ಖಾತೆ ಬದಲಾವಣೆಯಿಂದ ಬೇಸರವಾಗಿಲ್ಲ: ಸಚಿವ ಶ್ರೀರಾಮುಲು| ಕೆಳ ಸಮುದಾಯಗಳಿಗೆ ಕೆಲಸ ಮಾಡಲು ಸಾಧ್ಯವಾಗಲಿದೆ, ಆರೋಗ್ಯ ಇಲಾಖೆಯಲ್ಲೂ ಉತ್ತಮ ಕೆಲಸ ಮಾಡಿದ್ದೆ, ನನ್ನ ಕಾರ್ಯವೈಖರಿ ನೋಡಿಯೇ ಸಮಾಜ ಕಲ್ಯಾಣ ನೀಡಿದ್ದಾರೆ: ರಾಮುಲು|
ಬಳ್ಳಾರಿ(ಅ.17): ಸಮಾಜ ಕಲ್ಯಾಣ ಇಲಾಖೆ ನೀಡುವಂತೆ ಈ ಮೊದಲು ಕೇಳಿದ್ದೆ. ಇದೀಗ ನೀಡಿದ್ದಾರೆ. ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ನನಗ್ಯಾವ ಬೇಸರವೂ ಇಲ್ಲ. ಬದಲಾಗಿ ಅನುಕೂಲವೇ ಆಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಆರೋಗ್ಯ ಇಲಾಖೆಯಲ್ಲಿ ನಾನು ಅತ್ಯುತ್ತಮ ಕೆಲಸ ಮಾಡಿದ್ದೇನೆ. ಅದನ್ನು ಗಮನಿಸಿಯೇ ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿ, ಶೋಷಿತ ಸಮುದಾಯಗಳ ಪರ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬೆಂಬಲಿಗರು, ಅಭಿಮಾನಿಗಳು ಕೇಳುತ್ತಿರಬಹುದು. ಆದರೆ, ಎಲ್ಲದಕ್ಕೂ ಕಾಯಬೇಕು. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಕೇಳಿದ್ದೆ. ಇದೀಗ ಸಿಕ್ಕಿದೆ. ಭಗವಂತ ಉಪ ಮುಖ್ಯಮಂತ್ರಿ ಸ್ಥಾನದ ಅವಕಾಶ ನೀಡಲುಬಹುದು. ಅದಕ್ಕಾಗಿ ಕಾಯಬೇಕಾಗುತ್ತದೆ. ರಾಜಕಾರಣದಲ್ಲಿ ತಕ್ಷಣ ಸಿಗಬೇಕು ಎಂದುಕೊಳ್ಳುವುದು ಸರಿಯಲ್ಲ. ಎಲ್ಲದಕ್ಕೂ ಕಾಯಬೇಕಾಗುತ್ತದೆ. ಸದ್ಯ ಉಪ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಸವಾಲು. ಪಕ್ಷದ ಅಭ್ಯರ್ಥಿಗಳು ಗೆದ್ದ ಬಳಿಕ ನಮಗೆ ಮತ್ತಷ್ಟುಶಕ್ತಿ ಬರುತ್ತದೆ ಎಂದು ತಿಳಿಸಿದ್ದಾರೆ.
'ಶ್ರೀರಾಮುಲುರನ್ನು ಬಿಜೆಪಿ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ'
ನಾನು ಸೈಡ್‌ಲೈನ್ ಆಗಿಲ್ಲ...
ರಮೇಶ್ ಜಾರಕಿಹೊಳಿ ಅವರು ಬಂದ ಬಳಿಕ ನಾನು ಸೈಡ್‌ಲೈನ್ ಆಗಿಲ್ಲ. ನಮ್ಮ ಪಕ್ಷ ಶ್ರೀರಾಮುಲು ಅವರನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಕಷ್ಟ ಪಟ್ಟು ದುಡಿಯುವವರನ್ನು ಗುರುತಿಸುವ ಕೆಲಸವನ್ನು ಪಕ್ಷ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಶ್ರೀರಾಮುಲು ಉತ್ತರಿಸಿದರು.
ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಈಗಾಗಲೇ ಕೆಲಸ ಶುರು ಮಾಡಿದ್ದೇನೆ. ದೇವರಾಜ ಅರಸು ಅವರಿಂದ ಹಿಡಿದು ಈ ವರೆಗಿನ ಮುಖ್ಯಮಂತ್ರಿಗಳು ಶೋಷಿತ ಸಮುದಾಯಗಳಿಗೆ ತೆಗೆದುಕೊಂಡಿರುವ ವಿವಿಧ ಯೋಜನೆಗಳ ಅಧ್ಯಯನ ಮಾಡುತ್ತಿರುವೆ. ತಳ ಸಮುದಾಯಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿದ್ದಾರೆ. ಶೋಷಿತ ಸಮುದಾಯದ ಕಲ್ಯಾಣಕ್ಕೆ ಬೇಕಾದ ವಿವಿಧ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.