ಇದು ಜಾತಿ ಸಮೀಕ್ಷೆಯಲ್ಲ, ಬಿಜೆಪಿ ಅಧ್ಯಕ್ಷರು ಮೋದಿಗೆ ಪತ್ರ ಬರೆಯಲಿ: ಸಚಿವ ಗುಂಡೂರಾವ್ ತಿರುಗೇಟು

Published : Sep 23, 2025, 08:55 PM IST
 Caste Census

ಸಾರಾಂಶ

ಜಾತಿ ಜನಗಣತಿ ವಿಚಾರವಾಗಿ ಬಿಜೆಪಿಗೆ ತಿರುಗೇಟು ನೀಡಿರುವ ಸಚಿವ ದಿನೇಶ್ ಗುಂಡೂರಾವ್, ಜಾತಿ ಗಣತಿ ಮಾಡಬೇಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲು ವಿಜಯೇಂದ್ರ ಗೆ ಸವಾಲು ಹಾಕಿದ್ದಾರೆ. ಇದು ಜಾತಿ ಗಣತಿಯಲ್ಲ, ಬದಲಿಗೆ ವೈಜ್ಞಾನಿಕ ಅಂಕಿ-ಅಂಶ ಸಂಗ್ರಹಿಸಲು ನಡೆಸುತ್ತಿರುವ ಸಮೀಕ್ಷೆ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ರವಿ.ಎಸ್. ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು : ಜಾತಿ ಜನಗಣತಿ ಮಾಡುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎನ್ನುತ್ತಿರುವ ಬಿಜೆಪಿಯವರು, ವಿಜಯೇಂದ್ರ ಅವರು ಜಾತಿ ಜನಗಣತಿ ಮಾಡಬೇಡಿ ಎಂದು ಕೇಂದ್ರಕ್ಕೆ ಮತ್ತು ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ಸಮೀಪದ ಹುದಿಕೇರಿಯಲ್ಲಿ ಸಾಮಾಜಿಕಾರ್ಥಿಕ ಶೈಕ್ಷಣಿಕ ಸಮೀಕ್ಷೆ ವಿರುದ್ಧ ಈಗಾಗಲೇ ಪ್ರಕರಣ ಕೋರ್ಟಿನಲ್ಲಿ ಇರುವ ಕುರಿತು ಪ್ರತಿಕ್ರಿಯಿಸಿದ ಅವರು ಹೈಕೋರ್ಟಿನಲ್ಲಿ ಏನು ತೀರ್ಪು ಬರುತ್ತೋ ಗೊತ್ತಿಲ್ಲ, ಆದರೆ ಸಮೀಕ್ಷೆ ಮಾಡುವುದರಲ್ಲಿ ಯಾವ ತಪ್ಪು ಇಲ್ಲ. ಸುಮ್ಮನೆ ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವುದೇ ಇವರ ಉದ್ದೇಶ. ನಮ್ಮ ದೇಶದಲ್ಲಿ ಏನೇ ಮಾಡಿದರೂ ಪರ ವಿರೋಧ ಇರುವಂತಹದ್ದೇ ಎಂದರು. ಒಳ್ಳೆಯ ಉದ್ದೇಶ ಇಟ್ಟುಕೊಂಡು ನಾವು ಸಮೀಕ್ಷೆ ಮಾಡಿಸುತ್ತಿದ್ದೇವೆ. ನಾವು ಜಾತಿ ಜನಗಣತಿ ಮಾಡುತ್ತಿಲ್ಲ. ಜಾತಿ ಗಣತಿ ಮಾಡುತ್ತಿರುವುದು ಕೇಂದ್ರ ಸರ್ಕಾರ ಜಾತಿ ಜನಗಣತಿ ಬೇಡ ಎಂದು ಬಿಜೆಪಿಯವರ ನಿಲುವಾಗಿದ್ದರೆ ಅವರು ವಿರೋಧ ಮಾಡಲಿ. ಕೇಂದ್ರಕ್ಕೆ, ಮೋದಿಯವರಿಗೆ ಬಿಜೆಪಿಯವರು ಬರೆಯಲಿ. ಜಾತಿ ಗಣತಿ ಬೇಡ ಎಂದು ಬರೆಯಲಿ ಎಂದರು.

