ಧಾರವಾಡ: ಜಿಲ್ಲೆಯ ಪ್ರತಿ ಹಳ್ಳಿಗೂ ಮಲಪ್ರಭೆ ನೀರು, ಶೆಟ್ಟರ್

By Kannadaprabha NewsFirst Published Feb 9, 2020, 7:35 AM IST
Highlights

ಜಿಲ್ಲೆಯ 399 ಹಳ್ಳಿಗಳಿಗೆ ಕುಡಿಯಲು ಮಲಪ್ರಭಾ ನದಿಯ ನೀರು ಸರಬರಾಜು| ಶೀಘ್ರ ಜಾರಿಗೆ ಕ್ರಮ: ಸಚಿವ ಜಗದೀಶ ಶೆಟ್ಟರ್‌| ನೂತನ ಜಲಶುದ್ಧೀಕರಣ ಘಟಕದ ಉದ್ಘಾಟನೆ|
 

ಧಾರವಾಡ(ಫೆ. 09): ಜಿಲ್ಲೆಯಲ್ಲಿ ಈಗಾಗಲೇ ಮಲಪ್ರಭಾ ಜಲಾಶಯದ ನೀರು ಪಡೆಯುತ್ತಿರುವ ಹಳ್ಳಿಗಳು ಸೇರಿದಂತೆ ಜಿಲ್ಲೆಯ 399 ಹಳ್ಳಿಗಳಿಗೆ ಕುಡಿಯಲು ಮಲಪ್ರಭಾ ನದಿಯ ನೀರನ್ನು ಸರಬರಾಜು ಮಾಡಲು 1300 ಕೋಟಿ ಅಂದಾಜು ಮೊತ್ತದ ಸಮಗ್ರ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಅಮ್ಮಿನಭಾವಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಹು-ಧಾ ಪಾಲಿಕೆ ಆಶ್ರಯದಲ್ಲಿ ನಿರ್ಮಿಸಿರುವ 40 ಎಂಎಲ್‌ಡಿ ಸಾಮರ್ಥ್ಯದ ನೂತನ ಜಲಶುದ್ಧೀಕರಣ ಘಟಕದ ಉದ್ಘಾಟನೆ ಹಾಗೂ ಯಂತ್ರಾಗಾರದಲ್ಲಿ ಅಳವಡಿಸಿರುವ ನೂತನ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಮಾತನಾಡಿ, ಪಾಲಿಕೆಯ ಠೇವಣಿ ಹಣದಲ್ಲಿನ 26 ಕೋಟಿ ಅನುದಾನದಲ್ಲಿ ಅನುಷ್ಠಾನಗೊಳಿಸಿರುವ ಈ ನೂತನ ಜಲಶುದ್ಧೀಕರಣ ಘಟಕದಿಂದ ಅವಳಿನಗರಕ್ಕೆ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸಲು ಅನುಕೂಲವಾಗಲಿದೆ ಎಂದರು.

ಈ ಕಾಮಗಾರಿಗೆ ಜನವರಿ 2019ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಡಿಸೆಂಬರ್‌ ಹೊತ್ತಿಗೆ ಕಾಮಗಾರಿ ಪೂರ್ಣವಾಗಿ ಸಿದ್ಧಗೊಂಡಿತು. ಯೋಜನೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಯೋಜನಾ ಬದ್ಧವಾಗಿ ಅಂದಿನ ಮುಖ್ಯ ಅಭಿಯಂತರರಾಗಿದ್ದ ಡಿ.ಎಲ್‌.ರಾಜು ಅವರ ನೇತೃತ್ವದಲ್ಲಿ ಜಲಮಂಡಳಿಯ ಅಧಿಕಾರಿಗಳು ಸಮಯ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಬರುವ ಬೇಸಿಗೆ ಒಳಗಡೆ ಯೋಜನೆ ಪೂರ್ಣಗೊಂಡಿದ್ದರಿಂದ ಅವಳಿ ನಗರಕ್ಕೆ ಉಂಟಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಿದ್ದಾರೆ ಎಂದು ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ಬದ್ಧತೆಯನ್ನು ಮೆಚ್ಚಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾನಗರದ ಒಟ್ಟು 64 ವಾರ್ಡ್‌ಗಳ ಪೈಕಿ ಈಗಾಗಲೇ 11 ವಾರ್ಡ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಮತ್ತು 15 ವಾರ್ಡ್‌ಗಳ ಭಾಗಶಃ ಪ್ರದೇಶಕ್ಕೆ ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಲ್ಲ ವಾರ್ಡುಗಳಿಗೂ ನಿರಂತರ ನೀರು ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂೂರ್ಣಗೊಂಡು ಕಾಮಗಾರಿ ನಿರ್ವಹಿಸುವ ಗುತ್ತಿಗೆ ಕಂಪನಿಯ ಅನುಮೋದನೆಗಾಗಿ ಆರ್ಥಿಕ ನೆರವು ನೀಡಲಿರುವ ವಿಶ್ವಬ್ಯಾಂಕ್‌ಗೆ ಸಲ್ಲಿಸಲಾಗಿದೆ. ಸದ್ಯದಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುವುದು ಎಂದರು.

