ಸಚಿವ ಸಂಪುಟ ವಿಸ್ತರಣೆಗೆ ಸಿಎಂ ದೆಹಲಿಗೆ ಹೋಗಿಲ್ಲ ಆನಂದ ಸಿಂಗ್| ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡುವುದಿಲ್ಲ, ಆಂಜನೇಯಸ್ವಾಮಿ ಅನುಗ್ರಹ ಮಾಡಿದಾಗ ಸಚಿವನಾಗುವೆ| ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುವೆ ಎಂದ ಶಾಸಕ ಜಿ. ಸೋಮಶೇಖರ ರೆಡ್ಡಿ|
ಬಳ್ಳಾರಿ(ಸೆ.18): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಹೋಗಿಲ್ಲ. ಮಳೆಯಿಂದಾದ ಹಾನಿ, ರಾಜ್ಯದ ಅಭಿವೃದ್ಧಿ ನೆಲೆಯಲ್ಲಿ ಬೇಕಾಗಿರುವ ಅನುದಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಹೋಗಿದ್ದಾರೆ ಎಂದು ಅರಣ್ಯ ಖಾತೆ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆಗಾಗಿಯೇ ಹೋಗಿದ್ದಾರೆ ಎಂಬುದು ಸುಳ್ಳು. ರಾಜ್ಯದಲ್ಲಾಗಬೇಕಾದ ವಿವಿಧ ಪ್ರಗತಿ ಕಾರ್ಯಗಳ ಕುರಿತು ಚರ್ಚಿಸಲು ಹೋಗಿದ್ದಾರೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದರೂ ಆಡಬಹುದು ಎಂದರಲ್ಲದೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಭಾಗದ ಶಾಸಕರು ಹಾಗೂ ಸಚಿವರು ಕುಳಿತು ಚರ್ಚಿಸುವ ಅಗತ್ಯವಿದೆ. ಹಿರಿಯ ಹೋರಾಟಗಾರ ಸಿರಿಗೇರಿ ಪನ್ನರಾಜ್ ಅವರ ಸಲಹೆಯಂತೆ ಮೂರು ತಿಂಗಳಿಗೊಮ್ಮೆ ಸಭೆ ಕರೆದು ಆಗಿರುವ ಹಾಗೂ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುತ್ತೇವೆ. ಹಗರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಕಾಲೇಜು ತರುವ ಕುರಿತು ಖಂಡಿತವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಬರುವ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಹೊತ್ತಿಗೆ ಕೃಷಿ ಕಾಲೇಜು ಸೇರಿದಂತೆ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಆದರೆ, ಈ ವರೆಗೆ ಸದಸ್ಯರ ನೇಮಕವಾಗಿಲ್ಲ ಎಂದು ತಿಳಿದು ಬಂದಿದ್ದು, ಕೂಡಲೇ ಸದಸ್ಯರ ನೇಮಕಕ್ಕೆ ಮುಂದಾಗಲಾಗುವುದು ಎಂದು ಹೇಳಿದರು.
ಕೂಡ್ಲಿಗಿ: ಆ್ಯಂಬುಲೆನ್ಸ್‌ನಲ್ಲೇ ಕೊರೋನಾ ಸೋಂಕಿತ ಸಾವು
ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯದ 13 ಅರಣ್ಯ ವೃತ್ತಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಈ ವರೆಗೆ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವ ಕುರಿತು ಪ್ರಕರಣಗಳು ಕಂಡು ಬಂದಿಲ್ಲ. ಈ ಸಂಬಂಧ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿದ್ದಾರೆ ಎಂದರು.
ಪ್ರತ್ಯೇಕ ಜಿಲ್ಲೆಗೆ ಹೋರಾಟ
ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂಬ ಒತ್ತಾಯ ಮುಂದುವರಿದಿದೆ. ಎಷ್ಟೇ ಕಷ್ಟವಾದರೂ ಸರಿಯೇ ನನ್ನ ಕ್ಷೇತ್ರದ ಜನರಿಗೆ ನೀಡಿದ ಭರವಸೆಯಂತೆ ಪ್ರತ್ಯೇಕ ಜಿಲ್ಲೆಗೆ ಹೋರಾಟ ಮಾಡುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಆನಂದಸಿಂಗ್, ‘ಪಕ್ಕದಲ್ಲಿಯೇ ಶಾಸಕ ಸೋಮಶೇಖರ ರೆಡ್ಡಿ ಇರುವಾಗ ಇಂತಹ ಪ್ರಶ್ನೆ ಕೇಳಬಹುದೇ? ಎಂದು ನಗೆಯಾಡಿದರು. ಶಾಸಕ ಸೋಮಶೇಖರ ರೆಡ್ಡಿ ಸಚಿವರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು. ಬಿಜೆಪಿ ಮುಖಂಡರಾದ ಗೋನಾಳ್ ರಾಜಶೇಖರಗೌಡ ಇತರರಿದ್ದರು.
ಅರಣ್ಯ ಖಾತೆಯೇ ಉತ್ತಮವಾಗಿದೆ. ಇಲ್ಲಿಯೇ ಸಾಕಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಿದ್ದು, ಬೇರೆ ಖಾತೆ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿಲ್ಲ ಎಂದು ಸಚಿವ ಆನಂದಸಿಂಗ್ ಸ್ಪಷ್ಟಪಡಿಸಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿಂಗ್, ಅರಣ್ಯ ಖಾತೆ ಬದಲಾಯಿಸಿಕೊಡುವಂತೆ ಎಂದೂ ಬೇಡಿಕೆ ಇಟ್ಟಿಲ್ಲ. ನನ್ನ ಬೆಂಬಲಿಗರು ಮತ್ತಷ್ಟೂಉತ್ತಮ ಖಾತೆ ನೀಡಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕೇಳುತ್ತಿರಬಹುದು. ಆದರೆ, ನಾನು ಎಂದೂ ಖಾತೆ ಬದಲಾವಣೆಯ ಪ್ರಸ್ತಾಪ ಮಾಡಿಲ್ಲ. ಇಲ್ಲಿಯೇ ಇದ್ದು ಉತ್ತಮ ಕೆಲಸ ಮಾಡುತ್ತೇನೆ ಎಂದು ಸಚಿವರು ಹೇಳಿದರು.
ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ; ಶಾಸಕ ರೆಡ್ಡಿ
ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡುವುದಿಲ್ಲ ಎಂದಿರುವ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಆಂಜನೇಯಸ್ವಾಮಿ ಅನುಗ್ರಹ ಮಾಡಿದಾಗ ಸಚಿವನಾಗುವೆ ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ರೆಡ್ಡಿ, ನನ್ನ ಸಹೋದರನಂತಿರುವ ಆನಂದಸಿಂಗ್ ಸಚಿವರಾಗಿದ್ದಾರೆ. ಇದರಿಂದಾಗಿ ನನಗೆ ಸಚಿವ ಸ್ಥಾನ ಬೇಕಿಲ್ಲ. ನಾನು ಆಕಾಂಕ್ಷಿಯೂ ಅಲ್ಲ. ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುವೆ ಎಂದರು.