ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನು ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕು. ಇದರ ಬದಲಾಗಿ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ(ಜ.09): ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಸಹ ಮುಂಬೈ ಪ್ರಾಂತ್ಯದಲ್ಲಿತ್ತು, ಹಿಂದಿನಿಂದಲೂ ಕನ್ನಡಿಗರು - ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯವನ್ನು ನಾನು ವ್ಯಕ್ತಪಡಿಸಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೇ ಅಸ್ಥಿತ್ವದಲ್ಲೇ ಇಲ್ಲದ್ದರಿಂದ ಅಂತಹ ಅರ್ಥ ಕಲ್ಪಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ನಿಪ್ಪಾಣಿ ತಾಲೂಕಿನ ಕಾರದಗಾದಲ್ಲಿ ನಡೆದ ಕನ್ನಡ ಸಮಾವೇಶದಲ್ಲಿ ತಾವು ಆಡಿದ ಮಾತುಗಳಿಗೆ ಸ್ಪಷ್ಟನೆ ನೀಡಿರುವ ಅವರು, ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನು ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕು. ಇದರ ಬದಲಾಗಿ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂದಿದ್ದಾರೆ.
ಬೆಳಗಾವಿ ವಿವಾದ: ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ, ಜೆಡಿಎಸ್ ಕಿಡಿ
ನಾನು ಹೆಮ್ಮೆಯ ಕನ್ನಡತಿಯಾಗಿ, ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡು ಭಾಗವಹಿಸಿದ್ದೆ. ಗಡಿ ಭಾಗದಲ್ಲಿ ಇಷ್ಚೊಂದು ಉತ್ಸಾಹದಿಂದ ಅಲ್ಲಿನ ಕನ್ನಡಿಗರು - ಮರಾಠಿ ಭಾಷಿಕರೆಲ್ಲ ಸೇರಿ ಕನ್ನಡ ಸಮಾವೇಶ ನಡೆಸುತ್ತಿರುವುದನ್ನು ತಿಳಿದು, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ ಎಂದರು.
ಕಾರದಗಾ ಕನ್ನಡ ಸಮಾವೇಶಕ್ಕೆ ಮುಂದಿನ ವರ್ಷದಿಂದ ರಾಜ್ಯ ಸರಕಾರದ ಆರ್ಥಿಕ ಸಹಾಯ ಒದಗಿಸುವ ಮತ್ತು ಅಲ್ಲಿನ ಸಂಘಟನೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುವ ಮೂಲಕ ಅವರ ಉತ್ಸಾಹವನ್ನು ಹೆಚ್ಚಿಸಿದ್ದೇನೆ ಎಂದು ಹೇಳಿದ್ದಾರೆ.