ್ದರೂ, ಲಾಕ್‌ಡೌನ್‌ ಸಡಿಲಿಕೆಯ ನಿಯಮಗಳನ್ನು ಪಾಲಿಸಿದರೂ ಅಥವಾ ಅವಶ್ಯಕ ವಸ್ತುಗಳನ್ನು ತರಲು ಹೊರಟಿದ್ದರೂ ಯಾವ ಕ್ಷಣದಲ್ಲೂ ಪೊಲೀಸರು ನಿಮ್ಮ ವಾಹನ ಸೀಜ್‌ ಮಾಡಬಹುದು!

ಹೌದು. ಮೊದಲ ಲಾಕ್‌ಡೌನ್‌ ಯಶಸ್ವಿಗೊಳಿಸಿ ಬೇಷ್‌ ಎನಿಸಿಕೊಂಡ ಇದೇ ಪೊಲೀಸರು, ಇದೀಗ ಲಾಕ್‌ಡೌನ್‌ ಸಡಿಲಿಕೆಗೊಂಡು ಆಯಾ ಕ್ಷೇತ್ರದವರು ತಮ್ಮ ತಮ್ಮ ಕೆಲಸಗಳಿಗೆ ಹೊರ ಬೀಳುತ್ತಿದ್ದಂತೆ, ಕಾರಣ ಕೇಳದೇ ವಾಹನಗಳನ್ನು ವಶಪಡಿಸಿಕೊಂಡು ಠಾಣೆ ಎದುರು ನಿಲ್ಲಿಸುತ್ತಿರುವ ಸಾಕಷ್ಟು ಉದಾಹರಣೆಗಳು ಧಾರವಾಡದಲ್ಲಿ ನಡೆಯುತ್ತಿವೆ.

Latest Videos

undefined

ಲಾಕ್‌ಡೌನ್‌: ಅಕ್ಷಯ ತೃತೀಯ ದಿನದಂದು ಕೋಟಿ ಕೋಟಿ ನಷ್ಟ..!

ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್‌ಡೌನ್‌ ನಿಯಮಗಳು ಸಾರ್ವಜನಿಕರಿಗೆ ಗೊಂದಲ ಮೂಡಿಸಿವೆ. ಇದರ ಪರಿಣಾಮ ಸಾಮಾನ್ಯ ಜನರು ಪರಿತಪಿಸುವಂತಾಗಿದೆ. ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಕೃತವಾಗಿ ಪಡೆದುಕೊಂಡ ಪಾಸ್‌ ಇದ್ದರೂ ಕೆಲವು ಪೊಲೀಸರು ಹಲವು ಬೈಕ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ ಬಂದವರನ್ನು ಸಹ ಪ್ರಶ್ನಿಸದೇ ಅವರ ಬೈಕ್‌ಗಳನ್ನು ಸೀಜ್‌ ಮಾಡಿರುವ ಸಾಕಷ್ಟುಉದಾಹರಣೆಗಳಿದ್ದು, ಲಾಕ್‌ಡೌನ್‌ ಸಡಿಲಿಕೆಗಿಂತ ಮೊದಲಿನಂತೆ ಬಿಗಿಯಾಗಿದ್ದರೆ ಉತ್ತಮ ಎನ್ನುತ್ತಿದ್ದಾರೆ ಸಾರ್ವಜನಿಕರು. ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಮನೆಯಿಂದ ಹೊರ ಬರದಂತೆ ಜನರಿಗೆ ಲಾಠಿ ಏಟು ನೀಡಿದರೂ ತುಂಬ ಉತ್ತಮವಾಗಿ, ವ್ಯವಸ್ಥಿತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ ಪೊಲೀಸ ಇಲಾಖೆ ಅದರಲ್ಲೂ ಹು-ಧಾ ಅವಳಿ ನಗರದ ಪೊಲೀಸರು ಇದೀಗ ಲಾಕ್‌ಡೌನ್‌ ವಿಸ್ತರಣೆಯಾದ ನಂತರ ಬೈಕ್‌ ಹಾಗೂ ಇತರೆ ವಾಹನಗಳನ್ನು ಟಾರ್ಗೆಟ್‌ ಆಧಾರದ ಮೇಲೆ ವಶಕ್ಕೆ ಪಡೆಯುತ್ತಿದ್ದಾರೆ.

