ಅಕ್ರಮ ಗಣಿಗಾರಿಕೆ: ತಜ್ಞರ ವರದಿ ಪಡೆದು ಕ್ರಮ, ಬೊಮ್ಮಾಯಿ

By Kannadaprabha NewsFirst Published Jul 11, 2021, 1:44 PM IST
Highlights

* 2011ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗ ಕೆಆರ್‌ಎಸ್‌ ಆಣೆಕಟ್ಟು ಸುರಕ್ಷತೆ ಪರೀಕ್ಷೆ 
* ಗೇಟ್‌ ಸರಿಪಡಿಸಿದರೆ ಡ್ಯಾಂ ಸುರಕ್ಷಿತ
* ಜನರು ಕೋವಿಡ್‌ ನಿಯಮ ಪಾಲಿಸಬೇಕು. ಗುಂಪು ಸೇರುವುದನ್ನು ಬಿಡಬೇಕು

ಶಿಗ್ಗಾಂವಿ(ಜು.11): ಕೆಆರ್‌ಎಸ್‌ ಆಣೆಕಟ್ಟು ಪ್ರದೇಶದಲ್ಲಿನ ಗಣಿಗಾರಿಕೆ ಬಗ್ಗೆ ಗಣಿ ಇಲಾಖೆ ತಜ್ಞರಿಂದ ವಿವರ​ವಾದ ವರದಿ ಪಡೆದುಕೊಳ್ಳುವುದು ಉತ್ತಮ. ಅಲ್ಲಿ ಎಷ್ಟು ಆಳದವರೆಗೆ ಮೈನಿಂಗ್‌ ನಡೆಯುತ್ತಿದೆ, ಏನು ಅಪಾಯ ಇದೆ ಎಂಬುದರ ಬಗ್ಗೆ ಮೈನಿಂಗ್‌ ಟೆಕ್ನಿಕಲ್‌ ಟೀಂನಿಂದ ವಿಸ್ತೃತ ವರದಿ ಪಡೆಯಬೇಕು. ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅವರ ನಡುವೆ ಕೆಆರ್‌ಎಸ್‌ ಆಣೆಕಟ್ಟು ಸುರಕ್ಷತೆ ವಿಚಾರ ಈಗ ವೈಯಕ್ತಿಕ ಟೀಕೆಗೆ ಇಳಿದಿದೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ, ಆಣೆಕಟ್ಟು ಸುರಕ್ಷಿತವಾಗಿರಬೇಕು. ಈಗಾಗಲೇ ಅಲ್ಲಿ ನಡೆದಿರುವ ಗಣಿಗಾರಿಕೆ ಬಗ್ಗೆ ಸಂಬಂಧಪಟ್ಟ ಸಚಿವರು ಹೇಳಿಕೆ ನೀಡಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ. ಅಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆದಿದ್ದಾರಾ? ಪಡೆದಿದ್ದರೆ ಎಷ್ಟು ಆಳದವರೆಗೆ ಮೈನಿಂಗ್‌ ನಡೆಯುತ್ತಿದೆ ಎಂಬುದನ್ನು ನೋಡಿ ಅಪಾಯ ಇದ್ದರೆ ತಜ್ಞರು ಹೇಳಬೇಕಾಗುತ್ತದೆ. ಲೈಸೆನ್ಸ್‌ ಪಡೆಯಲಾಗಿದೆಯೋ ಎಂಬುದರ ಬಗ್ಗೆ ಗಣಿ ಇಲಾಖೆ, ತಜ್ಞರ ವರದಿ ಪಡೆದರೆ ಸ್ಪಷ್ಟತೆ ಬರುತ್ತದೆ. ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಚಿವರ ಗಮನಕ್ಕೂ ತರುತ್ತೇನೆ ಎಂದು ಹೇಳಿದರು.

ಸುಮಲತಾ ದಾಖಲೆ ನೀಡಿದ್ರೆ ಅಕ್ರಮ ಗಣಿಗಾರಿಕೆ ತನಿಖೆ: ಸಚಿವ ನಿರಾಣಿ

2011ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವಿದ್ದಾಗ ಆಣೆಕಟ್ಟು ಸುರಕ್ಷತೆ ಪರೀಕ್ಷೆ ಮಾಡಲಾಗಿತ್ತು. ಅಲ್ಲಿ ಸುಮಾರು 70 ವರ್ಷ ಹಳೆಯ ಗೇಟ್‌ಗಳಿದ್ದವು. ಸಾಮಾನ್ಯವಾಗಿ ಗೇಟ್‌ ಆಯಸ್ಸು 35 ವರ್ಷ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಗ ಮೊದಲ ಬಾರಿಗೆ ಕೆಆರ್‌ಎಸ್‌ ಡ್ಯಾಂಗೆ ಹೊಸ ಗೇಟ್‌ ಅಳವಡಿಸಲಾಗಿತ್ತು. ಗೇಟ್‌ ಸರಿಪಡಿಸಿದರೆ ಡ್ಯಾಂ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.

ಜನ ಪಾಠ ಕಲಿ​ಯ​ಲಿ

ಕೊರೋನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲ ಅಲೆಗಿಂತ ಎರಡನೇ ಅಲೆ ಭೀಕರವಾಗಿತ್ತು. ಇದರಿಂದ ನಾವು ಪಾಠ ಕಲಿಯಬೇಕಿದೆ. ಜನರು ಕೋವಿಡ್‌ ನಿಯಮ ಪಾಲಿಸಬೇಕು. ಗುಂಪು ಸೇರುವುದನ್ನು ಬಿಡಬೇಕು ಎಂದು ತಿಳಿಸಿದರು. 
 

click me!