ಕಾಳಸಂತೆಯಲ್ಲಿ ಮಾರಾಟ ಮಾಡಲು ಈ ರೀತಿಯ ಕೃತ್ಯ: ಸಚಿವ ರಮೇಶ ಜಾರಕಿಹೊಳಿ| ಅಥಣಿ ಮತ್ತು ಕಾಗವಾಡ ಎರಡೂ ಮತಕ್ಷೇತ್ರಗಳಲ್ಲಿ ನೆರೆಯ ಮಹಾರಾಷ್ಟ್ರದಿಂದ ಮದ್ಯ ಬರುತ್ತಿಲ್ಲ| ಸ್ಥಳೀಯ ಮದ್ಯದ ಅಂಗಡಿ ಮಾಲೀಕರೇ ಕಾಳ ಸಂತೆಯಲ್ಲಿ ಕದ್ದು ಮಾರುತ್ತಿದ್ದಾರೆ ಎಂಬ ಮಾಹಿತಿ ಇದೆ|
ಅಥಣಿ(ಏ.20): ಕೆಲವು ಕಡೆ ಮದ್ಯದ ಅಂಗಡಿಗಳನ್ನು ಮಾಲೀಕರೆ ಕಳವು ಮಾಡುತ್ತಿದ್ದಾರೆ. ನಂತರ ತಮ್ಮ ಅಂಗಡಿಯಲ್ಲಿ ಮದ್ಯ ಕಳವಾಗಿದೆ ಎಂದು ನೆಪ ಹೇಳಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಾಲೂಕು ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಮದ್ಯದ ಅಂಗಡಿಗಳು ಕಳವಾಗಿವೆ, ಅಲ್ಲಿ ಸರಿಯಾಗಿ ತನಿಖೆ ಮಾಡಿ ಎಂದು ಪೊಲೀಸ್ ಮತ್ತು ಅಬಕಾರಿ ಇಲಾಖೆಗೆ ಸೂಚನೆಯನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
undefined
ಲಾಕ್‌ಡೌನ್ ಎಫೆಕ್ಟ್: ಬಾರ್‌ಗೆ ಕನ್ನ, 2 ಲಕ್ಷ ಮೌಲ್ಯದ ಮದ್ಯ ಕದ್ದ ಕಳ್ಳರು
ಅಥಣಿ ಮತ್ತು ಕಾಗವಾಡ ಎರಡೂ ಮತಕ್ಷೇತ್ರಗಳಲ್ಲಿ ನೆರೆಯ ಮಹಾರಾಷ್ಟ್ರದಿಂದ ಮದ್ಯ ಬರುತ್ತಿಲ್ಲ. ಸ್ಥಳೀಯ ಮದ್ಯದ ಅಂಗಡಿ ಮಾಲೀಕರೇ ಕಾಳ ಸಂತೆಯಲ್ಲಿ (ಕದ್ದು ಮಾರುತ್ತಿದ್ದಾರೆ) ಎಂಬ ಮಾಹಿತಿ ಇದೆ ಎಂದು ಅವರು ದೂರಿದರು.
ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚೆ:
ನಂತರ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಕೊರೋನಾ ಕುರಿತಾಗಿ ಸಭೆಯ ನಡೆಸಿದ ಸಚಿವ ರಮೇಶ ಜಾರಕಿಹೊಳಿ ಅವರು, ತಾಲೂಕಿನಲ್ಲಿ ಈವರೆಗೆ ಕೊರೋನಾ ಪ್ರಕರಣ ಕಂಡುಬಂದಿಲ್ಲ. ಹಾಗೆಂದ ಮಾತ್ರಕ್ಕೆ ಉದಾಸೀನ ಮಾಡಬಾರದು. ಜಿಲ್ಲೆ ಮತ್ತು ರಾಜ್ಯದ ನಾನಾ ಭಾಗಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸೂಚನೆ ನೀಡಿದರು.
