‘ಯೋಧರಿಗೆ ಅಪಮಾನ ಮಾಡಿದ ರಾಹುಲ್ ಗಾಂಧಿಗೆ ದೇಶಪ್ರೇಮವೇ ಇಲ್ಲ’

By Kannadaprabha News  |  First Published Feb 15, 2020, 12:52 PM IST

ರಾಹುಲ್ ಗಾಂಧಿಗೆ ದೇಶ, ದೇಶಪ್ರೇಮ ಹಾಗೂ ಸೈನಿಕರ ಬಲಿದಾನದ ಕುರಿತು ಪರಿಕಲ್ಪನೆಯೇ ಇಲ್ಲ|ದೇಶದ್ರೋಹದ ಪಟ್ಟವನ್ನು ಅವರವರೇ ಕಟ್ಟಿಕೊಳ್ಳುತ್ತಿದ್ದಾರೆ|ಕಲ್ಕಡ್ ಪ್ರಭಾಕರ್ ಶಾಲೆಯಲ್ಲಿ ನಡೆದ ಪ್ರಕರಣವೇ ಬೇರೆ| ಶಾಹಿನ್ ಶಾಲೆಯಲ್ಲಿ ನಡೆದ ಪ್ರಕರಣವೇ ಬೇರೆ|


ಗದಗ[ಫೆ.15]: ಪುಲ್ವಾಮಾ ದಾಳಿ ಕುರಿತು ರಾಹುಲ್ ಗಾಂಧಿ ಟ್ಟೀಟ್ ವಿಚಾರಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಶುಕ್ರವಾರ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳಕ್ಕೆ ಆಗಮಿಸಿದ್ದ ಅವರು ಮಾಧ್ಯಮದರೊಂದಿಗೆ ಮಾತನಾಡಿ, ರಾಹುಲ್ ಗಾಂಧಿಗೆ ದೇಶ, ದೇಶಪ್ರೇಮ ಹಾಗೂ ಸೈನಿಕರ ಬಲಿದಾನದ ಕುರಿತು ಪರಿಕಲ್ಪನೆಯೇ ಇಲ್ಲ, ಇದು ದೇಶದ ಸೈನಿಕರಿಗೆ ಮಾಡಿರುವ ಅಪಮಾನ ಅಂತಾ ಕಿಡಿಕಾರಿದ್ದಾರೆ. 

ಬೀದರ್‌ನ ಶಾಹಿನ್ ಶಾಲೆಯಲ್ಲಿ ಶಿಕ್ಷಕಿ ಹಾಗೂ ಪಾಲಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದು ಮಾನಹಾನಿ ಅಥವಾ ದೇಶದ್ರೋಹ ಆಗೋಲ್ಲ, ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಯಲ್ಲೂ ಬಾಬ್ರಿ ಮಸೀದಿ ಕುರಿತಾದ ನಾಟಕ ಮಾಡಿದಾಗ ಮಾನಹಾನಿ ಯಾಕೆ ಹಾಕಲಿಲ್ಲ ಎಂದು ಪ್ರಶ್ನಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿರೋಧ ಪಕ್ಷದವರು ಇರೋದೇ ಇಂತಹ ಆರೋಪ ಮಾಡಲಿಕ್ಕೆ, ಈಗಾಗಲೆ ಶಾಹಿನ್ ಶಾಲೆಯಲ್ಲಿ ನಡೆದ ಪ್ರಕರಣದ ಕುರಿತು ದೂರು ದಾಖಲಾಗಿದೆ. ಕಲ್ಕಡ್ ಪ್ರಭಾಕರ್ ಶಾಲೆಯಲ್ಲಿ ನಡೆದ ಪ್ರಕರಣವೇ ಬೇರೆ. ಶಾಹಿನ್ ಶಾಲೆಯಲ್ಲಿ ನಡೆದ ಪ್ರಕರಣವೇ ಬೇರೆ. ಇಲ್ಲಿ ಸರ್ಕಾರದ ಪಾತ್ರದ ಬಗ್ಗೆ ಪ್ರಶ್ನೆಯೇ ಬರುವುದಿಲ್ಲ ಎಂದು ಉತ್ತರಿಸಿದ್ದಾರೆ. 

Latest Videos

undefined

ಪುಲ್ವಾಮಾ ದಾಳಿ ಲಾಭ ಆಗಿದ್ಯಾರಿಗೆ?: ರಾಹುಲ್ ಕೇಳಿದ 3 ಪ್ರಶ್ನೆಗಳು ಯಾರಿಗೆ?

ಸಿಎಎ ಮತ್ತು ಎನ್‌ಆರ್‌ಸಿ ವಿರೋಧ ಮಾಡಿದವರಿಗೆ ದೇಶದ್ರೋಹ ಪಟ್ಟ ಕಟ್ಟುತ್ತಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ದೇಶದ್ರೋಹದ ಪಟ್ಟವನ್ನು ಅವರವರೇ ಕಟ್ಟಿಕೊಳ್ಳುತ್ತಿದ್ದಾರೆ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿ ಅವರವರೇ ಮಾತನಾಡಿಕೊಳ್ಳುತ್ತಾರೆ ಎಂದರು. 

ಪೊಲೀಸ್ ಸಿಬ್ಬಂದಿಯ ವೇತನ ಮತ್ತಿತರ ವಿಚಾರಕ್ಕಾಗಿರುವ ಔರಾದ್ಕರ ವರದಿ ಕುರಿತು ಈಗಾಗಲೇ ಚಿಂತನೆ ನಡೆದಿದ್ದು, ನಮ್ಮ ಹಾಗೂ ಬೇರೆ ಇಲಾಖೆಯಲ್ಲಿ ವೇತನ ಬಗ್ಗೆ ಪ್ರಾಥಮಿಕ ವ್ಯತ್ಯಾಸವಿತ್ತು. ಇದೀಗ ಇದೆಲ್ಲವನ್ನೂ ಸರಿಪಡಿಸಿದ್ದೇವೆ. ಪದೋನ್ನತಿ ಕುರಿತಂತೆ ಕೆಳ ಹಂತದವರಿಗೆ ಅನುಕೂಲವಾಗಿದ್ದು ಹಿರಿಯ ಹಾಗೂ ಕಿರಿಯರಲ್ಲಿ ಇದ್ದ ಅಂತರವನ್ನು ಸರಿಪಡಿಸಲಾಗಿದೆ. ಕಷ್ಟದಾಯಕ ಭತ್ಯೆ ಸಹ ಹೆಚ್ಚಿಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ರೋಣ ಶಾಸಕ ಕಳಕಪ್ಪ ಬಂಡಿ ಮುಂತಾದವರು ಹಾಜರಿದ್ದರು.

click me!