'ಪೊಲೀಸ್‌ ಇಲಾಖೆಯಲ್ಲಿನ ಜಿಡ್ಡುಗಟ್ಟಿದ ಆಡಳಿತ ಸಹಿಸುವ ಪ್ರಶ್ನೆಯೇ ಇಲ್ಲ'

By Web DeskFirst Published Sep 30, 2019, 7:46 AM IST
Highlights

ಮಹಾನಗರ ಪೊಲೀಸ್‌ ಇಲಾಖೆಯಲ್ಲಿ ಜಿಡ್ಡುಗಟ್ಟಿದ ವಾತಾವರಣ ಬಿಡಿಸುತ್ತೇವೆ ಎಂದ ಸಚಿವ ಬೊಮ್ಮಾಯಿ| ಮಹಾನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಗೃಹ ಇಲಾಖೆ ದಿಟ್ಟಹೆಜ್ಜೆ ಇಟ್ಟಿದೆ| ಆ್ಯಂಟಿ ಗೂಂಡಾ ಸ್ಪೆಷಲ್‌ ಸ್ಕ್ವಾಡ್, ಆ್ಯಂಟಿ ಡ್ರಗ್‌ ಸ್ಪೆಷಲ್‌ ಸ್ಕ್ವಾಡ್ ರಚನೆ|  ವಾರಕ್ಕೊಮ್ಮೆ ಈ ಎರಡು ಸ್ಕ್ವಾಡ್ ಗಳು ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಎಡಿಜಿಪಿಗೆ ವರದಿ ಸಲ್ಲಿಕೆ| 

ಹುಬ್ಬಳ್ಳಿ(ಸೆ.30): ಮಹಾನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಗೃಹ ಇಲಾಖೆ ದಿಟ್ಟಹೆಜ್ಜೆ ಇಟ್ಟಿದೆ. ಮಹಾನಗರ ಪೊಲೀಸ್‌ ಕಮಿಷನರೇಟ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇಲಾಖೆಗೆ ಬಿಸಿ ಮುಟ್ಟಿಸಿದ್ದಾರೆ. 

ಅಲ್ಲದೇ, ಆ್ಯಂಟಿ ಗೂಂಡಾ ಸ್ಪೆಷಲ್‌ ಸ್ಕ್ವಾಡ್, ಆ್ಯಂಟಿ ಡ್ರಗ್‌ ಸ್ಪೆಷಲ್‌ ಸ್ಕ್ವಾಡ್ ರಚಿಸುವಂತೆ ಸೂಚಿಸಿದ್ದಾರೆ. ಈ ಎರಡು ತಕ್ಷಣವೇ ರಚಿಸುವಂತೆ ಸೂಚಿಸಿರುವ ಸಚಿವರು, ವಾರಕ್ಕೊಮ್ಮೆ ಈ ಎರಡು ಸ್ಕ್ವಾಡ್ ಗಳು ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಎಡಿಜಿಪಿಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. ಇಲ್ಲಿನ ಮಹಾನಗರ ಪೊಲೀಸ್‌ ಕಮಿಷಷನರೇಟ್‌ ಕಚೇರಿಯಲ್ಲಿ ಕಮಿಷನರೇಟ್‌ ವ್ಯಾಪ್ತಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ವ್ಯಾಪ್ತಿಯ ಪ್ರತ್ಯೇಕ ಸಭೆಗಳನ್ನು ನಡೆಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಮಹಾನಗರದಲ್ಲಿ ಪೊಲೀಸ್‌ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದೇನೆ. ಇಲಾಖೆಯಲ್ಲಿನ ಜಿಡ್ಡುಗಟ್ಟಿದ ಆಡಳಿತವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಜಿಡ್ಡನ್ನು ತೆಗೆಯುವ ಕೆಲಸ ಮಾಡುತ್ತೇವೆ. ಇದು ಮೊದಲ ಪ್ರಯತ್ನ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆಡಳಿತಾತ್ಮಕ ಸಮಸ್ಯೆಗಳನ್ನು ಶೀಘ್ರ ನಿವಾರಿಸಲಾಗುವುದು ಹಾಗೂ ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

