ನಾಮಫಲಕ ಎಡವಟ್ಟು ಮಾಡಿದ ನೈಋುತ್ಯ ರೈಲ್ವೆ

By Kannadaprabha NewsFirst Published Nov 23, 2020, 7:49 AM IST
Highlights

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ನೂತನ ಹೆಸರು. ಹೆಸರಿಟ್ಟ ಆರಂಭದಲ್ಲೆ ರೈಲ್ವೆ ಇಲಾಖೆಯಿಂದಾಯ್ತು ಎಡವಟ್ಟು. ಸಾರ್ವಜನಿಕರಿಂದ ತೀರ್ವ ಆಕ್ರೋಶ

ಹುಬ್ಬಳ್ಳಿ (ನ.23):  ನೈಋುತ್ಯ ರೈಲ್ವೆಯ ಹುಬ್ಬಳ್ಳಿ ಜಂಕ್ಷನ್‌ಗೆ (ರೈಲ್ವೆ ನಿಲ್ದಾಣ) ಇಲ್ಲಿನ ಆರಾಧ್ಯದೈವ ಶ್ರೀ ಸಿದ್ಧಾರೂಢರ ಹೆಸರು ಮರುನಾಮಕರಣ ಮಾಡಲಾಗಿದೆ. ಆದರೆ ನಾಮಫಲಕದಲ್ಲಿ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ’ ಎಂದು ಬರೆಯಲಾಗಿದೆ. ಜಂಕ್ಷನ್‌ ಅಥವಾ ನಿಲ್ದಾಣ ಎಂದು ಬರೆಯದೇ ಎಡವಟ್ಟು ಮಾಡಿದೆ. ಇದಕ್ಕೆ ಆರೂಢ ಅಜ್ಜನ ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಫಲಕ ಬದಲಿಸುವಂತೆ ಆಗ್ರಹಿಸಿದ್ದಾರೆ.

2010ರಿಂದಲೇ ಸಿದ್ಧಾರೂಢರ ಹೆಸರನ್ನಿಡಬೇಕೆಂದು ಬೇಡಿಕೆ ಮುಂದಿಟ್ಟುಕೊಂಡು ಮನವಿ ಸಲ್ಲಿಸುತ್ತಲೆ ಬರಲಾಗುತ್ತಿತ್ತು. ಮಠದ ಟ್ರಸ್ಟ್‌, ಭಕ್ತರು ಎಲ್ಲರೂ ಇದಕ್ಕಾಗಿ ಹೋರಾಟ ನಡೆಸಿದ್ದುಂಟು. ಅದರಂತೆ ಈಗ ಸಿದ್ಧಾರೂಢ ಹೆಸರನ್ನು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಇತ್ತೀಚಿಗೆ ಹಸಿರು ನಿಶಾನೆ ತೋರಿಸಿದೆ. ಇದೀಗ ನಿಲ್ದಾಣದಲ್ಲಿನ ಎಲ್ಲ ಬೋರ್ಡ್‌ಗಳನ್ನು ಬದಲಿಸಲಾಗುತ್ತಿದೆ.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲೂ ಸಿಗಲಿದೆ ಸಿದ್ಧಾರೂಢರ ಪ್ರಸಾದ ..

ಶನಿವಾರದಿಂದ ನಾಮಫಲಕಗಳನ್ನು ಬದಲಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈಗಾಗಲೇ ನಿಲ್ದಾಣದೊಳಗಿರುವ ಹಳದಿ ಬಣ್ಣದ ಬೋರ್ಡ್‌ಗಳ ಮೇಲಿನ ಹೆಸರನ್ನು ಬದಲಾಯಿಸಲಾಗಿದೆ. ನಿಲ್ದಾಣದ ಕಟ್ಟಡದ ಮೇಲಿರುವ ದೊಡ್ಡ ಬೋರ್ಡ್‌ನ್ನು ಇನ್ನೆರಡು ದಿನಗಳಲ್ಲಿ ಬದಲಾಯಿಸಲಾಗುವುದು ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.

 ಆದರೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಎಂದು ಬರೆಯಲಾಗುತ್ತಿದೆ. ಅದರ ಪಕ್ಕದಲ್ಲಿ ರೈಲ್ವೆ ನಿಲ್ದಾಣವೆಂದಾಗಲಿ, ಜಂಕ್ಷನ್‌ ಎಂದಾಗಲಿ ಬರೆದಿಲ್ಲ. ಇದನ್ನು ಯಾವ ನಿಲ್ದಾಣವೆಂದು ಗುರುತಿಸುವುದು ಎಂಬ ಪ್ರಶ್ನೆ ಪ್ರಯಾಣಿಕರು ಹಾಗೂ ಭಕ್ತರಿಂದ ಕೇಳಿಬರುತ್ತಿದೆ.

ಆಗಿರುವ ಪ್ರಮಾದವನ್ನು ಕೂಡಲೇ ಸರಿಪಡಿಸಿ ಮತ್ತೊಮ್ಮೆ ಬೋರ್ಡ್‌ನ್ನು ಬದಲಿಸಿ, ಅಧಿಸೂಚನೆಯಲ್ಲಿ ತಿಳಿಸಿರುವಂತೆ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ, ಹುಬ್ಬಳ್ಳಿ’ ಎಂದು ಬರೆಯಬೇಕೆಂಬ ಆಗ್ರಹ ನಾಗರಿಕರದ್ದು.

click me!