'ಭಾರತ ಇತರೆ ರಾಷ್ಟ್ರಗಳಿಗೂ ಸಾಲ ನೀಡುವಷ್ಟು ಆರ್ಥಿಕ ಸದೃಢತೆ ಹೊಂದಿದೆ'

By Suvarna News  |  First Published Dec 26, 2019, 9:27 AM IST

ನೋಟು ಅಮಾನ್ಯ, ಜಿಎಸ್‌ಟಿಯಿಂದ ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದ ಸಚಿವ ಈಶ್ವರಪ್ಪ| ಪರದೇಶಗಳಲ್ಲಿ ಮಹಿಳೆಯರನ್ನು ಭೋಗದ ವಸ್ತುಗಳಂತೆ ಕಾಣುತ್ತಾರೆ| ಮಹಿಳೆಯರಿಗೆ ಮಾತೃಸ್ಥಾನ ನೀಡಿರುವುದು ಭಾರತದಲ್ಲಿ ಮಾತ್ರ| ನದಿ, ಭೂಮಿಗೆ ಹೆಣ್ಣಿನ ಹೋಲಿಕೆ ಮಾಡುವ ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿ|


ಹರಪನಹಳ್ಳಿ(ಡಿ.26): ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಎನ್ನುವವರು ಪ್ರಸ್ತುತ ಇತರೆ ರಾಷ್ಟ್ರಗಳಿಗೆ ಭಾರತ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಆರ್ಥಿಕ ಸ್ಥಿತಿ ಇನ್ನಷ್ಟು ಸುಧಾರಿಸಿದೆ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಅವರು ಪಟ್ಟಣದ ಎಸ್‌ಸಿಎಸ್‌ ಔಷಧ ಮಹಾವಿದ್ಯಾಲಯದ ಜ್ಞಾನಗಂಗೋತ್ರಿ ಆವರಣದಲ್ಲಿ ಬುಧವಾರ ಟಿ.ಎಂ.ಎ.ಇ. ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ತೆಗ್ಗಿನಮಠದ ಲಿಂ. ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮಿಯ ಐದನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಪಟ್ಟಾಧಿಕಾರ ಚತುರ್ಥ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿಂದೆ ಸಾಲಕೂಪದಲ್ಲಿದ್ದ ದೇಶ ಪ್ರಸ್ತುತ 50 ರಾಷ್ಟ್ರಗಳಿಗೂ ಸಾಲ ನೀಡುವಷ್ಟು ಆರ್ಥಿಕ ಸದೃಢತೆ ಹೊಂದಿದೆ. ಮಠ ಮಾನ್ಯಗಳು ಧರ್ಮ ಮತ್ತು ಸಂಸ್ಕೃತಿ ರಕ್ಷಕರಾಗಿದ್ದಾರೆ. ಇವರ ಆಶೀರ್ವಾದವೇ ದೇಶದ ಆರ್ಥಿಕ ಸಭಲತೆಗೆ ಕಾರಣವಾಗಿದೆ.

ಪರದೇಶಗಳಲ್ಲಿ ಮಹಿಳೆಯರನ್ನು ಭೋಗದ ವಸ್ತುಗಳಂತೆ ಕಾಣುತ್ತಾರೆ. ಮಹಿಳೆಯರಿಗೆ ಮಾತೃಸ್ಥಾನ ನೀಡಿರುವುದು ಭಾರತದಲ್ಲಿ ಮಾತ್ರ. ನದಿ, ಭೂಮಿಗೆ ಹೆಣ್ಣಿನ ಹೋಲಿಕೆ ಮಾಡುವ ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮುನ್ನೂರು ಕೋಟಿ ದೇವರುಗಳನ್ನು ಪೂಜಿಸುವ ಭಾರತೀಯರಿಗೆ ಪೈಗಂಬರ್‌ ಮತ್ತು ಯೇಸು ಹೊರೆಯಾಗುತ್ತಾರೆಯೇ, ಭಾರತೀಯರು ರಾಷ್ಟ್ರದ ವಿಷಯದಲ್ಲಿ ಜಾತಿ ಭೇದ ಮರೆತು ರಕ್ಷಣಗೆ ಮುಂದಾಗುತ್ತಾರೆ ಎಂದರು.

