ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಶಿಕ್ಷಣ ಸಚಿವ ಸುರೇಶಕುಮಾರ| ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಓದುತ್ತಿರುತ್ತಾರೆ| ಅವರಿಗೆ ಪುಸ್ತಕ ಖರೀದಿಸಲು ಹಣವಿರುವುದಿಲ್ಲ. ಕಡುಬಡವರಿಗಾಗಿ ಈ ಯೋಜನೆಯಿದೆ| ನೀವು ಸರ್ಕಾರಿ ಶಾಲೆಯಲ್ಲಿ ಓದಿದರೆ ನಿಮಗೂ ಪುಸ್ತಕ, ಸಮವಸ್ತ್ರ ಸಿಗುತ್ತದೆ ಎಂದ ಸಚಿವರು| ಜಾತಿ ಬಗ್ಗೆ ಮಾತಾಡುವುದನ್ನು ಬಿಡಬೇಕು. ನಾವೆಲ್ಲರೂ ಭಾರತಾಂಬೆಯ ಮಕ್ಕಳೆಂದು ಹೇಳಬೇಕು| ಮುಂದಿನ ದಿನಗಳಲ್ಲಿ ಜಾತಿ ಬಗ್ಗೆ ಮಾತಾಡುವುದು ಹಂತಹಂತವಾಗಿ ಹೋಗುತ್ತದೆ|
ಕಲಬುರಗಿ(ಸೆ.29): ಮುಂದೆ ಏನಾಗಬೇಕೆಂದುಕೊಂಡಿದ್ದೀರಾ? ಯಾರ್ಯಾರು ಡಾಕ್ಟರ್ ಆಗಬೇಕೆಂದುಕೊಂಡಿದ್ದೀರಿ? ಯಾರು ಎಂಜಿನಿಯರ್ ಆಗುತ್ತೀರಿ? ಯಾರು ಶಿಕ್ಷಕರು ಆಗುತ್ತೀರಿ ಕೈ ಎತ್ತಿ ನೋಡೋಣ, ಓ... ಇಲ್ಲಿ ಶಿಕ್ಷಕರಾಗುವರು ಹೆಚ್ಚು ಕಾಣುತ್ತೇ. ಕೇವಲ ಶಿಕ್ಷಕರಾಗಬಾರದು, ಉತ್ತಮ ಶಿಕ್ಷಕರಾಗಬೇಕು. ಉತ್ತಮ ಡಾಕ್ಟರ್, ಎಂಜನಿಯರ್ ಆಗುತ್ತೀರಲ್ಲ, ನಿಮ್ಮ ತಂದೆ ತಾಯಿ ಹೆಸರು ತರುತ್ತೀರಲ್ಲ ಹೀಗೆ ಆತ್ಮೀಯವಾಗಿ ಮಾತಾಡುತ್ತಾ ಸಂವಾದ ನಡೆಸಿದರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ.
ನಗರದ ರೋಟರಿ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳನ್ನು ಪ್ರಶ್ನೆ ಕೇಳುತ್ತಾ, ಸಂವಾದಕ್ಕೆ ಕಾರ್ಯಕ್ರಮ ಆಯೋಜನೆ ಮಾಡುವವರು ವೇದಿಕೆಗೆ ಬಂದು ಮಕ್ಕಳನ್ನುದ್ದೇಶಿಸಿ ಮಾತನಾಡಿ, ನಂತರ ಸಂವಾದ ನಡೆಸುತ್ತಾರೆಂದು ನಿರೀಕ್ಷಿಸಿದ್ದರು. ಆದರೆ ಸಚಿವರು ನೇರವಾಗಿ ಮಕ್ಕಳಿರುವಲ್ಲಿಯೇ ಹೋಗಿ ಮೈಕ್ ತಗೊಂಡು ಸಂವಾದಕ್ಕಿಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ಕಾರಿ ಶಾಲೆಗಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಶೂ ಕೊಡುತ್ತಾರೆ ನಮಗೇಕೆ ಕೊಡಲ್ಲ ಎಂಬ ಶಿವಾನಿಯವರ ಮೊದಲ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಓದುತ್ತಿರುತ್ತಾರೆ. ಅವರಿಗೆ ಪುಸ್ತಕ ಖರೀದಿಸಲು ಹಣವಿರುವುದಿಲ್ಲ. ಕಡುಬಡವರಿಗಾಗಿ ಈ ಯೋಜನೆಯಿದೆ. ನೀವು ಸರ್ಕಾರಿ ಶಾಲೆಯಲ್ಲಿ ಓದಿದರೆ ನಿಮಗೂ ಪುಸ್ತಕ, ಸಮವಸ್ತ್ರ ಸಿಗುತ್ತದೆ ಎಂದರು.
