ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ| ತಾಂಡಾ ಜನರ ಜೀವನ ಗುಣಮಟ್ಟದ ಸುಧಾರಿಸಲು ಹಾಗೂ ಸರ್ಕಾರದ ಯೋಜನೆಗಳು ಈ ಸಮಾಜಕ್ಕೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ತಾಂಡಾ ಅಭಿವೃದ್ಧಿ ನಿಯಮ ಕಾರ್ಯಪ್ರವೃತ್ತವಾಗಿದೆ| ತಾಂಡಾ ಅಭಿವೃದ್ಧಿ ನಿಗಮದಿಂದ ಸಮಾಜ ಸಣ್ಣ ನೆಲೆ ಕಂಡುಕೊಂಡಿದೆ|
ಹಾವೇರಿ(ಆ.30): ತಾಂಡಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡಲಾಗಿದೆ. ಪ್ರತಿ ತಾಂಡಾಗಳಲ್ಲಿ ಸಿಮೆಂಟ್ ರಸ್ತೆ, ಸಮುದಾಯ ಭವನ ನಿರ್ಮಿಸುವ ಮೂಲಕ ಪರಿಣಾಮಕಾರಿ ಬದಲಾವಣೆ ಹಾಗೂ ಬೆಳವಣಿಗೆ ತರುವಲ್ಲಿ ತಾಂಡಾ ಅಭಿವೃದ್ಧಿ ನಿಗಮ ಪ್ರಮುಖ ಪಾತ್ರ ವಹಿಸಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೇವಗಿರಿ-ಯಲ್ಲಾಪುರ ಬಳಿ ಶನಿವಾರ ಜಿಲ್ಲಾ ಬಂಜಾರ ಭವನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಯಿತು. ತಾಂಡಾ ಜನರ ಜೀವನ ಗುಣಮಟ್ಟದ ಸುಧಾರಿಸಲು ಹಾಗೂ ಸರ್ಕಾರದ ಯೋಜನೆಗಳು ಈ ಸಮಾಜಕ್ಕೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ತಾಂಡಾ ಅಭಿವೃದ್ಧಿ ನಿಯಮ ಕಾರ್ಯಪ್ರವೃತ್ತವಾಗಿದೆ. ತಾಂಡಾ ಅಭಿವೃದ್ಧಿ ನಿಗಮದಿಂದ ಸಮಾಜ ಸಣ್ಣ ನೆಲೆ ಕಂಡುಕೊಂಡಿದೆ. ಆದರೆ ಬದುಕಿನ ಹೋರಾಟ ಮುಂದುವರಿದಿದೆ ಎಂದರು.
'ಸಿದ್ದು ಸರ್ಕಾರವಿದ್ದಿದ್ದರೆ ಜನ ಮಣ್ಣು ತಿನ್ನಬೇಕಾಗುತ್ತಿತ್ತೇನೋ'
ಬಂಜಾರ ಭವನ ಈ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಭವನ ಕಟ್ಟಡವಲ್ಲ, ಸಮಾಜದ ಜಾಗೃತಿ, ಚಿಂತನೆ, ಹೊಸ ದಿಕ್ಸೂಚಿ ಸಂಕೇತವಾಗಿದೆ. ಉತ್ತಮ ಕಾರ್ಯಕ್ರಮಗಳ ಯೋಜನೆ ಮೂಲಕ ಮುಂದಿನ ದಿನಗಳಲ್ಲಿ ಸಾರ್ಥಕತೆ ಕಾಣಲಿ. ಈ ಸಮಾಜದ ಬಗ್ಗೆ ವಿಶೇಷ ಪ್ರತಿ, ವಿಶ್ವಾಸವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಬಂಜಾರ ಸಮಾಜವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಮಾಜ ಭಾರತದ ಅಖಂಡತೆ ಹಾಗೂ ಏಕತೆ ಸಂಸ್ಕೃತಿ ಜೋಡಿಸುವ ಕೆಲಸ ಮಾಡುತ್ತಿದೆ ಎಂದರು.
