* ಕೋವಿಡ್ ಹಿನ್ನೆಲೆಯಲ್ಲಿ ಡಿಸೆಂಬರ್‌ವರೆಗೂ ಚುನಾವಣೆ ಬೇಡ
* 3 ಪಾಲಿಕೆ ಚುನಾವಣೆ ಘೋಷಣೆ ನಿರ್ಧಾರಕ್ಕೆ ಈಶ್ವರಪ್ಪ ಅಸಮಾಧಾನ
* ಚುನಾವಣಾ ಆಯೋಗದ ನಿರ್ಧಾರ ಟೀಕಿಸಲು ಹೋಗುತ್ತಿಲ್ಲ
ಬೆಳಗಾವಿ(ಆ.12): ಬೆಳಗಾವಿ ಸೇರಿ ಮೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ನನಗಂತೂ ಅಚ್ಚರಿ ಉಂಟುಮಾಡಿದೆ. ಚುನಾವಣಾ ಆಯೋಗ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ನನಗೆ ಸಮಾಧಾನ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಕಡೆ ಕೋವಿಡ್ ಕೋವಿಡ್ ಎನ್ನುತ್ತಾರೆ. ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ಮಾಡುತ್ತಿದ್ದೇವೆ. ಚುನಾವಣೆ ಘೋಷಣೆ ಬಗ್ಗೆ ಹೇಳುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆ ಮಾಡಲೇಬೇಕು ಎನ್ನುವುದು ಏನಿದೆ? ಅವರನ್ನು ಯಾರು ಕೇಳಿದರು? ಡಿಸೆಂಬರ್‌ವರೆಗೂ ಯಾವ ಚುನಾವಣೆಯೂ ಬೇಡ ಎಂಬುದು ನಮ್ಮ ಅಭಿಪ್ರಾಯ. ಎಜಿ ಹತ್ತಿರ ಮಾತನಾಡಿ ಯಾವುದೇ ಕಾರಣಕ್ಕೂ ಚುನಾವಣೆ ಬೇಡ ಎಂದು ವರದಿ ಕೊಟ್ಟಿದ್ದೇವೆ ಎಂದರು.
'ಸಿದ್ದರಾಮಯ್ಯಗೆ ನಿತ್ಯ ಕೆಟ್ಟಕನಸು : ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ'
ನಾನು ದ ನಿರ್ಧಾರವನ್ನು ಟೀಕಿಸಲು ಹೋಗುತ್ತಿಲ್ಲ. ಬೆಳಗಾವಿ, ಕಲಬುರಗಿ ಮಹಾರಾಷ್ಟ್ರದ ಗಡಿ ಪ್ರದೇಶಗಳು. ಕೋವಿಡ್ ಮೂರನೇ ಅಲೆ ಬಗ್ಗೆ ಹುಷಾರಾಗಿರಿ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಕೋರ್ಟ್‌ಗಳು ಕೂಡ ಇದನ್ನೇ ಹೇಳುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದರೆ ನಾವು ಯಾರನ್ನು ಕೇಳಬೇಕು? ಚುನಾವಣೆ ಯಾವಾಗ ಮಾಡಬೇಕು ಎನ್ನುವ ವಿಚಾರದಲ್ಲಿ ಆಯೋಗಕ್ಕೆ ಪೂರ್ಣ ಅಧಿಕಾರವಿದೆ. ಹೀಗಾಗಿ ನಮಗೆ ವಿಧಿ ಇಲ್ಲ. ಚುನಾವಣೆ ಘೋಷಣೆಯಾದ ನಂತರ ಮಾಡಲೇಬೇಕು. ಒಂದು ರಾಜಕೀಯ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ಚುನಾವಣೆಯನ್ನೂ ಎದುರಿಸುತ್ತೇವೆ. ಯಾರು ಗೆಲ್ಲುತ್ತಾರೋ? ಸೋಲುತ್ತಾರೋ ಎನ್ನುವುದು ಬೇರೆ ಪ್ರಶ್ನೆ. ಕೋವಿಡ್ ಸಂದರ್ಭದಲ್ಲಿ ಚುನಾವಣೆಗೆ ಅಂತಹ ತುರ್ತು ಏನಿತ್ತು ಎಂದು ಆಯೋಗವನ್ನು ಪ್ರಶ್ನಿಸಿದರು.
ಕೋರ್ಟ್ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸರ್ಕಾರದಿಂದ ವರದಿ ಕೇಳಿದೆ. ನಾವು ವರದಿ ಕೊಡುತ್ತಿದ್ದೇವೆ. ಅಷ್ಟರಲ್ಲೇ ಚುನಾವಣೆ ಘೋಷಣೆ ಮಾಡಿದರೆ ನಾವೇನು ಹೇಳಲಿ ಎಂದರು.