'ಸಿದ್ದರಾಮಯ್ಯಗೆ ನಾಚಿಕೆ, ಮಾನ-ಮರ್ಯಾದೆ ಇದ್ದಿದ್ದರೆ ರಾಜೀನಾಮೆ ನೀಡಬೇಕಿತ್ತು'

By Web DeskFirst Published Nov 30, 2019, 9:37 AM IST
Highlights

ರಾಜೀನಾಮೆ ಸ್ವಾಭಿಮಾನದ ನಿರ್ಧಾರ ಮಾಧುಸ್ವಾಮಿ|ಸ್ವಂತ ಕ್ಷೇತ್ರದಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಾಗದ ಸಿದ್ದರಾಮಯ್ಯಗೆ ಯಡಿಯೂರಪ್ಪ ಹಾಗೂ ಬಿಜೆಪಿಯ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ| 

ಹಿರೇಕೆರೂರು(ನ.30): 17 ಜನ ಶಾಸಕರು ತಮ್ಮ ಸ್ಥಾನಕ್ಕೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದನ್ನು ಪಕ್ಷಾಂತರ ಎಂದು ಕರೆಯುವುದು ತಪ್ಪು. ಇದು ಅವರ ಸ್ವಾಭಿಮಾನ ನಿರ್ಧಾರ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಶ್ಲೇಷಿಸಿದ್ದಾರೆ. 

ಅವರು ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕುಗಳ ಮಡ್ಲೂರು, ಗುಡ್ಡದಮಾದಾಪುರ, ಅಣಜಿ, ತಡಕನಹಳ್ಳಿ ಹಳಿಯಾಳ ಪುರದಕೇರಿ, ಕಿರಗೇರಿ, ಚಿಕ್ಕಮತ್ತೂರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್‌ ಮತಯಾಚನೆ ನಡೆಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸ್ವಂತ ಕ್ಷೇತ್ರದಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಾಗದ ಸಿದ್ದರಾಮಯ್ಯಗೆ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿಯ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ನಾಚಿಕೆ, ಮಾನ -ಮರ್ಯಾದೆ ಇದ್ದರೆ ಇಷ್ಟೊತ್ತಿಗೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಮನೆಗೆ ಹೋಗಬೇಕಿತ್ತು. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರ ದ್ವೇಷ ಸಾಧನೆ, ಕುತಂತ್ರದಿಂದ ಸ್ಪೀಕರ್‌ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ರಾಜೀನಾಮೆ ನೀಡಿದ್ದ 17 ಜನ ಶಾಸಕರನ್ನು ಅನರ್ಹ ಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂಥ ಘಟನೆ. ಎಲ್ಲ ಶಾಸಕರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಗಳಿಂದ ಹಾಗೂ ಸಮಿಶ್ರ ಸರಕಾರದ ಪ್ರಮುಖ ನಾಯಕರ ಕಚ್ಚಾಟಗಳಿಂದ ಬೇಸರಗೊಂಡು ಪಕ್ಷದಿಂದ ಹೊರಬಂದಿದ್ದಾರೆ ಎಂದರು.

ರಾಜೀನಾಮೆ ನೀಡಿದ ಬಿ.ಸಿ. ಪಾಟೀಲ ಹಾಗೂ ಅವರ ಗೆಳೆಯರ ಸಹಕಾರದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಇದು ಕೇವಲ ಆ ಶಾಸಕರ ಆಸೆ ಆಗಿರಲಿಲ್ಲ ಇದು ರಾಜ್ಯದ 6 ಕೋಟಿ ಕನ್ನಡಿಗರ ಆಸೆಯಾಗಿತ್ತು. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ, ಶೋಷಣೆಗೆ ಒಳಗಾದವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಹಿರೇಕೆರೂರು ತಾಲೂಕಿನಲ್ಲಿ ಯು.ಬಿ. ಬಣಕಾರ ಹಾಗೂ ಬಿ.ಸಿ. ಪಾಟೀಲ್‌ ಎಂಬ ಎರಡು ಶಕ್ತಿಗಳು ಒಂದಾಗಿದ್ದು ಉಪಚುನಾವಣೆ ರಾಜ್ಯಕ್ಕೆ ಮಾದರಿಯಾಗಲಿದೆ ಎಂದರು.

ಉಪಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಹಾಗೂ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಮತಗಟ್ಟೆಗೆ ಕರೆದುಕೊಂಡು ಬಂದು ಮತ ಹಾಕಿಸಬೇಕು, ಅಂದಾಗ ಮಾತ್ರ ನಮ್ಮ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲು ಸಾಧ್ಯ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಲನಚಿತ್ರ ನಟಿ ಶೃತಿ, ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ತಾಲೂಕು ಅಧ್ಯಕ್ಷ ಎಸ್‌.ಆರ್‌. ಅಂಗಡಿ, ಮಹೇಶ ಗುಬ್ಬಿ, ಚುನಾವಣಾ ಉಸ್ತುವಾರಿ ಎಸ್‌. ದತಾತ್ರೇಯ, ನಿಂಗಪ್ಪ ಚಳಗೇರಿ, ರಾಘವೇಂದ್ರ ರಂಗಕ್ಕನವರ, ಮನೋಜ ಹಾರ್ನಳ್ಳಿ ಇತರರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!