
ಚಿಕ್ಕಮಗಳೂರು(ಮೇ.11): ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ವಾಮಮಾರ್ಗದಲ್ಲಿ ಬರುವವರನ್ನು ಸಂಪೂರ್ಣ ಪರೀಕ್ಷಿಸಿ ಕ್ವಾರಂಟೈನ್‌ನಲ್ಲಿ ಇಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಇಲ್ಲಿನ ಆಲೇನಹಳ್ಳಿ, ಬಾಳೆಹಳ್ಳಿ, ಚಂದ್ರಾನಗರ, ಕೆಂಪನಹಳ್ಳಿ, ಎಂ.ಜಿ. ರಸ್ತೆ, ಕೆ.ಎಂ.ರಸ್ತೆಗಳಲ್ಲಿ ಭಾನುವಾರ ಸಂಜೆ ಸೈಕಲ್ ಮೂಲಕ ಸಾಗಿದ ಸಚಿವರಿಗೆ ಗ್ರಾಮಸ್ಥರು ಹಾಗೂ ನಾಗರಿಕರು ನಿರ್ಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಜಿಲ್ಲೆಯ ಗಡಿಭಾಗ ಸೇರಿದಂತೆ ಯಾವುದೇ ಚೆಕ್‌ಪೋಸ್ಟ್‌ಗಳಲ್ಲಿ ಬಂದವರ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಹೊಸಬರು ಯಾರಾದರೂ ಅನ್ಯ ಮಾರ್ಗದಲ್ಲಿ ಒಳಪ್ರವೇಶಿಸುವವರ ಬಗ್ಗೆ ನೆರೆಹೊರೆಯವರು ಗಮನಿಸಿ ಆಯಾ ಪಂಚಾಯಿತಿ, ಆಶಾ ಕಾರ್ಯಕರ್ತರು ಅಥವಾ ಜಿಲ್ಲಾಡಳಿತ ಗಮನಕ್ಕೆ ತರುವ ಕೆಲಸ ಮಾಡಬೇಕೆಂದರು.
ಲಾಕ್‌ಡೌನ್ ಸಡಿಲ: ಸಂಚಾರಕ್ಕೆ ಮುಕ್ತ ಅವಕಾಶ, ಕಾಫಿನಾಡು ಶೇಕ್ ಶೇಕ್!
ಲಾಕ್ ಡೌನ್ ನಿರ್ಬಂಧ ಕಡಿತದ ಬಗ್ಗೆ ಯಾವುದೇ ನಿಶ್ಚಯವಾಗಿಲ್ಲ. ಸಂಜೆ 7 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಲು ಜಿಲ್ಲಾಡಳಿತ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಹುತೇಕ ವರ್ತಕರು ಸಂಜೆ 6 ಗಂಟೆಯಿಂದಲೇ ಬಾಗಿಲು ಮುಚ್ಚಿ ಸಹಕರಿಸುತ್ತಿದ್ದಾರೆ ಎಂದರು.
ಗುಜರಾತ್‌ನಿಂದ ಶಿವಮೊಗ್ಗಕ್ಕೆ ಬಂದಿದ್ದ ತಬ್ಲೀಘಿಗಳನ್ನು ಅಲ್ಲಿನ ಜಿಲ್ಲಾಡಳಿತ ಕ್ವಾರಂಟೈನ್‌ನಲ್ಲಿ ಇಟ್ಟಿದ್ದರಿಂದ ಸೋಂಕು ಅನ್ಯರಿಗೆ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಿದೆ. ಅಲ್ಲಿ 8 ಹೊಸ ಕೊರೋನಾ ಕೇಸ್ ಪತ್ತೆಯಾಗಿವೆ. ಅವರನ್ನು ಜಿಲ್ಲಾಡಳಿತ ಕ್ವಾರಂಟೈನ್‌ನಲ್ಲಿ ಇಟ್ಟಿರುವುದರಿಂದ ಸೋಂಕು ಬೇರೆಡೆಗೆ ವ್ಯಾಪಿಸಿರುವ ಸಾಧ್ಯತೆಗಳು ಕಡಿಮೆ. ಒಂದುವೇಳೆ ಅದು ವ್ಯಾಪಿಸಿದ್ದರೆ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿಗಳಿಗಷ್ಟೆ. ಈ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಹೇಳಿದರು.