'ಕಲಬುರಗಿಯಲ್ಲಿ ಕಾನೂನು ವೈಫಲ್ಯದಿಂದ ಕೊರೋನಾ ವೈರಸ್‌ ಉಲ್ಬಣ'

By Kannadaprabha NewsFirst Published Apr 22, 2020, 2:04 PM IST
Highlights

ರಂಜಾನ್‌ ಆಚರಣೆ, ಪ್ರಾರ್ಥನೆಯಲ್ಲಿ ಅಂತರ ಕಾಪಾಡಿ: ಸಚಿವ ಭೈರತಿ ಬಸವರಾಜ| ದಾವಣಗೆರೆಯಲ್ಲಿ ಕೊರೋನಾ ಟೆಸ್ಟಿಂಗ್‌ ಲ್ಯಾಬ್‌ ಸ್ಥಾಪಿಸುವ ಚಿಂತನೆ ಇದ್ದು, ಸರ್ಕಾರವೂ ಇದೇ ಪ್ರಯತ್ನದಲ್ಲಿದೆ| ಎಸ್‌.ಎಸ್‌. ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಹೈಟೆಕ್‌ ಆಸ್ಪತ್ರೆಯಲ್ಲಿ ಕೋವಿಡ್‌-19 ಟೆಸ್ಟಿಂಗ್‌ ಲ್ಯಾಬ್‌ ಸೌಲಭ್ಯ ನೀಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ|

ದಾವಣಗೆರೆ(ಏ.22): ಕೊರೋನಾ ವೈರಸ್‌ ಹಾವಳಿ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾಗಲು ಕಾನೂನು ವೈಫಲ್ಯವೇ ಕಾರಣ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ. 

ರಾಜ್ಯಾದ್ಯಂತ ಲಾಕ್‌ಡೌನ್‌ ನಿಯಮಗಳನ್ನು ಬಿಗಿಯಾಗಿ ಪಾಲನೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಠಿಣ ಕ್ರಮಗಳನ್ನೂ ಸರ್ಕಾರ ಕೈಗೊಳ್ಳುತ್ತಿದೆ. ಸರ್ಕಾರಗಳೊಂದಿಗೆ ಎಲ್ಲರೂ ಸಹಕರಿಸಿ ಎಂದು ತಿಳಿಸಿದರು.

10 ತಿಂಗಳಿಂದ ಸಂಬಳವಿಲ್ಲದೇ ದುಡಿಯುತ್ತಿರುವ ಕೊರೋನಾ ವಾರಿಯರ್ಸ್‌..!

ಚನ್ನಗಿರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಟೆಸ್ಟಿಂಗ್‌ ಲ್ಯಾಬ್‌ ಸ್ಥಾಪಿಸುವ ಚಿಂತನೆ ಇದ್ದು, ಸರ್ಕಾರವೂ ಇದೇ ಪ್ರಯತ್ನದಲ್ಲಿದೆ. ಎಸ್‌.ಎಸ್‌. ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಹೈಟೆಕ್‌ ಆಸ್ಪತ್ರೆಯಲ್ಲಿ ಕೋವಿಡ್‌-19 ಟೆಸ್ಟಿಂಗ್‌ ಲ್ಯಾಬ್‌ ಸೌಲಭ್ಯ ನೀಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.

ರಂಜಾನ್‌- ಮನವಿ:

ಕೋವಿಡ್‌-19 ವೈರಸ್‌ ನಿಯಂತ್ರಿಸಲು ಎಲ್ಲರ ಸಹಕಾರವೂ ಅತಿ ಮುಖ್ಯ. ಮುಸ್ಲಿಂ ಬಾಂಧವರು ರಂಜಾನ್‌ ಹಬ್ಬವನ್ನು ಮನೆಯಲ್ಲೇ ಆಚರಿಸುವ ಜೊತೆಗೆ ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ನಿಯಮ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಪ್ರಾರ್ಥನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮಾಡಾಳು ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಪಂ ಸಿಇಓ ಪದ್ಮಾ ಬಸವಂತಪ್ಪ ಮತ್ತಿತರರು ಇದ್ದರು.

ಪಾದರಾಯನಪುರ ಘಟನೆಗೆ ಖಂಡನೆ

ಬೆಂಗಳೂರಿನ ಪಾದರಾಯನಪುರ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು. ಉತ್ತರ ಪ್ರದೇಶ, ಕೇರಳ ರಾಜ್ಯಗಳ ಮಾದರಿಯಲ್ಲಿಯೇ ರಾಜ್ಯದಲ್ಲೂ ಬಿಗಿ ಕಾನೂನುಗಳನ್ನು ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಆದಷ್ಟು ಬೇಗನೆ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಲಿದೆ ಎಂದು ಹೇಳಿದರು.

ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಈ ಬಗ್ಗೆ ಶೀಘ್ರವೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ರೈತರ ಹಿತಕಾಯಲು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಬದ್ಧ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 

click me!