2 ಸ್ಪೆಷಲ್‌ ಸ್ಕ್ವಾಡ್

ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿರುವ ಗಲಾಟೆ, ಹತ್ಯೆ, ಚೂರಿ ಇರಿತದಂತಹ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಮುಂದೆ ಈ ರೀತಿಯ ಘಟನೆ ನಡೆಯದಂತೆ ಆ್ಯಂಟಿ ಗೂಂಡಾ ಸ್ಪೆಷಲ್‌ ಸ್ಕ್ವಾಡ್ ರಚಿಸಲು ಹೆಚ್ಚುವರಿ ಪೊಲೀಸ್‌ ನಿರ್ದೇಶಕರಿಗೆ ತಿಳಿಸಿದ್ದು, ಈ ಕುರಿತು ಸವಿವರವಾಗಿ ಲಿಖಿತ ಆದೇಶ ನೀಡಲು ಸೂಚಿಸಿದ್ದೇವೆ. 

ಹೊರರಾಜ್ಯದವರು ವಲಸೆ ಹೆಚ್ಚಾಗಿ ಬರುತ್ತಿದ್ದು, ಅವರಿಂದ ಅಪರಾಧಗಳು ನಡೆಯುತ್ತಿವೆ. ಅವರಿಂದ ಡ್ರಗ್ಸ್‌, ಓಸಿ, ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್‌ ನಡಯುತ್ತಿರುವ ಮಾಹಿತಿ ಇದೆ. ಇದನ್ನು ತಡೆಗಟ್ಟಲು ಆ್ಯಂಟಿ ಡ್ರಗ್‌ ಸ್ಕ್ವಾಡ್ ರಚಿಸಲು ಸೂಚಿಸಲಾಗಿದ್ದು, ವಾರಕ್ಕೊಮ್ಮೆ ಈ ಎರಡು ತಂಡ ಸಂಪೂರ್ಣ ವಿವರದ ವರದಿಯನ್ನು ಎಡಿಜಿಪಿಗೆ ನೀಡಬೇಕು ಎಂದು ತಿಳಿಸಿದ್ದಾರೆ. 

ನೈಟ್‌ಬೀಟ್‌ ಹೆಚ್ಚಳ:

ಹೆಚ್ಚಾಗಿ ಅಪರಾಧ ಪ್ರಕರಣಗಳು ಸಂಜೆ ಮತ್ತು ರಾತ್ರಿ ವೇಳೆಯೆ ನಡೆಯುತ್ತಿದ್ದು ಇದರ ನಿಯಂತ್ರಣಕ್ಕಾಗಿ ನೈಟ್‌ಬೀಟ್‌ ಹೆಚ್ಚಿಸುವಂತೆ ಆದೇಶಿಸಿದ್ದೇವೆ. ಬೆಳಗಾವಿ ಮಾದರಿಯಲ್ಲಿ ಕಮ್ಯೂನಿಟಿ ಪೊಲೀಸಿಂಗ್‌ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿಗೆ ತಿಳಿಸಿದ್ದೇವೆ. ಇದರ ಮೂಲಕ ಜನತೆಗೆ ಹತ್ತಿರವಾಗಿ ಅವರಿಂದ ಮಾಹಿತಿ ಪಡೆಯುವುದು ಸೇರಿ ಉತ್ತಮ ವಾತಾವರಣ ಹೊಂದಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದರು

ಪ್ರತ್ಯೇಕ ಸೈಬರ್‌ ಠಾಣೆ:

