ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗೆಬ್ಬಿಸಿದ ಸಚಿವ ಕತ್ತಿ..!

By Kannadaprabha NewsFirst Published Jun 23, 2022, 7:17 AM IST
Highlights

*   2024ರಲ್ಲಿ ಉತ್ತರ ಕರ್ನಾಟಕ ಸೇರಿ 50 ರಾಜ್ಯಗಳ ರಚನೆ
*  ಲೋಕಸಭಾ ಚುನಾವಣೆಯ ನಂತರ ರಾಜ್ಯ ರಚಿಸಲಿದ್ದಾರೆ ನರೇಂದ್ರ ಮೋದಿ
*  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಎಲ್ಲ ಮೂಲಸೌಕರ್ಯಗಳು ಇವೆ 
 

ಬೆಳಗಾವಿ(ಜೂ.23): ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲೇಬೇಕು ಎಂಬ ತಮ್ಮ ಹಳೆಯ ವರಸೆಯನ್ನು ಅರಣ್ಯ ಸಚಿವ ಉಮೇಶ ಕತ್ತಿ ಅವರು ಮತ್ತೆ ಮುಂದುವರಿಸಿದ್ದು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗುವುದು ನಿಶ್ಚಿತ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಬುಧವಾರ ಬೆಳಗಾವಿ ಬಾರ್‌ ಅಸೋಸಿಯೇಷನ್‌ಗೆ ಭೇಟಿ ನೀಡಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗುವುದು ನಿಶ್ಚಿತವಾಗಿದ್ದು, ಮುಂಬರುವ 2024ರ ಲೋಕಸಭಾ ಚುನಾವಣೆ ಬಳಿಕ ಕರ್ನಾಟಕ ಎರಡು ರಾಜ್ಯವಾಗಲಿವೆ. ಅದರಂತೆ ದೇಶದಲ್ಲಿ 50 ಹೊಸ ರಾಜ್ಯಗಳು ರಚನೆಯಾಗಲಿವೆ ಎಂದು ಹೇಳಿದರು.

ಅಗ್ನಿಪಥ್‌ ಯೋಜನೆ: ಹೊಸ ಬಾಂಬ್‌ ಸಿಡಿಸಿದ ಸಚಿವ ಕತ್ತಿ

ದೇಶದಲ್ಲಿ ಹೊಸದಾಗಿ 50 ರಾಜ್ಯಗಳನ್ನು ರಚಿಸುವ ಕುರಿತಂತೆ ಚರ್ಚೆ ನಡೆಯುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ಖಂಡಿತ ಎಂದು ನಾನು ಹೇಳಿದ್ದು ನಿಜ. ನಾವು ನೀವು ಎಲ್ಲರೂ ಸೇರಿ ಮಾಡೋಣ. ದೇಶದಲ್ಲಿ ನರೇಂದ್ರ ಮೋದಿ ಅವರೇ 50 ರಾಜ್ಯಗಳನ್ನು ರಚಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ 3, ಉತ್ತರ ಪ್ರದೇಶದಲ್ಲಿ 4, ಕರ್ನಾಟಕದಲ್ಲಿ 2 ರಾಜ್ಯಗಳಾಗಲಿವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ಕುಡಿಯಲು ಕೂಡ ನೀರಿಲ್ಲ. ಬೆಂಗಳೂರು ಟ್ರಾಫಿಕ್‌ ಜಾಮ್‌ ಹೇಳತೀರದು. 10 ಕಿಮೀ ಹೋಗಲು 1 ಗಂಟೆ ಸಮಯ ಬೇಕು. ನನ್ನ ಮನೆಯಿಂದ ವಿಧಾನಸೌಧಕ್ಕೆ ಹೋಗಲು ಒಂದೂವರೆ ತಾಸು ಬೇಕು. ನಡೆದುಕೊಂಡು ಹೋದರೆ ಅದಕ್ಕಿಂತ ಬೇಗ ಹೋಗಬಹುದು. ಇನ್ನು ಐಟಿ ಬಿಟಿ ಬರಲು ಅಲ್ಲಿ ಅವಕಾಶವೇ ಇಲ್ಲ ಎಂದು ಹೇಳಿದರು.

ಬೆಳಗಾವಿಯಲ್ಲಿ ಸುವರ್ಣವಿಧಾನಸೌಧ ಆಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಹೈಕೋರ್ಟ್‌ ಆಗಿದೆ. ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಿಸುವ ಚರ್ಚೆ ನಡೆದಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಎಲ್ಲ ಮೂಲಸೌಕರ್ಯಗಳು ಇವೆ ಎಂದು ಕತ್ತಿ ಹೇಳಿದರು.
 

click me!