ಜಾತ್ಯತೀತ ಎಂದು ಮಾತಾಡುತ್ತಾರೆ ಆದರೆ ಶಾಲೆಗಳಲ್ಲಿ ಜಾತಿ ಪ್ರಮಾಣ ಪತ್ರ ಕೇಳುತ್ತಾರೆ ಇದು ಒಳ್ಳೆಯದೆ ಎಂದು ಕೇಳಿದ ಸಾಕ್ಷಿಯವರ ಪ್ರಶ್ನೆಗೆ ಸಚಿವರು ಪ್ರಶಂಸಿದರು. ಹಿರಿಯರು ಕೇಳುವ ಪ್ರಶ್ನೆ ಚಿಕ್ಕ ಮಗು ಕೇಳುತ್ತಿದೆಯಲ್ಲಾ, ನಿಮ್ಮ ಪ್ರಶ್ನೆ ಶಿಕ್ಷಕರಿಗೂ ಇಲ್ಲಿ ಸೇರಿದವರೆಲ್ಲರಿಗೂ ಅನ್ವಯಿಸುತ್ತದೆ ಮಗು ಎಂದು ಹೇಳುತ್ತಲೆ, ಜಾತಿ ಬಗ್ಗೆ ಮಾತಾಡುವುದನ್ನು ಬಿಡಬೇಕು. ನಾವೆಲ್ಲರೂ ಭಾರತಾಂಬೆಯ ಮಕ್ಕಳೆಂದು ಹೇಳಬೇಕು. ಮುಂದಿನ ದಿನಗಳಲ್ಲಿ ಜಾತಿ ಬಗ್ಗೆ ಮಾತಾಡುವುದು ಹಂತಹಂತವಾಗಿ ಹೋಗುತ್ತದೆ ಮರಿ ಎಂದರು.
ಅಲ್ಲಿ ಕೇಳಲಾಗುತ್ತಿರುವ ಪ್ರಶ್ನೆಗಳನ್ನು ಶಿಕ್ಷಕರು ಬರೆದು ಕೊಡುತ್ತಿದ್ದರೆಂಬುದನ್ನು ಅರಿತ ಸಚಿವರು, ದಯವಿಟ್ಟು ಮಕ್ಕಳಿಗೆ ಹೀಗೆ ಪ್ರಶ್ನೆ ಕೇಳಿ ಎಂದು ಬರೆದುಕೊಡಬೇಡಿ, ಪ್ರಶ್ನೆ ಕೇಳಲು ಅವರಿಗೆ ಸ್ವತಂತ್ರ ನೀಡಿ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಕಥೆ ಹೇಳಿದ ಸಚಿವರು
ಬರೆದು ಕೊಟ್ಟ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸಮಂಜಸವಲ್ಲ ಎಂದು ಹೇಳುತ್ತಲೆ ಮಕ್ಕಳೇ ನಿಮಗೆ ಕಥೆ ಇಷ್ಟವೇ? ಕಥೆ ಹೇಳುತ್ತೇನೆ ಕೇಳುತ್ತೀರಾ ಎಂದರು. ಕೂಡಲೇ ಮಕ್ಕಳು ಕಥೆ ಹೇಳಿ ಸಾರ್ ಎಂದು ಒಗ್ಗಟ್ಟಾಗಿ ಕಿವಿ ನಿಮಿರಿಸಿಕೊಂಡು ಕೇಳುತ್ತಿದ್ದಾಗ ಸಚಿವರು ಶಿಕ್ಷಕರಾಗಿ ಕಥೆ ಹೇಳಿದರು.
ಆನೆಕಲ್ಲು ಎಂಬ ಚಿಕ್ಕ ಹಳ್ಳಿಯಲ್ಲಿ ಬಡತನದಿಂದ ಇರುವ ಕುಟುಂಬದಲ್ಲಿ ಅಂಜನಪ್ಪ ಎಂಬ ಬಾಲಕ ಇದ್ದ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದು ಕೊಡ ಆ ಬಾಲಕ ಶಾಲೆಯೆಂ ಬುದೇ ಗೊತ್ತಿರದ ಆ ಬಾಲಕ ಆರು ವರ್ಷದ ನಂತರ ಶಾಲೆಗೆ ಸೇರಿದ. ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.92 ಅಂಕ ಪಡೆದು ಪಿಯುಸಿಯಲ್ಲಿ ರಾಜ್ಯಕ್ಕೆ 130ನೇ ರ‌್ಯಾಂಕ್ ಪಡೆ ತಂದೆ ತಾಯಿಯ ಕೀರ್ತಿ ಹೆಚ್ಚಿಸಿದ. ನೀವು ಮುಂದೆ ಚೆನ್ನಾಗಿ ಓದಿ ಅಂಜನಪ್ಪನ ಹಾಗೆ ಪಾಲಕರ ಹೆಸರು ತರಬೇಕು ಎಂದು ಹೇಳಿ ವಿದ್ಯಾರ್ಥಿಗಳ ಕೈಕುಲಕಿ ಅಲ್ಲಿಂದ ನಿರ್ಗಮಿಸಿದರು.