ಕೈಗಾರಿಕೋದ್ಯಮಿಗಳು ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಅವಶ್ಯಕತೆ ಇಲ್ಲ ಎನ್ನುತ್ತಲೇ, ಒಂದು ಕೈಗಾರಿಕೆ ಸ್ಥಾಪಿಸಲು ಹತ್ತು ವರ್ಷ ಬೇಕು. ಅದಕ್ಕೆ ಎಷ್ಟು ಶ್ರಮ, ದುಡ್ಡು ಖರ್ಚು ಆಗಿರುತ್ತದೆ? ಅಷ್ಟು ಸುಲಭಕ್ಕೆ ಒಂದೇ ದಿನದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗುವುದಿಲ್ಲ. ತಕ್ಷಣವೇ ಹೋಗುವುದಕ್ಕೆ ಅವೇನು ಡಬ್ಬಾ ಅಂಗಡಿಗಳೇ? ಎಂದು ಪ್ರಶ್ನಿಸಿದ ಸತೀಶ ಜಾರಕಿಹೊಳಿ
ಬೆಳಗಾವಿ(ಜೂ.14): ಕೈಗಾರಿಕೆಗಳು ಒಂದೇ ದಿನದಲ್ಲಿ ಮಹಾರಾಷ್ಟ್ರಕ್ಕೆ ಹೋಗಲು ಆಗುವುದಿಲ್ಲ..ಅವೇನು ಡಬ್ಬಾ ಅಂಗಡಿ, ಚಹಾ ಅಂಗಡಿಗಳಲ್ಲ! ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳದಿಂದ ಕಂಗೆಟ್ಟು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತೇವೆ ಎಂದಿರುವ ಬೆಳಗಾವಿ ಜಿಲ್ಲೆಯ ಕೈಗಾರಿಕೋದ್ಯಮಿಗಳ ಬಗ್ಗೆ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೀಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೈಗಾರಿಕೋದ್ಯಮಿಗಳು ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಅವಶ್ಯಕತೆ ಇಲ್ಲ ಎನ್ನುತ್ತಲೇ, ಒಂದು ಕೈಗಾರಿಕೆ ಸ್ಥಾಪಿಸಲು ಹತ್ತು ವರ್ಷ ಬೇಕು. ಅದಕ್ಕೆ ಎಷ್ಟು ಶ್ರಮ, ದುಡ್ಡು ಖರ್ಚು ಆಗಿರುತ್ತದೆ? ಅಷ್ಟು ಸುಲಭಕ್ಕೆ ಒಂದೇ ದಿನದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗುವುದಿಲ್ಲ. ತಕ್ಷಣವೇ ಹೋಗುವುದಕ್ಕೆ ಅವೇನು ಡಬ್ಬಾ ಅಂಗಡಿಗಳೇ? ಎಂದು ಪ್ರಶ್ನಿಸಿದರು. ವಿದ್ಯುತ್ ದರ ಹೆಚ್ಚಳ ತಾತ್ಕಾಲಿಕ ಸಮಸ್ಯೆ ಅಷ್ಟೇ. ಮೂರು ಪಟ್ಟು ಹೆಚ್ಚಳ ಆಗಲು ಸಾಧ್ಯವಿಲ್ಲ. ಈ ಕುರಿತು ಸಭೆ ನಡೆಸಿ ಗೊಂದಲಕ್ಕೆ ತೆರೆ ಎಳೆಯಲಾಗುವುದು ಎಂದು ಸಮಜಾಯಿಷಿ ನೀಡಿದರು.
ಸಚಿವ ಸತೀಶ ಜಾರಕಿಹೊಳಿ ಹೆಗಲಿಗೆ ಬೆಳಗಾವಿ ಉಸ್ತುವಾರಿ!
ಸರ್ಕಾರ ನೇರ ಭಾಗಿಯಾಗಲ್ಲ:
ವಿದ್ಯುತ್ ದರ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ನೇರವಾಗಿ ಭಾಗಿಯಾಗುವುದಿಲ್ಲ. ಕೆಇಆರ್‌ಸಿ ಅದನ್ನು ಮಾಡುತ್ತದೆ. ದರ ಪರಿಷ್ಕರಣೆ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಇತರೆಡೆಗಳಲ್ಲೂ ಆಗಿದೆ. ನಾನೂ ಗೊಂದಲದಲ್ಲಿ ಇದ್ದೇನೆ. ಏಕೆ ಹೆಚ್ಚಳವಾಗಿದೆ? ಎಂಬುದರ ಕುರಿತು ಮಾಹಿತಿ ಪಡೆದು ಆನಂತರ ತಿಳಿಸುತ್ತೇನೆ ಎಂದರು.
ವಿದ್ಯುತ್ ದರ ಮೂರು ಪಟ್ಟು ಹೆಚ್ಚಳವಾಗಬಾರದು. ಶೇ.10ರಷ್ಟು ಏರಿಕೆ ಮಾತ್ರ ಮಾಡಿದ್ದಾರೆ. ಏ.1ರಂದೇ ಆದೇಶ ಆಗಿರಬಹುದು. ಚುನಾವಣೆ ಹಿನ್ನೆಲೆಯಲ್ಲಿ ಕೊಟ್ಟಿಲ್ಲ ಎನಿಸುತ್ತದೆ. ಇದರಲ್ಲಿ ಹಿಂದಿನ ಸರ್ಕಾರ, ಮುಂದಿನ ಸರ್ಕಾರ ಎನ್ನುವ ಪ್ರಶ್ನೆಯೇ ಇಲ್ಲ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವೇ ಬೇರೆ. ಪಕ್ಷಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ. ಎರಡ್ಮೂರು ತಿಂಗಳು ಸೇರಿಸಿ ಬಿಲ್ ಕೊಟ್ಟಿರಬೇಕು. ಏಪ್ರಿಲ್, ಮೇ ತಿಂಗಳದ್ದು ಸೇರಿಸಿ ಬಿಲ್ ಕೊಟ್ಟಿರಬೇಕು ಎಂಬುದು ನನ್ನ ಅಂದಾಜು. ನಾನು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.
