ರಾಜ್ಯದ ಆರೋಗ್ಯ ಸಚಿವ ಶ್ರೀ ರಾಮುಲು ಅವರು ನೀಡಿದ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.. ಹಾಗಾದ್ರೆ ಅವರು ಹೇಳಿದ್ದೇನು..?
ಮಡಿಕೇರಿ (ಸೆ.27): ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕತೆ ಬಗ್ಗೆ, ಜಿಲ್ಲೆಯ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುತ್ತಿರುವ ಯಾವುದೇ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಧಾನಸಭೆಗೆ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆ ಇಟ್ಟು ಕಳೆದ ವರ್ಷ ಕೊಡಗಿನ ಜನ ಆರಂಭಿಸಿದ್ದ ಟ್ವೀಟ್ ಅಭಿಯಾನಕ್ಕೆ ಸ್ಪಂದಿಸಿದ್ದ ಶ್ರೀರಾಮುಲು ಈಗ ಉಲ್ಟಾಹೊಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನಸಭೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು, ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಇಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುತ್ತಿದ್ದು, ಈ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? ಹಾಗಿದ್ದಲ್ಲಿ ಆ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮವೇನು? ಯಾವಾಗ ಮಂಜೂರು ಮಾಡಲಾಗುವುದು? ಸರ್ಕಾರದಿಂದ ಆಸ್ಪತ್ರೆಗಳಿಗೆ ಯಾವ ಕಂಪನಿಗಳಿಂದ ಔಷಧ ಖರೀದಿಸಲಾಗುತ್ತದೆ, ಔಷಧ ಖರೀದಿಸಲು ಇರುವ ಮಾನದಂಡವೇನು, ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯ ಆಸ್ಪತ್ರೆಗಳಿಗೆ ಎಷ್ಟುಪ್ರಮಾಣದ ಔಷಧ ಖರೀದಿಸಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಶ್ರೀರಾಮುಲು ಈ ಉತ್ತರ ನೀಡಿದ್ದಾರೆ.
ಮಡಿಕೇರಿ: ಅ.17ರಂದು ಕಾವೇರಿ ತೀರ್ಥೋದ್ಭವ ...
ಟ್ವೀಟ್ ಮಾಡಿದ್ದ ರಾಮುಲು!: ಕೊಡಗಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಬೇಡಿಕೆ ಇಟ್ಟು ಕೊಡಗಿನ ಜನ ಟ್ವಟರ್‌ನಲ್ಲಿ ಅಭಿಯಾನವೊಂದನ್ನು ನಡೆಸಿದ್ದರು. ಈ ಅಭಿಯಾನಕ್ಕೆ ಸ್ಪಂದಿಸಿದ್ದ ಸಚಿವ ಶ್ರೀರಾಮುಲು, ಕೊಡವ ಭಾಷೆಯಲ್ಲೇ ಟ್ವೀಟ್ ಮಾಡಿ ಸ್ಪಂದಿಸಿದ್ದರು. 2019 ಸೆ.26ರಂದು ಟ್ವೀಟ್ ಮಾಡಿದ್ದ ರಾಮುಲು ಕೊಡಗು ಜಿಲ್ಲೆಗೆ ಬರುತ್ತಿದ್ದೇನೆ. ಅಲ್ಲಿ ಸುಸಜ್ಜಿತ ಆಸ್ಪತ್ರೆ ಬಗ್ಗೆ ಚರ್ಚಿಸೋಣ ಎಂದು ಟ್ವೀಟ್ ಮಾಡಿ, ಮಡಿಕೇರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಕೂಡ ಹೂಡಿದ್ದರು. ಈ ವೇಳೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ, ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈಗ ಅವರು ಉಲ್ಟಾಹೊಡೆದಿರುವುದು ಅಚ್ಚರಿ ಮೂಡಿಸಿದೆ.