ವೈಜ್ಞಾನಿಕ ಅಂಕಿ ಅಂಶ

ಯಾವುದೇ ಕಾರ್ಯಕ್ರಮ ಮಾಡುವುದಾದರೂ ಒಂದು ವೈಜ್ಞಾನಿಕ ಅಂಕಿ ಅಂಶ ಬೇಕು. ಯಾವ ಸಮುದಾಯದ ಜನರ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬೇಕಾಗಿದೆ. ಆಧುನಿಕ ಯುಗದಲ್ಲಿ ಇದ್ದು ನಾವು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು. ಅದು ಬಿಟ್ಟು ಮುಖ್ಯಮಂತ್ರಿಯವರ ಮೇಲೆ ಸುಮ್ಮನೆ ಗೂಬೆ ಕೂರಿಸಬಾರದು. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ, ಎಲ್ಲದರಲ್ಲೂ ಸುಮ್ಮನೆ ಗೊಂದಲ ಸೃಷ್ಟಿಸುತ್ತಾರೆ. ಯಾವುದನ್ನು ಸರಿಯಾಗಿ ನಡೆಯಲು ಬಿಡುವುದಿಲ್ಲ. ವಿರೋಧ ವ್ಯಕ್ತಪಡಿಸುವುದಿದ್ದರೆ ಪಡಿಸಲಿ, ಆದರೆ ಸುಮ್ಮನೆ ಕಥೆ ಕಟ್ಟಿ ಗೊಂದಲ ಸೃಷ್ಟಿಸಬಾರದು. ವಿಜಯೇಂದ್ರ ಅವರಿಗೆ ಎಷ್ಟು ಜ್ಞಾನ ಇದೆಯೋ ಗೊತ್ತಿಲ್ಲ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಿದ್ದಾರೆ. ಸರಿಯಾಗಿ ತಿಳಿದುಕೊಳ್ಳಲಿ, ಅವರಿಗೆ ಮಾಹಿತಿ ಕೊರತೆ ಇರಬಹುದು. ಹಿಂದೆ ಕಾಂತರಾಜ ಸರ್ವೇ ವರದಿಯನ್ನು ಇವರ ಸರ್ಕಾರವೇ ಒಪ್ಪಿಕೊಳ್ಳಲಿಲ್ಲವೆ? ಅದನ್ನು ಒಪ್ಪಿಕೊಂಡು ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಿಸಲಿಲ್ಲವೆ. ಆ ವರದಿ ಆಧಾರದಲ್ಲಿ ಜಯಪ್ರಕಾಶ್ ಹೆಗ್ಡೆ ವರದಿ ಕೊಟ್ಟರು. ಅದರ ಮೇಲೆ ಬಿಜೆಪಿಯವರು ಆ್ಯಕ್ಟ್ ಮಾಡಿದರು. ಅಂದ ಮೇಲೆ ಕಾಂತರಾಜ ವರದಿಯನ್ನು ಬಿಜೆಪಿಯವರು ಒಪ್ಪಿಕೊಂಡಂತೆ ಆಯ್ತಲ್ಲ. ಅದು ಕೂಡ ಇದೇ ಸರ್ವೇ ಅಲ್ಲವೆ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕರಿಂದ ಸಿಎಂ ಮೇಲೆ ಅನಾವಶ್ಯಕ ಆರೋಪ

ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾನ್ಯ ಸಿಎಂ ಸಿದ್ದರಾಮಯ್ಯನವರ ಮೇಲೆ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ. ಜಾತಿಗಳು ಇದ್ದ ಕೂಡಲೇ ಧರ್ಮ ಹೊಡೆಯುತ್ತದೆಯೇ ಎಂದು ಪ್ರಶ್ನಿಸಿದರು. ಜಾತಿ ಉಪಜಾತಿಗಳನ್ನು ನಾವು ಸೃಷ್ಟಿ ಮಾಡಿದ್ದೇವಾ,? ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯಿತ ಕ್ರಿಶ್ಚಿಯನ್ ಒಕ್ಕಲಿಗ ಕ್ರಿಶ್ಚಿಯನ್ ಎಂದು ಅದು ಜನರೇ ಹೇಳಿಕೊಂಡಿದ್ದಾರೆ ನಾವು ಸೃಷ್ಟಿ ಮಾಡಿದ್ದಲ್ಲ. ಹಿಂದಿನ ಸರ್ವೆ ಆದಾಗ ಜನರೇ ಹೇಳಿಕೊಂಡಿದ್ದಾರೆ.

ಹಿಂದೂ ವಿರೋಧಿ ಅಂತ ಬಿಂಬಿಸುವುದು

ಇಡೀ ರಾಜ್ಯದಲ್ಲಿ ಈ ರೀತಿಯ ಕ್ರಿಶ್ಚಿಯನ್ ಒಂದು ಲಕ್ಷದಿಂದ ಒಂದು ಕಾಲು ಲಕ್ಷ ಜನ ಇರಬಹುದಷ್ಟೇ. ಸಿದ್ದರಾಮಯ್ಯನವರಿಗೂ ಇದಕ್ಕೂ ಏನೂ ಸಂಬಂಧವೇ ಇಲ್ಲ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಅಶೋಕ್ ಅವರೇ ಮಂತ್ರಿಯಾಗಿದ್ದಾಗ ಒಪ್ಪಿಕೊಂಡಿದ್ದಾರೆ. ಅವಾಗ ಯಾಕೆ ವಿರೋಧ ಮಾಡಲಿಲ್ಲ, ಅವಾಗ ಯಾಕೆ ಇದನ್ನೆಲ್ಲ ಸೇರಿಸಬಾರದು ಎಂದು ಹೇಳಲಿಲ್ಲ. ಅವರಿಗೆ ಸಮಾಜದಲ್ಲಿ ಗೊಂದಲ ಇರಬೇಕು, ಮತ್ತು ಸಿದ್ದರಾಮಯ್ಯನವರು ಹಿಂದೂ ವಿರೋಧಿ ಅಂತ ತೋರಿಸಬೇಕು ಅಷ್ಟೇ. ಹಿಂದೂ ವಿರೋಧಿ ಅಂತ ಬಿಂಬಿಸುವುದೇ ಒಂದಂಶದ ಕಾರ್ಯಕ್ರಮ ಅವರದು. ಸರ್ವೇಯನ್ನು ಒಮ್ಮೆ ಹೋಗಿ ನೋಡಿ ಏನೇನು ಪ್ರಶ್ನೆ ಕೇಳಿದ್ದಾರೆ. ಅವರ ಶಿಕ್ಷಣ ಏನು, ಉದ್ಯೋಗ ಏನು, ಆರ್ಥಿಕ ಸ್ಥಿತಿಗತಿ ಏನು, ಇದನ್ನು ತಿಳಿದುಕೊಳ್ಳುವುದಕ್ಕೆ ಮಾಡಲಾಗಿದೆ. ಇವರು ವಿರೋಧ ಮಾಡಿದ ಕೂಡಲೇ ಸರ್ವೆ ನಿಲ್ಲಲ್ಲ. ಹದಿನೈದು ದಿನದಲ್ಲಿ ಸರ್ವೆ ಮುಗಿಸಿ ವರದಿ ಬರುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್