'ಮೋದಿ ಪ್ರಧಾನಿಯಾದ ಮೇಲೆ ಭಾರತ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ'

By Suvarna News  |  First Published Dec 23, 2019, 1:25 PM IST

ಸಂಪುಟ ವಿಸ್ತರಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದ ಸಚಿವೆ ಜೊಲ್ಲೆ| ಈ ಪಕ್ಷದ ಮುಖಂಡರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ| ನೂತನ ಸಚಿವರಿಗಾಗಿ ಹಳಬರು ತ್ಯಾಗ ಮಾಡುಬೇಕು ಎನ್ನುವ ವಿಚಾರದ ‌ಬಗ್ಗೆ ನನಗೆ ಗೊತ್ತಿಲ್ಲ| ಹೈಕಮಾಂಡ್‌ ಎಲ್ಲರಿಗೂ ಸಮಾನ ಅಧಿಕಾರ ನೀಡುತ್ತದೆ| ಮುಖ್ಯಮಂತ್ರಿಗಳು ಎಲ್ಲರನ್ನೂ ಸಮಾಧಾನ ಮಾಡಿ ಅಧಿಕಾರ ಹಂಚಿಕೆ ಮಾಡಲಿದ್ದಾರೆ|


ವಿಜಯಪುರ(ಡಿ.23): ಪ್ರಬಲ‌ ಖಾತೆಗಳಿಗೆ ಬೇಡಿಕೆ ಇಡುವವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೇಡುವಂತೆ ಮಾಡುತ್ತೇನೆ. ತಮಗೆ ನೀಡಲಾಗಿರುವ ಖಾತೆ ಪ್ರತಿಯೊಂದು ಕುಟುಂಬಕ್ಕೆ ಸಂಬಂಧಿಸಿದ್ದಾಗಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ವಿಶೇಷ ಮಕ್ಕಳು ಎಲ್ಲರಿಗೂ ಸಂಬಂಧಿಸಿದ ಇಲಾಖೆ ನನ್ನದಾಗಿದೆ. ಈವರೆಗೆ ಈ ಇಲಾಖೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬ ಭಾವನೆಯಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡುವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಬಿಜೆಪಿಯಿಂದ ಸನ್ಮಾನ‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಹೆಸರಿನಲ್ಲಿರುವ ನಕಲಿ ಎನ್‌ಜಿಓಗಳ ಪಟ್ಟಿ ಮಾಡಿ ಕ್ರಮ ಕೈಗೊಳ್ಳಲಾಗುವುದು. ನನ್ನದೇ ವರದಿ ತರಿಸಿಕೊಂಡು ಅಕ್ರಮ ಎನ್‌ಜಿಓ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ನನ್ನ ಇಲಾಖೆಯಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿ ನಡೆಯಬೇಕು. ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆಯನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂಪುಟ ವಿಸ್ತರಣೆ ವೇಳೆ ಹಾಲಿ ಸಚಿವರ ಬದಲಾವಣೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ಜೊಲ್ಲೆ, ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಮುಖಂಡರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ನೂತನ ಸಚಿವರಿಗಾಗಿ ಹಳಬರು ತ್ಯಾಗ ಮಾಡುಬೇಕು ಎನ್ನುವ ವಿಚಾರದ ‌ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್‌ ಎಲ್ಲರಿಗೂ ಸಮಾನ ಅಧಿಕಾರ ನೀಡುತ್ತದೆ. ಮುಖ್ಯಮಂತ್ರಿಗಳು ಎಲ್ಲರನ್ನೂ ಸಮಾಧಾನ ಮಾಡಿ ಅಧಿಕಾರ ಹಂಚಿಕೆ ಮಾಡಲಿದ್ದಾರೆ. ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಎಲ್ಲರ ಜೊತೆ ಸಿಎಂ ಮಾತುಕತೆ ನಡೆಸಿ ಅಂತಿಮ‌ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಗರಿಬಿ ಹಟಾವೋ ಘೋಷಣೆ ಹೇಳುತ್ತ ಕಾಲಹರಣ ಮಾಡಿದೆ. ಆದರೆ, ಬಡವರ ಉದ್ಧಾರ ಮಾಡಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಭಾರತ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ. ತ್ರಿವಳಿ ತಲಾಖ್‌, ಸಿಎಎ ಸೇರಿದಂತೆ ನಾನಾ ಕಾಯ್ದೆಗಳು ಜಾರಿಯಾಗುತ್ತಿವೆ. ಇದರಿಂದ ವಿಶ್ವಾದ್ಯಂತ ಭಾರತದ ಗೌರವ ಹೆಚ್ಚಿದೆ ಎಂದಿದ್ದಾರೆ. 

ಪೌರತ್ವ ಕಾಯ್ದೆ ಅನುಕೂಲತೆಯ ಬಗ್ಗೆ ಬಿಜೆಪಿ ನಾಯಕರು, ಕಾರ್ಯಕರ್ತರು ಬೇರು ಮಟ್ಟದವರೆಗೆ ಮುಟ್ಟಿಸಬೇಕು. ಭಾರತೀಯ ಮುಸ್ಲಿಮರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆಯಿಲ್ಲ ಎಂಬುದರ ಕುರಿತು ಅರಿವು ಮೂಡಿಸಬೇಕು. ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರ ಸರಿಯಲ್ಲ ಎಂದು ತಿಳಿಸಿದ್ದಾರೆ. 

ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂಥ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಒಂದು ಸಭೆ ನಡೆಸಿದ್ದೇವೆ. ಇಂಥಹ ಪ್ರಕರಣಗಳು ಬಹಳ ಬೇಸರ ತರಿಸುತ್ತವೆ. ಈ ಹಿನ್ನೆಲೆ ವ್ಯವಸ್ಥಿತ ಕಾನೂನು ಜಾರಿಯಾಗಬೇಕಿದೆ. ಆರೋಪಿಗಳಿಗೆ ತೀವ್ರಗತಿಯಲ್ಲಿ ಶಿಕ್ಷೆಯಾಗಬೇಕಿದೆ. ನಮ್ಮ ರಾಜ್ಯದಲ್ಲಿಯೂ ನಾನು ಗೃಹ ಸಚಿವರು ಸೇರಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರ ಪೂರ್ವ ನಿಯೋಜಿತ ಜಂಟಿ ಸಭೆ ನಡೆಸಿದ್ದೇನೆ. ಆರೋಪಿಗಳಿಗೆ ಬೇಗ ಶಿಕ್ಷೆಯಾಗುವ ನಿಟ್ಟಿನಲ್ಲಿ ಏನೆಲ್ಲ ಮಾಡಬಹುದು ಅನ್ನೋದರ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಸಭೆಯಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. 

ಬಳಿಕ ಮಾತನಾಡಿದ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪೌರತ್ವ ಕಾಯ್ದೆಯ ಬಗ್ಗೆ ಪ್ರತಿಪಕ್ಷಗಳು ಜನರನ್ನು ತಪ್ಪು ದಾರಿಗೆಳೆಯುತ್ತಿವೆ. ಇಂತಹ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಪೌರತ್ವ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ. ಹೋರಾಟ ಮಾಡುವವರು ಈ ಕಾಯ್ದೆಯ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ. 
 

click me!