ಲಾಕ್‌ಡೌನ್‌ ಸಡಿಲ: ಸಂಚಾರಕ್ಕೆ ಮುಕ್ತ ಅವಕಾಶ, ಕಾಫಿನಾಡು ಶೇಕ್‌ ಶೇಕ್‌!

Kannadaprabha News   | Asianet News
Published : May 11, 2020, 12:58 PM ISTUpdated : May 18, 2020, 05:44 PM IST
ಲಾಕ್‌ಡೌನ್‌ ಸಡಿಲ: ಸಂಚಾರಕ್ಕೆ ಮುಕ್ತ ಅವಕಾಶ, ಕಾಫಿನಾಡು ಶೇಕ್‌ ಶೇಕ್‌!

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ 8 ಪಾಸಿಟಿವ್‌ ಕೇಸ್‌ಗಳ ಪತ್ತೆ ತಂದ ಆತಂಕ| ಹಸಿರು ವಲಯ ಜಿಲ್ಲೆಯಲ್ಲಿ ಮತ್ತೆ ಲಾಕ್‌ ಡೌನ್‌ ಭೀತಿ: ಮುಂದೇನು?| ರಾಜ್ಯದಲ್ಲಿರುವ ರೆಡ್‌ ಮತ್ತು ಆರೇಂಜ್‌ ಝೋನ್‌ನಲ್ಲಿ ಇರುವವರು ಹಸಿರು ವಲಯದಲ್ಲಿ ಇರುವ ಚಿಕ್ಕಮಗಳೂರಿಗೆ ಆಗಮನ|

ಚಿಕ್ಕಮಗಳೂರು(ಮೇ.11): ಹಸಿರು ವಲಯದ ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಏಕಾಏಕಿ 8 ಪಾಸಿಟಿವ್‌ ಪ್ರಕರಣಗಳು ಪತ್ತೆ ಆಗುತ್ತಿದ್ದಂತೆ ಕಾಫಿನಾಡು, ಚಿಕ್ಕಮಗಳೂರು ಜಿಲ್ಲೆಯ ಜನರು ಭಯಭೀತರಾಗಿದ್ದಾರೆ.

ಅಹಮದಾಬಾದ್‌ನಿಂದ ಶಿವಮೊಗ್ಗಕ್ಕೆ 8 ಮಂದಿ ಬರುತ್ತಿದ್ದಂತೆ ಅವರಿಗೆ ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಿ, ಗಂಟಲು ದ್ರವ ಮಾದರಿ ಪರೀಕ್ಷಿಸಿ, ಪಾಸಿಟಿವ್‌ ವರದಿ ಬಂದ ತಕ್ಷಣ ಅವರನ್ನು ಆಸ್ಪತ್ರೆಯಲ್ಲಿ ತೆರೆದಿರುವ ಕ್ವಾರೆಂಟೈನ್‌ ಕೇಂದ್ರದಲ್ಲಿ ಇರಿಸಲಾಗಿದೆ. ಅಂದರೆ, ಅವರು ಬೇರೆಯವರ ಸಂಪರ್ಕದಲ್ಲಿ ಇರಲಿಲ್ಲ ಎಂಬುದು ಸಮಧಾನಕರ ವಿಷಯ.

ಆತಂಕ ಸೃಷ್ಟಿ:

ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಸರ್ಕಾರ ಪಾಸ್‌ ಕೊಡುವ ಮೂಲಕ ಅವಕಾಶ ನೀಡಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್‌ ಪಡೆಯುವುದು ಕಡ್ಡಾಯ ಮಾಡಿದೆ. ಹೀಗಾಗಿ ರಾಜ್ಯದಲ್ಲಿರುವ ರೆಡ್‌ ಮತ್ತು ಆರೇಂಜ್‌ ಝೋನ್‌ನಲ್ಲಿ ಇರುವವರು ಹಸಿರು ವಲಯದಲ್ಲಿ ಇರುವ ಚಿಕ್ಕಮಗಳೂರಿಗೆ ಬರುತ್ತಿದ್ದಾರೆ. ಪಾಸ್‌ ಪಡೆದು ಬಂದವರನ್ನು ತಡೆಯುವ ಅಥವಾ ಹೋಂ ಕ್ವಾರೆಂಟೈನ್‌ ಮಾಡುವುದಾಗಲೀ ಅವರ ಕೈಗಳಿಗೆ ಮೊಹರು ಹಾಕುವುದಾಗಲೀ ಮಾಡಬಾರದು ಎಂದು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಆದ್ದರಿಂದ ಜಿಲ್ಲೆಗೆ ಪ್ರತಿದಿನ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಜನರು ಬರುತ್ತಿದ್ದಾರೆ. ಬರೀ ಇಷ್ಟೇ ಅಲ್ಲಾ, ಕೆಲವು ಮಂದಿ ಪಾಸ್‌ ಇಲ್ಲದೇ ಬರುತ್ತಿದ್ದಾರೆ. ಇದರಿಂದಾಗಿ ಇನ್ನಷ್ಟುಆತಂಕ ಹೆಚ್ಚಾಗಿದೆ. ಹಸಿರು ವಲಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಕಾಟ ಯಾವ ಕ್ಷಣದಲ್ಲಿ ಹೇಗೆ ಬೇಕಾದರೂ ಆಗಬಹುದೆಂಬ ಭಯ ಜನರಿಗೆ ಕಾಡುತ್ತಿದೆ.