ಟಾರ್ಗೆಟ್‌...:

ಒಬ್ಬ ಪೊಲೀಸರಿಗೆ ದಿನಕ್ಕೆ ಇಷ್ಟು ವಾಹನಗಳನ್ನು ಹಿಡಿದು ತರಲೇಬೇಕೆಂಬ ಇಲಾಖೆಯ ಹಿರಿಯ ಅಧಿಕಾರಿಗಳ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಅನಗತ್ಯ ಓಡಾಡುವವರತ್ತ ಗಮನ ಹರಿಸುವುದಕ್ಕಿಂತ ಸಿಕ್ಕ-ಸಿಕ್ಕವರ ಬೈಕ್‌ ಸೀಜ್‌ ಮಾಡಲು ಪೊಲೀಸರು ಮುಂದಾಗಿದ್ದಾರೆ. ಅಲ್ಲದೇ, ನಿರಂತರವಾಗಿ ಕೆಲಸ ಮಾಡುತ್ತಿರುವ ಕಾರಣ ಒತ್ತಡಕ್ಕೆ ಒಳಗಾಗಿ ಕೆಲವು ಪೊಲೀಸರು ಜನರೊಂದಿಗೆ ಬೇಜವಾಬ್ದಾರಿಯಿಂದ ಸಹ ವರ್ತಿಸುತ್ತಿದ್ದಾರೆ.

ಅಪೋಲೋ ಮೆಡಿಕಲ್‌ ಶಾಪ್‌ನಿಂದ ಬಂದು ತರಕಾರಿ ತೆಗೆದುಕೊಂಡು ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಕೀಲಿ ಕಸಿದುಕೊಂಡ ಪೊಲೀಸ್‌ ನನ್ನ ಮನವಿ ಕೇಳದೇ ಬೈಕ್‌ ತೆಗೆದುಕೊಂಡು ಹೋದರು. ಇನ್ನು ನನ್ನ ಬೈಕ್‌ನಲ್ಲಿ ತರಕಾರಿ ಹಾಗೆಯೇ ಡಿಕ್ಕಿಯಲ್ಲಿದೆ. ಬೇರೆ ದಾರಿಯೇ ಇಲ್ಲದಾಗಿ ಎರಡು ಕಿ.ಮೀ. ದೂರದ ಪೊಲೀಸ್‌ ಠಾಣೆಗೆ ನಡೆದುಕೊಂಡು ಬಂದು ನೋಡುವಷ್ಟರಲ್ಲಿ ಬೈಕ್‌ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಲಾಕ್‌ಡೌನ್‌ ಮುಗಿದ ನಂತರ ಅದು ಮೇ 3 ಆಗಬಹುದು ಅಥವಾ ವಿಸ್ತರಣೆಯೂ ಆಗಬಹುದು. ನಂತರ ನ್ಯಾಯಾಲಯದ ಮೂಲಕ ಬೈಕ್‌ ಬಿಡಿಸಿಕೊಳ್ಳಬೇಕು. ನನಗೇನು ಮಾಡಬೇಕು ತಿಳಿಯುತ್ತಿಲ್ಲ. ಸುಮ್ಮನೆ ಎಂದೂ ಹೊರ ಬಿದ್ದ ವ್ಯಕ್ತಿ ನಾನಲ್ಲ ಎಂದು ಸಾಧನಕೇರಿ ನಿವಾಸಿಯೊಬ್ಬರು ಪತ್ರಿಕೆ ಎದುರು ಅಲವತ್ತುಕೊಂಡರು.

ಈಗ ಆರ್ಥಿಕ ಚಟುವಟಿಕೆ ಆರಂಭಿಸಿ ಎಂದು ಹೇಳಿ ಪೊಲೀಸರಿಂದ ಕಿರಿಕಿರಿ ಅನುಭವಿಸುವುದು ಯಾರಿಗೂ ಬೇಡ ಎನ್ನುತ್ತಾರೆ ಕಟ್ಟಡ ವಸ್ತುಗಳನ್ನು ಸಾಗಿಸುವ ಲಾರಿಯ ಮಾಲೀಕರೊಬ್ಬರು. ನಮಗೆ ಇಷ್ಟು ಬೈಕ್‌ ಹಿಡಿಯಲೇಬೇಕೆಂಬ ಟಾರ್ಗೆಟ್‌ ಇದೆ. ಅಷ್ಟು ವಾಹನಗಳನ್ನು ಹಿಡಿದು ಸ್ಟೇಶನ್‌ಗೆ ತರಲೇಬೇಕು. ಪಾಸ್‌ ಇದ್ದವರನ್ನು ಬಿಡುತ್ತಿದ್ದೇವೆ. ಜನರಿಗೆ ಹಿಂಸೆ ಮಾಡಬೇಕೆಂಬ ಆಶಯ ನಮಗೂ ಇಲ್ಲ. ಆದರೆ, ಪರಿಸ್ಥಿತಿ ನಮ್ಮಿಂದ ಹಾಗೆ ಮಾಡಿಸುತ್ತಿದೆ. ಜನರೂ ಪರಿಸ್ಥಿತಿ ಅರಿತು ಮನೆಯಲ್ಲಿರಬೇಕು ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು.

click me!