ನಾವು ಶ್ರಮಜೀವಿಗಳು, ಬುದ್ಧಿವಂತರು ಎಂಬ ಭಾವನೆ ಸಮಾಜ ಯುವ ಜನತೆಯಲ್ಲಿ ಬರಬೇಕು. 2014ರಲ್ಲಿ ನಡೆದ 14 ಜನ ನ್ಯಾಯಾಧೀಶರ ನೇಮಕಾತಿಯಲ್ಲಿ ನಾಲ್ಕು ನ್ಯಾಯಾಧೀಶರು ಬಂಜಾರ ಸಮುದಾಯದವರು. ಡಾಕ್ಟರ್, ಎಂಜಿನಿಯರ್ ಹೀಗೆ ಹಲವು ಹುದ್ದೆಗಳನ್ನು ಈ ಸಮಾದವರು ಪಡೆದುಕೊಂಡಿದ್ದಾರೆ. ನೀವು ಈ ಸಾಧನೆಯನ್ನು ಮಾಡಬೇಕು. ಈ ಹಿಂದೆ ಭೂಮಿ ಹಾಗೂ ಹಣ ಇದ್ದವರು ಆಡಳಿತ ನಡೆಸುತ್ತಿದ್ದರು. ಇಂದು ಜ್ಞಾನ ಇದ್ದವರ ಕಾಲ. ಬಂಜಾರ ಸಮುದಾಯ 21ನೇ ಶತಮಾನದಲ್ಲಿ ಸವಾಲು ಸ್ವೀಕಾರ ಮಾಡಿ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಸ್ಥಳೀಯ ಬಂಜಾರ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬಂಜಾರ ಸಮುದಾಯ ಹೆಚ್ಚಿರುವ ಪ್ರತಿ ತಾಲೂಕಿನಲ್ಲಿ .20ರಿಂದ .25 ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳನ್ನು ತೆರೆಯಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ಸಾಮ್ಯತ್ವ ಯೋಜನೆ ಸೆಟ್‌ಲೈಟ್ ಸರ್ವೆ ಮಾಡಲಾಗುವುದು. ತಾಂಡಾಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದರು.
ಮೆಡಿಕಲ್ ಕಾಲೇಜಿಗೆ ಶಂಕು:
ಸೆಪ್ಟೆಂಬರ್ ಎರಡನೇ ವಾರದಲ್ಲಿ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಮುಖ್ಯಮಂತ್ರಿಗಳು ಅಡಿಗಲ್ಲು ಹಾಕಲಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೆಡಿಕಲ್ ಕಾಲೇಜು ಆರಂಭಕ್ಕೆ ತಾತ್ಕಾಲಿಕವಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಗುರುತಿಸಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜು ಕಟ್ಟಡ ಹಾಗೂ ಜಿಲ್ಲಾ ಆಸ್ಪತ್ರೆ ಸಜ್ಜುಗೊಳಿಸಲಾಗುವುದು ಎಂದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಬಂಜಾರ ಸಮಾಜದ ಏಳ್ಗೆಗೆ ಸರ್ಕಾರ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಅನೇಕ ಯೋಜನೆಗಳನ್ನು ರೂಪಿಸಿದೆ. 3.50 ಕೋಟಿ ಭವನ ಸಮಾಜಕ್ಕೆ ಕೊಡುಗೆಯಾಗಿದೆ. ಈ ಭವನದಲ್ಲಿ ಸಮಾಜದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು. ಜತೆಗೆ ಶುಚಿತ್ವ ಕಾಯ್ದುಕೊಳ್ಳಬೇಕು ಎಂದರು. ಭವನದ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಸಚಿವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗೊಟಗೋಡಿ ಜಾನಪದ ವಿವಿಯಿಂದ ಹೊರತರಲಾದ ವಿವಿಧ ಪುಸ್ತಕಗಳನ್ನು ಸಚಿವರು, ಶಾಸಕರು ಬಿಡುಗಡೆಗೊಳಿಸಿದರು. ತಿಪ್ಪೇಶ್ವರ ಸ್ವಾಮೀಜಿ, ಕುಡಚಿ ಕ್ಷೇತ್ರದ ಶಾಸಕ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್, ಶಾಸಕ ಅರುಣಕುಮಾರ ಗುತ್ತೂರ, ಜಿಪಂ ಸದಸ್ಯ ವಿರುಪಾಕ್ಷಪ್ಪ ಕಡ್ಲಿ, ಲಕ್ಷ್ಮವ್ವ ಚವ್ಹಾಣ, ತಾಪಂ ಸದಸ್ಯ ಸತೀಶ್ ಸಂದಿಮನಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಜಾನಪದ ವಿವಿ ಕುಲಪತಿ ಡಿ.ಬಿ. ನಾಯಕ್, ಮಾಜಿ ಸಚಿವ ರುದ್ರಪ್ಪ ಲಮಾಣಿ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾಬಾಯಿ ಶಿವಕುಮಾರ್ ನಾಯ್ಕ ಇತರರು ಇದ್ದರು.