ಮಹಾನಗರದ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ಮಾಡಲು ಪ್ರತಿ ದಿನಕ್ಕೆ ಸುಮಾರು 200 ಎಂಎಲ್‌ಡಿ ನೀರಿನ ಅಗತ್ಯವಿದೆ. ಹುಬ್ಬಳ್ಳಿ ಮಹಾನಗರಕ್ಕೆ ನೀರಸಾಗರ ಜಲಾಶಯದಿಂದ ಸುಮಾರು 40 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿತ್ತು. ಆದರೆ ಜಲಾಶಯ ಬತ್ತಿದ್ದರಿಂದ ಮಲಪ್ರಭಾ ಜಲಾಶಯದಿಂದ ಪಡೆಯುತ್ತಿದ್ದ 160 ಎಮ್‌ಎಲ್‌ಡಿ ನೀರಿನ ಮೇಲೆ ಅವಳಿ ನಗರ ಅವಲಂಬಿಸಬೇಕಾಯಿತು. ಇದರಿಂದಾಗಿ ಬೇಸಿಗೆ ಕಾಲದಲ್ಲಿ 8-10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕಾಯಿತು. ಈ ಸಮಸ್ಯೆ ಪರಿಹರಿಸಲು ಸುಮಾರು 26 ಕೋಟಿ ಮೊತ್ತದಲ್ಲಿ ಮಲಪ್ರಭಾ ಜಲಾಶಯದಿಂದ ನೀರು ತರಲು ಸವದತ್ತಿ ಜಾಕ್ವೆಲ್‌ ಹಾಗೂ ಅಮ್ಮಿನಭಾವಿ ಪಂಪ್‌ಹೌಸ್‌ ಹೊಸ ಯಂತ್ರೋಪಕರಣ, ಪಂಪ್‌ಸೆಟ್‌ಗಳ ಅಳವಡಿಕೆ ಹಾಗೂ ಅಮ್ಮಿನಭಾವಿಯಲ್ಲಿ 40 ಎಂಎಲ್‌ಡಿ ಸಾಮರ್ಥ್ಯದ ಹೊಸ ಜಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.

ಅವಳಿ ನಗರದಲ್ಲಿ ಅನುಷ್ಠಾನದಲ್ಲಿರುವ ಕೇಂದ್ರ ಸರ್ಕಾರದ ಅಮೃತ ಯೋಜನೆಯ ಮೊದಲ ಹಂತದಲ್ಲಿದ್ದು, ಎಲ್ಲ ಮನೆಗಳಿಗೂ ಅಮೃತ ಯೋಜನೆಯಡಿ ಸಂಪರ್ಕ ಕಲ್ಪಿಸಲು ಹೆಚ್ಚವರಿಗಾಗಿ 2ನೇ ಹಂತದ ಅಮೃತ ಯೋಜನೆಯಲ್ಲಿ ಸುಮಾರು 400 ಕೋಟಿ ಮೊತ್ತದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಸೃಷ್ಟಿಯಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಮೂಲಕ ಎಲ್ಲ ಕಾಲದಲ್ಲೂ ನೀರು, ಭೂಮಿ, ಹಸಿರು ಸಮೃದ್ಧವಾಗಿ ಸಿಗುವಂತೆ ಕಾಳಜಿ ವಹಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನೀರು ಅಮೃತಕ್ಕೆ ಸಮಾನ. ಅದನ್ನು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದರು.

ಕೇಂದ್ರ ಸರ್ಕಾರವು ಹರ ಘರ-ನಲ್‌ ಜಲ್‌ ಯೋಜನೆಯಡಿ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ 3.5 ಲಕ್ಷ ಕೋಟಿ ಅನುದಾನವನ್ನು ನೀಡಲು ಯೋಜನೆ ರೂಪಿಸಿದೆ. ಈ ಯೋಜನೆಯಡಿ 2024ರೊಳಗಾಗಿ ಪ್ರತಿ ವ್ಯಕ್ತಿಗೆ ಪ್ರತಿ ದಿನಕ್ಕೆ ಸರಿಸುಮಾರು 50 ಲೀಟರ್‌ ನೀರು ಪೂರೈಸಲು ಯೋಜಿಸಲಾಗಿದೆ ಎಂದರು.

ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದೀಪಾ ಚೋಳನ್‌, ಮಾಜಿ ಶಾಸಕಿ ಸೀಮಾ ಮಸೂತಿ, ಕಾರ್ಯಪಾಲಕ ಅಭಿಯಂತರ ಅಶೋಕ ಮಾಡ್ಯಾಳ, ಸಹಾಯಕ ಕಾರ್ಯ ಅಭಿಯಂತರ ವೆಂಕಟರಾವ್‌, ಮಲ್ಲಿಕಾರ್ಜುನ ಹಳೆಮನಿ ಇದ್ದರು.

ಈ ಸಂದರ್ಭದಲ್ಲಿ ಜಲಮಂಡಳಿಯ ನಿವೃತ್ತ ಮುಖ್ಯ ಅಭಿಯಂತರ ಡಿ.ಎಲ್‌.ರಾಜು ಮತ್ತು ಕಾಮಗಾರಿ ಗುತ್ತಿಗೆ ಪಡೆದಿದ್ದ ಹೈದರಾಬಾದ್‌ ಇನ್‌ಫ್ರಾಟೆಕ್‌ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿ ಹಾಗೂ ಪುಣೆ ಮೂಲದ ಮೆ.ಎಸ್‌.ಬಿ.ಎಂ. ಪ್ರಾಜೆಕ್ಟಸಂಸ್ಥೆಯ ಪ್ರತಿನಿಧಿಯನ್ನು ಸನ್ಮಾನಿಸಲಾಯಿತು.

click me!