ಕೊರೋನಾ ಸರಪಳಿ ತಡೆಗೆ ಇದು ಅನಿವಾರ್ಯ, ಸಾರ್ವಜನಿಕರು ಸಹಕರಿಸಲಿ| ಮದುವೆ ಪಾಸ್‌ಗಳ ವಿತರಣೆಯಲ್ಲಿ ಕೆಲವೊಂದು ಕಠಿಣ ಕ್ರಮ| ಮದುವೆ ಪಾಸ್‌ಗಳ ನಿಯಮಗಳ ಸರಳೀಕರಣ ಮಾಡಲು ಸೂಚನೆ: ಶೆಟ್ಟರ್|
ಹುಬ್ಬಳ್ಳಿ(ಏ.24): ರಾಜ್ಯ ಸರ್ಕಾರ ಕೋವಿಡ್ ತಾಂತ್ರಿಕ ತಜ್ಞರ ಸಲಹಾ ಸಮಿತಿ ಶಿಫಾರಸಿನ ಮೇಲೆ ಸೆಮಿಲಾಕ್‌ಡೌನ್ ಘೋಷಿಸಿದೆ. ಕೋವಿಡ್ ಸರಪಳಿಗೆ ಬ್ರೇಕ್ ಹಾಕಬೇಕು ಎಂಬ ಉದ್ದೇಶದಿಂದ ಕಠಿಣ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಇಲ್ಲಿನ ಕಿಮ್ಸ್‌ನಲ್ಲಿ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ನೂತನ ಡಯಾಲಿಸಿಸ್ ಹಾಗೂ ಕಿಡ್ನಿ ಟ್ರಾನ್ಸ್ ಪ್ಲ್ಯಾಂಟ್ ಸೆಂಟರ್ ಘಟಕದ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸರ್ಕಾರದ ನಿಯಮಗಳಿಂದ ಸಾರ್ವಜನಿಕರಿಗೆ ತೊಂದರೆ ಆಗಬಹುದು. ಆದರೆ ಸದ್ಯ ಇದು ಅನಿವಾರ್ಯ. ಜನತೆ ಸಹಕರಿಸಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆ ದಿನ ನಿತ್ಯ ಹೆಚ್ಚಳವಾಗುತ್ತಿರುವುದರಿಂದ ಈ ಸರಪಳಿಯನ್ನು ಮುರಿಯಬೇಕಿದೆ ಎಂದರು.
ಕೊರೋನಾ ರಣಕೇಕೆ ಮಧ್ಯೆ ಧಾರವಾಡ ಜಿಲ್ಲೆಯಲ್ಲಿಲ್ಲ ಆಕ್ಸಿಜನ್ ಟೆನ್ಶನ್..!
ಧಾರವಾಡ ಜಿಲ್ಲೆಯಲ್ಲಿ ಬೆಡ್‌ಗಳ ಸಮಸ್ಯೆಯಿಲ್ಲ. ರೆಮಿಡಿಸಿವಿರ್, ಆಕ್ಸಿಜನ್, ಲಸಿಕೆಗಳ ಕೊರತೆ ಇಲ್ಲ. ಕಿಮ್ಸ್ ಹಾಗೂ ಜಿಲ್ಲಾಸ್ಪತ್ರೆಗಳು ಉತ್ತಮ ಕೆಲಸ ನಿರ್ವಹಿಸುತ್ತಿವೆ. ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ದರ ನಿಗದಿ:
ಖಾಸಗಿ ಆಸ್ಪತ್ರೆಗಳು ಈ ಸಲ ಉತ್ತಮವಾಗಿ ಸ್ಪಂದಿಸುತ್ತಿವೆ. ಕಳೆದ ಸಲ ಖಾಸಗಿ ಆಸ್ಪತ್ರೆಗಳಲ್ಲೂ ಭೀತಿ ಇತ್ತು. ಹೀಗಾಗಿ ಅವುಗಳ ಸಹಕಾರ ಅಷ್ಟೊಂದು ಸಿಕ್ಕಿರಲಿಲ್ಲ. ಆದರೆ ಈ ಸಲ ಪರಿಸ್ಥಿತಿ ಆ ರೀತಿ ಇಲ್ಲ. ಖಾಸಗಿ ಆಸ್ಪತ್ರೆಗಳೇ ಈಗಾಗಲೇ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿವೆ. ಇನ್ನೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೂ ಕಳೆದ ವರ್ಷದ ದರವನ್ನೇ ನಿಗದಿಪಡಿಸಲಿವೆ. ಈಗಾಗಲೇ ಜಿಲ್ಲಾಧಿಕಾರಿ ಸ್ವತಃ ಖಾಸಗಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ ಕೋವಿಡ್ ಸೋಂಕಿತರಿಗೆ ಕಾಯ್ದಿರಿಸಬೇಕಾದ ಬೆಡ್‌ಗಳ ಸಂಖ್ಯೆ ನಿರ್ಧರಿಸಿದ್ದಾರೆ. ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.
ಪಾಲಿಕೆ ವತಿಯಿಂದ ನಗರದಲ್ಲಿ ಸೋಂಕು ನಿವಾರಣೆಗೆ ನೈರ್ಮಲೀಕರಣ ಕೈಗೊಳ್ಳಲು ಸೂಚನೆ ನೀಡಲಾಗುವುದು. ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಹೆಚ್ಚು ಪ್ರಚಾರ ನೀಡಲಾಗುವುದು ಎಂದರು. ಮದುವೆ ಪಾಸ್‌ಗಳ ವಿತರಣೆಯಲ್ಲಿ ಕೆಲವೊಂದು ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಆದರೆ ಇವು ಮದುವೆ ಆಯೋಜಕರಿಗೆ ಕಷ್ಟವಾಗುತ್ತಿದೆ. ಆದಷ್ಟು ಮದುವೆ ಪಾಸ್‌ಗಳ ನಿಯಮಗಳ ಸರಳೀಕರಣ ಮಾಡಲು ಸೂಚಿಸಲಾಗುವುದು ಎಂದರು.