ಕೊರೋನಾ ಸೋಂಕು ಒಂದು ಹಂತದಲ್ಲಿ ಹಿಡಿತದಲ್ಲಿದೆ. ಕೇವಲ ದೆಹಲಿಯ ತಬ್ಲಿಘಿಯ ಜಮಾತ್ ಧಾರ್ಮಿಕ ಸಭೆಗೆ ಹೋಗಿ ಬಂದವರಿಂದ ಜಿಲ್ಲೆಯ ಕುಡಚಿ ಮತ್ತು ಹಿರೇಬಾಗೇವಾಡಿಯಲ್ಲಿ ಹಬ್ಬಿತು. ಇದನ್ನು ಹಿಡಿತಕ್ಕೆ ತರುವಲ್ಲಿ ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳಿಂದ ಹಿಡಿದು ಕೆಳಹಂತದ ಎಲ್ಲ ಅಧಿಕಾರಿಗಳು ಬಹಳಷ್ಟುಶ್ರಮ ಪಟ್ಟಿದ್ದಾರೆ. ಇನ್ನೂ ಅದರ ನಿಯಂತ್ರಣಕ್ಕೆ ಶ್ರಮ ಹಾಕುತ್ತಿದ್ದಾರೆ ಎಂದು ಹೇಳಿದರು.
ಎನ್95 ಮಾಸ್ಕ್‌ಗಳನ್ನು ಕೆಲವು ವೈದ್ಯಕೀಯ ಸಿಬ್ಬಂದಿಗೆ ಬಳಸಲು ಸೂಚನೆ ನೀಡಲಾಗಿದೆ. ಇನ್ನುಳಿದವರು ಬಟ್ಟೆಯಿಂದ ತಯಾರಿಸಿ ಮಾಸ್ಕ್ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ನೆರೆಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಅಧಿಕಾರಿಗಳು ಹೆಚ್ಚು ಜಾಗೃತಿ ಮೂಡಿಸಲು ಆದ್ಯತೆ ನೀಡಬೇಕು. ಸೋಂಕು ನಿಯಂತ್ರಣಕ್ಕಾಗಿ ಎಷ್ಟುಸಾಧ್ಯವೋ ಅಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸೋಂಕು ಹರಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ಲಾಕ್‌ಡೌನ್ ಘೋಷಣೆ ಮಾಡಿವೆ. ಈ ಹಿನ್ನೆಲೆಯಲ್ಲಿ ವೈರಾಣು ಹರಡದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು. ಎಲ್ಲ ಗ್ರಾಮಗಳಿಗೆ ಮತ್ತು ಅಥಣಿ ನಗರಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಲು ಅಧಿಕಾರಿಗಳ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಾನು ಎಲ್ಲಿ ಹೋಗಿಲ್ಲ: ಶಾಸಕ ಕುಮಠಳ್ಳಿ
ನಾನು ಎಲ್ಲಿಯೂ ಹೋಗಿಲ್ಲ. ಅಥಣಿಯಲ್ಲೇ ಇದ್ದೇನೆ. ಕೊರೋನಾ ಸೋಂಕು ತಡೆಗಟ್ಟಲು ದಿನ ನಿತ್ಯ ಅಧಿಕಾರಿಗಳು ಯಾವ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ, ಅಲ್ಲದೆ ತಮ್ಮ ಕರ್ತವ್ಯದಲ್ಲಿ ಮುಂದೆ ಏನು ಮಾಡಬೇಕು ಎಂದು ಸೂಚನೆ ನೀಡುತ್ತಿದ್ದೇನೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಪ್ರಚಾರದ ಹುಚ್ಚು ಇಲ್ಲ. ಕೆಲಸವೆ ನನ್ನ ಗುರಿ. ಜನರ ರಕ್ಷಣೆ ನನಗೆ ಮುಖ್ಯ. ಯಾರ ಟೀಕೆಗೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಕೊರೋನಾ ಸೋಂಕು ತಡೆಗಟ್ಟಲು ದುಡಿಯಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳವುದಕ್ಕೆ ನಾನು ಮನೆಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.