ಬರ ಅಧ್ಯಯನ ನೆಪದಲ್ಲಿ ಬಿಜೆಪಿ, ಜೆಡಿಎಸ್ ಮೊಸಳೆ ಕಣ್ಣೀರು: ಸಚಿವ ದರ್ಶನಾಪೂರ್

By Kannadaprabha NewsFirst Published Nov 11, 2023, 8:00 AM IST
Highlights

ರಾಜ್ಯದಿಂದ ಆಯ್ಕೆಯಾದ ಸಂಸದರು ಕೇಂದ್ರದ ಸಚಿವರು ನಿಯೋಗ ತೆಗೆದುಕೊಂಡು ಕೇಂದ್ರದ ಮೇಲೆ ಒತ್ತಡ ತರಬಹುದಿತ್ತು. ಆದರೆ, ಪ್ರಧಾನಮಂತ್ರಿಯವರನ್ನು ಒತ್ತಾಯ ಮಾಡುವ ತಾಕತ್ತು ರಾಜ್ಯದ ಬಿಜೆಪಿ ಸಂಸದರಿಗೂ ಕೇಂದ್ರ ಸಚಿವರಿಗೂ ಇಲ್ಲ. ಇನ್ನ ಜೆಡಿಎಸ್ ಅವಕಾಶವಾದಿ, ಅದು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ ಎಂದು ಲೇವಡಿ ಮಾಡಿದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ 

ಶಹಾಪುರ(ನ.11): ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಂಡ ರಚಿಸಿಕೊಂಡು ಬರ ಅಧ್ಯಯನ ನೆಪದಲ್ಲಿ ಮೊಸಳೆ ಕಣ್ಣೀರು ಸುರಿಸಲು ಹೊರಟಿದ್ದಾರೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಬಿಜೆಪಿ, ಜೆಡಿಎಸ್ ವಿರುದ್ಧ ಆರೋಪಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನತಾದರ್ಶನ ಪೂರ್ವಭಾವಿ ಸಭೆ ಹಾಗೂ ಬರ ನಿರ್ವಹಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ ಬರ ಪೀಡಿತ ಪ್ರದೇಶಗಳ ವಿವರ ಹಾಗೂ ಬರ ಪರಿಹಾರಕ್ಕೆ ಬೇಕಾದ ಹಣಕಾಸಿನ ನೆರವು ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಕೇಂದ್ರದ ಅಧ್ಯಯನ ತಂಡ ಸುಮಾರು 13, 14 ಜಿಲ್ಲೆಗಳಲ್ಲಿ ಸಂಚರಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದೆ.

"ಕನ್ನಡಪ್ರಭ" ಬಯಲಿಗೆಳೆದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣ ತಾರ್ಕಿಕ ಅಂತ್ಯ..!

ಆದರೆ, ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಅಂತ 17 ಸಾವಿರ ಕೋಟಿ ರು.ಗಳ ಪರಿಹಾರ ಕೇಳಿದೆ. ಈವರೆಗೂ ಕೇಂದ್ರ ಸರ್ಕಾರ 1 ರು. ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಕೃಷಿ ಸಚಿವರು ನಾಲ್ಕು ಸಲ ಪ್ರಧಾನಮಂತ್ರಿ, ಕೃಷಿ ಸಚಿವ ಹಾಗೂ ಗೃಹ ಸಚಿವರನ್ನು ಭೇಟಿಯಾಗಲು ಹೋದರೆ ಅವಕಾಶ ಸಿಗದಿದ್ದರಿಂದ ಕೃಷಿ ಹಾಗೂ ಗೃಹ ಕಾರ್ಯದರ್ಶಿಯವರಿಗೆ ಭೇಟಿಯಾಗಿ ಸಂಪೂರ್ಣ ವರದಿ ಸಲ್ಲಿಸಿ ಬಂದಿದ್ದಾರೆ.
ರಾಜ್ಯದಿಂದ ಆಯ್ಕೆಯಾದ ಸಂಸದರು ಕೇಂದ್ರದ ಸಚಿವರು ನಿಯೋಗ ತೆಗೆದುಕೊಂಡು ಕೇಂದ್ರದ ಮೇಲೆ ಒತ್ತಡ ತರಬಹುದಿತ್ತು. ಆದರೆ, ಪ್ರಧಾನಮಂತ್ರಿಯವರನ್ನು ಒತ್ತಾಯ ಮಾಡುವ ತಾಕತ್ತು ರಾಜ್ಯದ ಬಿಜೆಪಿ ಸಂಸದರಿಗೂ ಕೇಂದ್ರ ಸಚಿವರಿಗೂ ಇಲ್ಲ. ಇನ್ನ ಜೆಡಿಎಸ್ ಅವಕಾಶವಾದಿ, ಅದು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ ಎಂದು ಸಚಿವರು ಲೇವಡಿ ಮಾಡಿದರು.

ಸರ್ಕಾರ ಬರ ವಿವರಣೆ ತಪ್ಪಿನಿಂದ ಕೂಡಿದೆ. ಕೇಂದ್ರ ಅಧ್ಯಯನ ತಂಡ ಸರಿಯಾದ ವರದಿ ನೀಡಿಲ್ಲ ಎಂದು ಸಾಬೀತುಪಡಿಸಿದ ನಂತರ ಇವರು ಬರ ಅಧ್ಯಯನ ನಡೆಸಬೇಕಿತ್ತು. ಅದು ಬಿಟ್ಟು ರೈತರನ್ನು ದಾರಿ ತಪ್ಪಿಸುವ ಉದ್ದೇಶದಿಂದ, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಅರ್ಥ ಇಲ್ಲದ ಬರ ಅಧ್ಯಯನ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸಲು ಹೊರಟಿದೆ ಎಂದು ಟೀಕಿಸಿದರು.

click me!