ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಸಹಾಯಕನೋರ್ನ ಸಹೋದರಿ ಕೊರೋನಾದಿಂದ ಗುಣಮುಖರಾಗಿದ್ದು, ಅವರನ್ನು ಪುಷ್ಪ ವೃಷ್ಟಿ ಹರಿಸಿ ಸ್ವಾಗತಿಸಿದ್ದಾರೆ.
ಬಳ್ಳಾರಿ (ಆ.25): ಕೊರೋನಾ ಗೆದ್ದು ಬಂದ ತಂಗಿಗೆ ಅಣ್ಣನಿಂದ ಪುಷ್ಪಾರ್ಪಣೆಯ ಸ್ವಾಗತ. ಅಷ್ಟೇ ಅಲ್ಲ, ತಂಗಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದ ಖುಷಿಗೆ ಅಣ್ಣ ಮನೆ ಮಂದಿಗೆಲ್ಲಾ ಹೋಳಿಗೆ ಊಟ!
ಈ ಘಟನೆಗೆ ಸಾಕ್ಷಿಯಾಗಿದ್ದು ಇಲ್ಲಿನ ದೇವಿನಗರ (ಬಸವನಕುಂಟ) ನಿವಾಸಿ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ರಾಮು ಅವರ ನಿವಾಸ.
ಅಂತರ್ ರಾಜ್ಯ ಪ್ರಯಾಣಿಕರಿಗೆ ಇದ್ದ ಎಲ್ಲಾ ಷರತ್ತುಗಳು ರದ್ದು, ಸೀಲ್ ಇಲ್ಲ, ಕ್ವಾರಂಟೈನ್ ಇಲ್ಲ...
ರಾಮು ಅವರ ಸಹೋದರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಸೋಮವಾರ ಸಹೋದರಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸುದ್ದಿ ತಿಳಿದ ಅಣ್ಣ ರಾಮು, ತಂಗಿಯ ಬರುವಿಕೆಗಾಗಿ ಕಾದು ಕುಳಿತಿದ್ದಾರಲ್ಲದೆ, ಮನೆಗೆ ಬರುತ್ತಿದ್ದಂತೆಯೇ ಪುಷ್ಪಾರ್ಪಣೆ ಮಾಡಿ, ಹೂವಿನ ಹಾರ ಹಾಕಿ ಸಂಭ್ರಮಿಸಿದ್ದಾರೆ. ಕುಟುಂಬ ಸದಸ್ಯರು ಆರತಿ ಬೆಳಗಿ ಆಶೀರ್ವದಿಸಿದ್ದಾರೆ.
ಗುಡ್ ನ್ಯೂಸ್: ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು..!..
ಬಳಿಕ ಸಹೋದರಿಯ ಜತೆ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ರಾಮು ಅವರು ತಂಗಿಯನ್ನು ಗಂಗಾವತಿಯ ಗಂಡನ ಮನೆಗೆ ಕಾರಿನಲ್ಲಿ ಕಳಿಸಿಕೊಟ್ಟು ತಂಗಿ ಪ್ರೀತಿ ಮೆರೆದಿದ್ದಾರೆ.
ಇದೇ ವೇಳೆ ಪ್ರತಿಕ್ರಿಯಿಸಿರುವ ರಾಮು, ‘ನನಗೆ ತಂಗಿಯ ಮೇಲೆ ಅತ್ಯಂತ ಪ್ರೀತಿ. ತಂಗಿಗೆ ಕೊರೋನಾ ಬಂದಾಗ ತೀವ್ರವಾಗಿ ಬೇಸರವಾಗಿತ್ತು. ಆದರೂ ಆಕೆಗೆ ಧೈರ್ಯ ತುಂಬಿ ಆಸ್ಪತ್ರೆ ದಾಖಲು ಮಾಡಿಸಿದೆ. ಆರೋಗ್ಯವಾಗಿ ಬಂದ ಸಂತಸದಿಂದ ಹೂವಿನ ಹಾರ, ಪುಷ್ಪಾರ್ಪಣೆ ಮಾಡಿ ಸ್ವಾಗತ ಮಾಡಿದೆ’ ಎನ್ನುವ ರಾಮು, ಸೋಂಕಿತರಿಗೆ ಧೈರ್ಯ ತುಂಬಿ ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎನ್ನುತ್ತಾರೆ.