'ಸ್ವಾತಂತ್ರ್ಯದ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತದೆ ಎಂದು ಗಾಂಧೀಜಿ ಹೇಳಿದ್ದರು'

By Kannadaprabha NewsFirst Published Feb 16, 2020, 12:49 PM IST
Highlights

ಕಾಂಗ್ರೆಸ್‌ ದೇಶದ ಕ್ಷಮೆ ಕೇಳಲಿ: ಶಾಸಕ ಯತ್ನಾಳ| ಕಾಂಗ್ರೆಸ್‌ನದು ಹೊಂದಾಣಿಕೆ ರಾಜಕಾರಣ|ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಹೋರಾಟ ಮಾಡಿಲ್ಲ|ಭಾರತಕ್ಕೆ ಸ್ವಾತಂತ್ರ್ಯ ತಡವಾಗಿ ಸಿಗಲು ಕಾಂಗ್ರೆಸ್ಸಿಗರೇ ಕಾರಣ: ಯತ್ನಾಳ|

ವಿಜಯಪುರ(ಫೆ.16): ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಹೋರಾಟ ಮಾಡಿಲ್ಲ. ಕಾಂಗ್ರೆಸ್‌ನವರು ಹೊಂದಾಣಿಕೆ ರಾಜಕಾರಣ ಮಾಡುತ್ತ ಬಂದಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಿಲ್ಲ. ಆದ್ದರಿಂದ ಕೂಡಲೇ ಕಾಂಗ್ರೆಸ್‌ ದೇಶದ ಜನರ ಕ್ಷಮೆ ಕೇಳಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಕಾಂಗ್ರೆಸ್ಸಿಗರದ್ದು ಹೊಂದಾಣಿಕೆ ರಾಜಕಾರಣ. ಈಗಲೂ ಕಾಂಗ್ರೆಸ್ಸಿಗರು ಅದನ್ನೇ ಮಾಡುತ್ತಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಡವಾಗಿ ಸಿಗಲು ಕಾಂಗ್ರೆಸ್ಸಿಗರೇ ಕಾರಣರು. ಈಗ ಕಾಂಗ್ರೆಸ್‌ ಪೌರತ್ವ ವಿರೋಧಿ ಹೋರಾಟ ನಡೆಸುತ್ತಿರುವುದು ದೇಶವಿರೋಧಿ ಚಟುವಟಿಕೆಯಾಗಿದೆ. ಪೌರತ್ವ ಕಾಯ್ದೆ ವಿರೋಧಿಸಿ ಮಾಡುವ ಹೋರಾಟ ಅಂಬೇಡ್ಕರ ಸಂವಿಧಾನಕ್ಕೆ ಮಾಡಿದ ಅಪಮಾನವಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲೋಕಸಭೆ, ರಾಜ್ಯಸಭೆಯಲ್ಲಿ ಪಾಸಾದ ಸಂಸತ್ತಿನ ವಿಧೇಯಕ ಇಡೀ ಭಾರತಕ್ಕೆ ಅನ್ವಯ ಆಗಲಿದೆ. ಈ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಈಗ ಸಂಸತ್ತಿನ ಹೊರಗೆ ಹೋರಾಟ ನಡೆಸುತ್ತಿದ್ದಾರೆ ಎಂದರು.

ಈ ಕೂಡಲೇ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸುವುದು ಅವಶ್ಯವಿದೆ. ಸ್ವಾತಂತ್ರ್ಯದ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತದೆ ಎಂದು ಗಾಂಧೀಜಿಯವರು ಆಗಲೇ ಹೇಳಿದ್ದರು. ಸ್ವಹಿತಾಸಕ್ತಿ, ಕುಟುಂಬ ಶಾಹಿ ವ್ಯವಸ್ಥೆ ಬಗ್ಗೆ ಮಹಾತ್ಮ ಗಾಂಧಿ ಹೇಳಿದ್ದು ನಿಜವಾಗಿದೆ ಎಂದರು.

ಬಿಎ​ಸ್‌ವೈ ಸಿಎಂ ಆಗಿರಬೇಕು:

ಬಿ.ಎಸ್‌. ಯಡಿಯೂರಪ್ಪನವರು ಮುಂದಿನ ಮೂರು ವರ್ಷಗಳವರೆಗೆ ಮುಖ್ಯಮಂತ್ರಿ ಆಗಿರಬೇಕು. ಉತ್ತರ ಕರ್ನಾಟಕಕ್ಕೆ ಹೆಚ್ಚು ಸೌಲಭ್ಯ ಸಿಗುವಂತಾಗಬೇಕು. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು. ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಕತ್ತಿ ಅವರ ಜೊತೆ ಚರ್ಚಿಸಿದ್ದೇನೆ. ಈ ಬಗ್ಗೆ ಸಿಎಂಗೆ ಬರೆದ ಪತ್ರದಲ್ಲಿ ವಿವರಣೆ ನೀಡಲಾಗಿದೆ. ಸಿಎಂಗೆ ಬರೆದ ಪತ್ರದ ವಿವರ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
 

click me!