ಸದ್ಯ ಹುಬ್ಬಳ್ಳಿಯಲ್ಲಿ ಒಂದೆ ಸೈಬರ್‌ ಪೊಲೀಸ್‌ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಆದರೆ, ದಿನದಿಂದ ದಿನಕ್ಕೆ ಸೈಬರ್‌ ಕ್ರೈಂ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ಧಾರವಾಡದಲ್ಲೂ ಪ್ರತ್ಯೇಕ ಸೈಬರ್‌ ಠಾಣೆ ಸ್ಥಾಪಿಸಲಾಗುವುದು. ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಎಫ್‌ಎಸ್‌ಎಲ್‌ ( ಫಾರೆನ್ಸಿಕ್‌ ಸೈನ್ಸ್‌ ಲ್ಯಾಬ್‌) ಕಾರ್ಯ ನಿರ್ವಹಿಸುತ್ತಿದೆ. ಮಹಾನಗರ ಸೇರಿ ವಿವಿಧೆಡೆ ನಡೆಯುವ ಎಲ್ಲ ಪ್ರಕರಣಗಳ ತನಿಖೆಗಾಗಿ ಇದನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ವಿಳಂಬವಾಗುತ್ತಿದೆ. ಈ ಕಾರಣದಿಂದ ಹು-ಧಾ ಮಹಾನಗರಕ್ಕಾಗಿಯೆ ಎಫ್‌ಎಸ್‌ಎಲ್‌ ಲ್ಯಾಬೋರೇಟರಿ ನಿರ್ಮಿಸುವ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ದಿಸೆಯಲ್ಲಿ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದರು.

ಸಿಟಿಜನ್‌ ಪೊಲೀಸ್‌ ಕಮಿಟಿ:

ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಕುರಿತಾಗಿ ಸಾಕಷ್ಟು ಗೊಂದಲವಿದೆ. ಹೀಗಾಗಿ ಸಿಟಿಜನ್‌ ಪೊಲೀಸ್‌ ಕಮಿಟಿ ರಚಿಸಲು ತೀರ್ಮಾನಿಸಿದ್ದು, ತಕ್ಷಣ ಇದನ್ನು ಸ್ಥಾಪಿಸಿ ನಗರದಲ್ಲಿ ಸಿಟಿ ಟ್ರಾಫಿಕ್‌ ಪ್ಲಾನ್‌ ರೂಪಿಸಬೇಕಿದೆ. ಬೆಂಗಳೂರಿನಲ್ಲಿ ಗುರುತಿಸಿರುವಂತೆ ತೀವ್ರ ಸಂಚಾರಿ ದಟ್ಟಣೆ ಇರುವ ರಸ್ತೆಗಳನ್ನು ಗುರುತಿಸಬೇಕಿದೆ. ಇಲ್ಲಿ ವಾಹನಗಳು ಎಲ್ಲೂ ನಿಲ್ಲದಂತೆ ತೆರಳಲು ವಿಶೇಷ ಸಿಗ್ನಲ್‌ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.

ಸೌಲಭ್ಯ ಹೆಚ್ಚಳ:

ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಕೆ, ಅವುಗಳನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಪೊಲೀಸರಿಗೆ ಹೆಚ್ಚಿನ ವಾಕಿಟಾಕಿ ಪೂರೈಸಲು ಕ್ರಮ ತೆಗೆದುಕೊಳ್ಳಲಿದ್ದೇವೆ. ಮುಂದಿನ ಆಯವ್ಯಯದಲ್ಲಿ ಹಣ ಮೀಸಲಿಡಲಾಗುವುದು. ಪೊಲೀಸ್‌ ಇಲಾಖೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಪೂರೈಸಿ ಇಲಾಖೆಯನ್ನು ಇನ್ನಷ್ಟುಸದೃಢಗೊಳಿಸಲಾಗುವುದು ಎಂದರು.

