'ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತಾಡುವ ಸ್ಥಿತಿಯಲ್ಲಿ ನಾನಿಲ್ಲ'

By Kannadaprabha NewsFirst Published Feb 20, 2020, 3:21 PM IST
Highlights

ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟ ಆಗಿದ್ದರೂ ಇನ್ನೂ ಬುದ್ಧಿಬಂದಿಲ್ಲ : ಬಿ.ಶ್ರೀರಾಮುಲು| ಉಗ್ರ ಕಸಬ್‌ನನ್ನು ಕಾಂಗ್ರೆಸ್‌ನವರೇ ರಕ್ಷಣೆ ಮಾಡಿದ್ದರು ಅಂತ ಡೈರಿಯಲ್ಲಿ ಪತ್ತೆಯಾಗಿದೆ|ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟ ಆಗಿದ್ದರೂ ಇನ್ನೂ ಬುದ್ಧಿಬಂದಿಲ್ಲ|

ಬಾಗಲಕೋಟೆ(ಫೆ.20): ಉಪಮುಖ್ಯಮಂತ್ರಿ ಸ್ಥಾನ ಸಿಗದ ವಿಷಯದಲ್ಲಿ ನಾನು ಏನೂ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಮಾತನಾಡಲೂ ಬಾರದು. ಏಕೆಂದರೆ ಪಕ್ಷ ತಾಯಿ ಸ್ಥಾನದಲ್ಲಿದೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ಧನಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಡಿಸಿಎಂ ವಿಷಯದಲ್ಲಿ ಆಶ್ವಾಸನೆ ನೀಡಿದ್ದರು. ಅದನ್ನು ನಾನು ಈ ಸಂದರ್ಭದಲ್ಲಿ ಪರಿಗಣನೆ ಮಾಡುವುದಿಲ್ಲ. ಈ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಹಳಷ್ಟು ಜನರಿಗೆ ಮಂತ್ರಿ, ಡಿಸಿಎಂ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅವಕಾಶ ಸಿಕ್ಕ ಸಂದರ್ಭದಲ್ಲಿ ಪಕ್ಷ ಹಾಗೂ ಹೈಕಮಾಂಡ್ ಸ್ಥಾನಮಾನ ಕೊಡುವ ಕೆಲಸವನ್ನು ಮಾಡುತ್ತದೆ. ಭವಿಷ್ಯದಲ್ಲಿ ನಾನು ಉಪಮುಖ್ಯಮಂತ್ರಿಯಾಗುವ ವಿಷಯವನ್ನು ಸಹ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದರು. 

ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಹಾಗೂ ಅತೃಪ್ತರು ಜಗದೀಶ ಶೆಟ್ಟರ ಮನೆಯಲ್ಲಿ ಸಭೆ ನಡೆಸಿದ್ದಾರೆ ಎಂಬ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೆಲವೊಂದು ಅಭಿವೃದ್ಧಿ ವಿಚಾರದಲ್ಲಿ ಚರ್ಚಿಸಲು ಸಭೆ ಸೇರಿದ್ದಾರೆ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಸಚಿವ ಆನಂದ ಸಿಂಗ್ ಅವರನ್ನು ಬೆಳೆಸಿ, ರಾಮುಲು ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ರಾಮುಲು ಒಂದು ಜಾತಿಗೆ ಸೇರಿದವನಲ್ಲ. ಬಿಜೆಪಿಯಲ್ಲಿ ರಾಮುಲುಗೆ ಕಾರ್ಯಕರ್ತರು, ದೊಡ್ಡ ಶಕ್ತಿ ತುಂಬಿದ್ದಾರೆ. ಆನಂದ ಸಿಂಗ್ ಬೇರೆ ಅಲ್ಲ. ಸಾಮರ್ಥ್ಯ ಗುರುತಿಸಿ ಪಕ್ಷ ನನ್ನನ್ನು ರಾಜ್ಯದ ಲೀಡರ್ ಆಗುವಂತೆ ಬೆಳೆಸಿದೆ ಎಂದರು. 

ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟ ಆಗಿದ್ದರೂ ಇನ್ನೂ ಬುದ್ಧಿಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನ ಮೇಲೆ ಪ್ರೀತಿ ಹೆಚ್ಚಾಗುತ್ತಿದೆ. ದೇಶವನ್ನು ಪಾಕಿಸ್ತಾನಕ್ಕೆ ಒತ್ತೆ ಇಡುವ ಕಾಂಗ್ರೆಸ್ ನಾಯಕರನ್ನು ನೋಡುತ್ತಿದ್ದೇವೆ ಎಂದು ಟೀಕಿಸಿದ ಅವರು, ಮಂಗಳೂರು ಗಲಭೆಯಲ್ಲಿಯೂ ಕಾಂಗ್ರೆಸ್‌ನವರು ರಾಜಕಾರಣ ಮಾಡಿದರು. ಅವರಿಗೆ ಅಜೆಂಡಾ ಎನ್ನುವುದೇ ಇಲ್ಲ ಎಂದರು. 

ಕಸಬ್ ದೇಶದ್ರೋಹಿ ಅವನಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮನೆ ಕೊಟ್ಟು, ರಕ್ಷಣೆ ಮಾಡಿದರು. ಅದು ಕೂಡ ಈಗ ಬಯಲಿಗೆ ಬರುತ್ತಿದೆ. ಕಸಬ್‌ನನ್ನು ಕಾಂಗ್ರೆಸ್‌ನವರೆ ರಕ್ಷಣೆ ಮಾಡಿದ್ದರು ಅಂತ ಡೈರಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಲಿ ಎಂದರು. 

click me!