ಗ್ರೀನ್‌ಝೋನ್‌: ಕಾಫಿನಾಡಿಗರು ಎಚ್ಚರ ತಪ್ಪುತ್ತಿದ್ದಾರಾ?

ಪಾಸ್‌ ಇಲ್ಲದೇ ಪ್ರಯಾಣ:

ಜಿಲ್ಲೆಗೆ ಪ್ರತಿದಿನ ಪಾಸ್‌ ಇಲ್ಲದೇ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೊಂದು ಅಪಾಯಕಾರಿ ಬೆಳವಣಿಗೆ. ಏಕೆಂದರೆ, ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಮನೆ ಮನೆ ಸರ್ವೆ ನಡೆಸಿ ಕ್ಷಯರೋಗ ಪೀಡಿತರು, ಗರ್ಭೀಣಿ ಮಹಿಳೆಯರು, ಎಚ್‌ಐವಿ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಇರುವವರ ಪಟ್ಟಿಯನ್ನು ಮಾಡಿದೆ. ಈಗ ಹೊಸದಾಗಿ ಬರುತ್ತಿರುವವರು ಈ ಪಟ್ಟಿಯಿಂದ ಹೊರಗೆ ಉಳಿದುಕೊಳ್ಳಲಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಕೊರೋನಾ ಸವಾಲು ಎದುರಿಸಲು ಜಿಲ್ಲಾಡಳಿತಕ್ಕೆ ಕಷ್ಟವಾಗಲೂಬಹುದು.

ಕೊರೋನಾ ಶಂಕೆ ಮೇಲೆ ಮಾ.23ರಿಂದ ಮೇ 9ರವರೆಗೆ ಜಿಲ್ಲೆಯಲ್ಲಿ 842 ಮಂದಿಗಳ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲವೂ ನೆಗೆಟಿವ್‌ ವರದಿ ಬಂದಿದೆ. ಈ ಕಾರಣಕ್ಕಾಗಿ ಜಿಲ್ಲೆ ಮೂರನೇ ಹಂತದಲ್ಲೂ ಹಸಿರು ವಲಯದಲ್ಲಿ ಉಳಿದುಕೊಂಡಿದೆ.

ಹೊಂ ಕ್ವಾರೆಂಟೈನ್‌ ಆಗಿರುವವರ ಪೈಕಿ ಈವರೆಗೆ 270 ಮಂದಿ 28 ದಿನಗಳ ನಿಗಾ ದಿವಸ ಪೂರೈಸಿದ್ದಾರೆ. ಇನ್ನು 260 ಮಂದಿ ಹೋಂ ಕ್ವಾರೆಂಟೈನ್‌ನಲ್ಲಿ ಇದ್ದಾರೆ. ಪ್ರಥಮದಲ್ಲಿ ವಿದೇಶ, ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದವರಿಗೆ ಮಾತ್ರ ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿತ್ತು. ಇದರ ಜತೆಗೆ ಶೀತ, ಚಳಿ, ಜ್ವರ, ಗಂಟಲು ನೋವು ಇದ್ದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ, ಅಂತಹವರ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಪಾಸ್‌ ಇಲ್ಲದೆ ಬಂದ 9 ಮಂದಿ

ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಪಾಸ್‌ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೂ ಕೆಲವು ಮಂದಿ ಈ ನಿಯಮವನ್ನು ಉಲ್ಲಂಘನೆ ಮಾಡಿ ಜಿಲ್ಲೆಯೊಳಗೆ ಬರುತ್ತಿದ್ದಾರೆ. ಜಿಲ್ಲೆಗೆ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಂದ ಒಂದೇ ದಿನ 9 ಮಂದಿ ಬಂದಿದ್ದಾರೆ. ಅಜ್ಜಂಪುರ ತಾಲೂಕಿನ ಕಾರೇಹಳ್ಳಿಗೆ ಕಾಸರಗೋಡು ಜಿಲ್ಲೆಯಿಂದ ಓರ್ವರು ಬಂದಿದ್ದರೆ, ಲಕ್ಕವಳ್ಳಿಯ ಎ.ವಿ. ಕ್ಯಾಂಪ್‌ಗೆ ಆಂಧ್ರಪ್ರದೇಶದಿಂದ ಒಬ್ಬರು ಆಗಮಿಸಿದ್ದಾರೆ.

ಪಂಚನಹಳ್ಳಿಗೆ ಆಂಧ್ರಪ್ರದೇಶದಿಂದ ತಾಯಿ- ಮಗು ಬಂದಿದ್ದರೆ, ತರೀಕೆರೆ ಜಂಬದಹಳ್ಳ ಗ್ರಾಮಕ್ಕೆ ತಮಿನುನಾಡಿನಿಂದ 5 ಮಂದಿ ಆಗಮಿಸಿದ್ದಾರೆ. ಅವರು ಅಲ್ಲಿ ಸ್ಥಳೀಯವಾಗಿ ವೈದ್ಯಕೀಯ ತಪಾಸಣೆ ಮಾಡಿಕೊಂಡಿರುವುದಿಲ್ಲ. ಜತೆಗೆ ಇಲ್ಲಿಗೆ ಬರಲು ಪಾಸ್‌ ಪಡೆದಿಲ್ಲ. ಈ ಕಾರಣಕ್ಕಾಗಿ ಆಯಾಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