ವಿದ್ಯುತ್ ದರ ಏರಿಕೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡುತ್ತಿಲ್ಲ ಏಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು ಕೊಡಬೇಕು. ನೀವು ಸ್ವಲ್ಪ ಮಾಧ್ಯಮದವರು ಸರ್ಚ್ ಮಾಡಿ ಎಂದರು. ಎಲ್ಲಿ ಆಯ್ತು? ಏನ್ ಆಯ್ತು? ಇದೆಲ್ಲವೂ ಪೆನೆಲ್ ಡಿಸ್ಕಷನ್ ಆಗಬೇಕು ಎಂದರು.
ಕೈಗಾರಿಕೋದ್ಯಮಿಗಳ ಆಕ್ರೋಶ ಕಾನೂನು ಹೋರಾಟದ ಎಚ್ಚರಿಕೆ
ವಿದ್ಯುತ್ ದರ ಹೆಚ್ಚಳ ಖಂಡಿಸಿ ಜಿಲ್ಲಾ ವಾಣಿಜ್ಯ ಉದ್ಯಮಿಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಣ್ಣ ಕೈಗಾರಿಕೆಗಳ ಮಾಲೀಕರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರಾರಯಲಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬೆಳಗಾವಿ ಪೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ… ಬಂಡಾರೆ ಮಾತನಾಡಿ, ಈಗಾಗಲೇ ಎಲ್ಲ ಉದ್ಯಮಗಳು ಬಹಳ ಸಂಕಷ್ಟದಲ್ಲಿವೆ. ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಮತ್ತಷ್ಟುಸಮಸ್ಯೆ ಆಗಲಿದೆ. ಈಗಾಗಲೇ 30ಂದ 40ರಷ್ಟು ಉದ್ದಿಮೆಗಳು ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೆಲ್ಲ ಅರಿತು ಸರ್ಕಾರ ಕೂಡಲೇ ವಿದ್ಯುತ್ ದರ ಹೆಚ್ಚಳ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಹಿಂಪಡೆಯದಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನರ ಸಮಸ್ಯೆ ಪರಿಹರಿಸಲು ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿ: ಸಚಿವ ಸತೀಶ ಜಾರಕಿಹೊಳಿ
ಉದ್ಯಮಿ ರೋಹಣ ಜವಳಿ ಮಾತನಾಡಿ, ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಒಂದು ವಾರದೊಳಗೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಎಲ್ಲ ಉದ್ಯಮಗಳು ಹಾಗೂ ಕೈಗಾರಿಕೆಗಳನ್ನು ಬಂದ್ ಮಾಡಲಾಗುವುದು. ಅಲ್ಲದೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಸರ್ಕಾರ ಇದ್ಯಾವುದಕ್ಕೂ ಸ್ಪಂದಿಸದಿದ್ದರೆ, ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಉದ್ಯಮಿಗಳ ಜತೆ ಹೆಸ್ಕಾಂ ಎಂಡಿ ಸಭೆ
ವಿದ್ಯುತ್ ದರ ಹೆಚ್ಚಳ ಬಗ್ಗೆ ಉನ್ನತ ಮಟ್ಟದಲ್ಲಿ ಗಹನ ಚರ್ಚೆ ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ದರ ಕಡಿಮೆ ಆಗುವ ಸಾಧ್ಯತೆ ಕಂಡು ಬರುತ್ತಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹ್ಮದ ರೋಷನ್ ತಿಳಿಸಿದರು. ಬೆಳಗಾವಿ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಉದ್ಯಮಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಮತ್ತು ಹೆಸ್ಕಾಂ ಲೆಕ್ಕಚಾರದಂತೆ ವಿದ್ಯುತ್ ಬಿಲ… ಹಾಕಲಾಗುತ್ತಿದೆ. ದರ ಹೆಚ್ಚಳ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸರ್ಕಾರ ಇದಕ್ಕೆ ಪರಿಹಾರ ಸೂಚಿಸಿದರೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹ್ಮದ ರೋಷನ್ ತಿಳಿಸಿದರು.
ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ, ಸಣ್ಣ ಕೈಗಾರಿಕೆಗಳ ಸಂಘದ ಎಲ್ಲ ಪ್ರತಿನಿಧಿಗಳ ಮುಖಂಡರ ಜತೆ ಸಭೆ ನಡೆಸಿದ್ದೇವೆ. ವಿದ್ಯುತ್ ದರ ಏರಿಕೆ ಬಗ್ಗೆ ಪ್ರಶ್ನಿಸಿದ್ದು, ನಮ್ಮ ಅಧಿಕಾರಿಗಳ ತಂಡ ಎರಡು ತಾಸು ಚರ್ಚೆ ನಡೆಸಿದೆ ಎಂದು ಹೇಳಿದರು.