ಕ್ರಿಮಿನಲ್‌ ಮ್ಯಾಪಿಂಗ್‌

ದಾವಣಗೆರೆ, ಬೆಳಗಾವಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿ ಎಲ್ಲ ಕಮಿಷನರೇಟ್‌ನಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಮಿನಲ್‌ ಮ್ಯಾಪಿಂಗ್‌ ಮಾಡಲು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸೂಚಿಸಲಾಗಿದೆ. ಐದಾರು ವರ್ಷದಲ್ಲಿ ನಡೆದ ಪ್ರಕರಣ, ಯಾವ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಅಪರಾಧ ನಡೆದಿದೆ? ಎಷ್ಟುಜನರಿಗೆ ಶಿಕ್ಷೆಯಾಗಿದೆ? ಯಾವ ರೀತಿಯ ಪ್ರಕರಣಗಳು ಎಂಬ ಸಮಗ್ರ ಮಾಹಿತಿಯುಳ್ಳ ವರದಿ ಸಿದ್ಧಪಡಿಸಲು ಕಮೀಷನರ್‌ಗೆ ಸೂಚಲಾಗಿದೆ.

ಹೊಸ ಪೊಲೀಸ್‌ ಠಾಣೆ:

ನಗರದಲ್ಲಿ ಇನ್ನೆರಡು ಪೊಲೀಸ್‌ ಸ್ಟೇಷನ್‌ ನಿರ್ಮಿಸಲು ತಿಳಿಸಿದ್ದೇವೆ. ಇದಕ್ಕೆ ಅಗತ್ಯ ಸಿಬ್ಬಂದಿ, ಸೌಕರ್ಯವನ್ನು ಸರ್ಕಾರದಿಂದ ಒದಗಿಸಲಾಗುವುದು. ರಿಯಲ್‌ ಎಸ್ಟೇಟ್‌ ಅವ್ಯವಹಾರದಲ್ಲಿ ಪೊಲೀಸರು ಹೊಣೆಯಿಂದ ತಪ್ಪಿಸಿಕೊಳ್ಳಬಾರದು. ಈ ಅಕ್ರಮದಲ್ಲಿ ಕಿಂಗ್‌ಪಿನ್‌ ಜತೆಗೆ ರಾಜಕೀಯ ವ್ಯಕ್ತಿ, ವಕೀಲರು, ಪೊಲೀಸರು ಹಾಗೂ ಅವರ ಸಂಬಂಧಿಕರು ಸೇರಿ ಎಲ್ಲರೂ ಇರುತ್ತಾರೆ. ಇದನ್ನು ತಡೆಗಟ್ಟಲು ಸ್ಪಷ್ಟವಾಗಿ ಕಟಿಬದ್ಧವಾಗುವಂತೆ ತಿಳಿಸಲಾಗಿದೆ. ಕ್ರಿಮಿನಲ್‌ ಆ್ಯಕ್ಟಿವಿಟಿ ಹೆಚ್ಚಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮಹಾನಗರದಲ್ಲಿಯೇ ವರ್ಗಾವಣೆಗೊಳ್ಳುತ್ತ ಹಲವು ಅಧಿಕಾರಿಗಳಲ್ಲಿ ಜಿಡ್ಡುಗಟ್ಟಿದೆ. ಇದನ್ನು ತೆಗೆಯುವ ಕೆಲಸವನ್ನು ಇಲಾಖೆ ಮಾಡಲಿದೆ ಎಂದರು.

ರಸ್ತೆ ಸಮಸ್ಯೆ ಸೇರಿ ಇತರೆ ತೊಂದರೆ ನಿವಾರಣೆಗೆ ಕಂದಾಯ ಇಲಾಖೆ, ಮಹಾನಗರಪಾಲಿಕೆ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸಲು ತಿಳಿಸಲಾಗಿದೆ ಎಂದ ಅವರು ಎಲ್ಲದರ ಕುರಿತಾಗಿ ಸೂಕ್ತ ಕ್ರಮ ವಹಿಸಲು ಸೂಚಿದ್ದೇವೆ ಎಂದು ತಿಳಿಸಿದ್ದಾರೆ.
 

click me!