ವಿಜಯನಗರ ಶಾಸಕ ಆನಂದ್‌ ಸಿಂಗ್‌ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಚಾಣಕ್ಯನಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದವನಿಗೆ ಗೆಲುವು ಸಾಧ್ಯ. ಶಿಕ್ಷಣ ಕೇಂದ್ರಗಳು ಕಾರ್ಖಾನೆಗಳಂತೆ, ವಿವಿಧ ರಂಗದಲ್ಲಿ ಸಾಧಕರನ್ನು ಹುಟ್ಟು ಹಾಕುತ್ತವೆ. ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ತೆಗ್ಗಿನಮಠದೊಂದಿಗೆ ನನ್ನ ಅವಿನಾವಾಭಾವ ಸಂಬಂಧವಿದೆ. ಈ ಮಠಕ್ಕೆ ರಾಜಕಾರಣದಲ್ಲಿರುವವರೆಗೂ ಸಹಾಯಹಸ್ತಕ್ಕೆ ಸಿದ್ಧನಿದ್ದೇನೆ ಎಂದರು.

ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ. ದೇಶ ಮತ್ತು ಧರ್ಮ ಎರಡು ಕಣ್ಣುಗಳಂತೆ, ಧರ್ಮ ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ದೇಶದ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು. ವಿಜಯನಗರ ಕ್ಷೇತ್ರದ ಆನಂದ್‌ ಸಿಂಗ್‌ಗೆ ಸಚಿವ ಸ್ಥಾನ ಖಚಿತವಾಗಲಿದೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಜನರ ವಿಶ್ವಾಸ ಗಳಿಸಿ ಸೇವೆ ಸಲ್ಲಿಸಿರಿ ಎಂದು ಸಲಹೆ ನೀಡಿದರು.

ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ. ಪದಾರ್ಥಗಳನ್ನು ಪ್ರಸಾದ ಮಾಡುವ ಶಕ್ತಿ ಗುರುಗಳಿಗಿದೆ. ಮಠಗಳು ಸಂಸ್ಕಾರ ಕಲಿಸುವ ಕೇಂದ್ರಗಳು. ಎಲ್ಲರಿಗೂ ಶಿವದೀಕ್ಷೆ ನೀಡಿ, ಭಕ್ತರೊಂದಿಗೆ ಅವಿನಾಭಾವ ಸಂಬಂಧವನ್ನು ಮಠ ಮಾನ್ಯಗಳು ಹೊಂದಿರಬೇಕು. ಅಂತಹ ಮಠಗಳಲ್ಲಿ ತೆಗ್ಗಿನಮಠ ಮುಂಚುಣಿಯಲ್ಲಿದೆ ಎಂದರು.

ಎಸ್‌.ಆರ್‌. ನವಲಿ ಹಿರೇಮಠ್‌, ಟಿ.ಎಂ. ಕೊಟ್ರೇಶ್‌, ಶಶಿಕುಮಾರ್‌ ಮೆಹರ್ವಾಡೆ, ಜ್ಯೋತಿ ಟಿ.ಎಂ. ಕಿರಣ್‌ ಕುಮಾರ್‌, ರವಿಶಂಕರ್‌ಗೌಡರವರಿಗೆ ಸನ್ಮಾನಿಸಲಾಯಿತು. ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ, ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ, ವಡ್ಡಹಟ್ಟಿಮಠದ ವೀರಯ್ಯಶ್ರೀ, ಮಾನಿಹಳ್ಳಿ ಪುರವರ್ಗಮಠದ ಮಳೆಯೋಗೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿದ್ದರು.

ಟಿಎಂಎಇ ಸಂಸ್ಥೆಯ ಆಡಳಿತಾಧಿಕಾರಿ ಟಿ.ಎಂ. ಚಂದ್ರಶೇಖರಯ್ಯ, ಪ್ರಾಚಾರ್ಯ ಡಾ. ನಾಗೇಂದ್ರ, ಭಂಗಿ ಬಸಪ್ಪ ಕಾಲೇಜು ಪ್ರಾಚಾರ್ಯ ಅರುಣ್‌ ಕುಮಾರ್‌, ಸಂಸ್ಥೆಯ ಅಧಿಕಾರಿ ಟಿ.ಎಂ. ಶಿವಶಂಕರ್‌, ಗುರುನಾಥ್‌, ಸಿ.ಎಂ. ಕೊಟ್ರಯ್ಯ ಹಾಗೂ ಇತರರು ಉಪಸ್ಥಿತರಿದ್ದರು.
 

click me!