
ಯಾದಗಿರಿ: ‘ಬರ ಪರಿಹಾರ ವಿಚಾರದಲ್ಲಿ ರಾಜ್ಯ ರೈತರಿಗೆ ಅನ್ಯಾಯ ಆದ ಭಾವನೆ ಕಾಡುತ್ತಿದೆ ₹2,500 ಬರ ನಿರೀಕ್ಷೇಲಿದ್ದ ರೈತರಿಗೆ ಶಾಕ್ !’ ಎಂಬ ನ.10 ರಂದು ‘ಕನ್ನಡಪ್ರಭ’ದ ಮುಖಪುಟದಲ್ಲಿ ಪ್ರಕಟಗೊಂಡಿದ್ದ ವರದಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ‘ರೈತರಿಗೆ ಪೂರ್ಣ ಬರ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ₹2,000 ಅಥವಾ ₹2,500 ಪಡೆದ ರೈತರಿಗೆ ಬಾಕಿ ಹಣ ಮುಂದಿನ ಕಂತಿನಲ್ಲಿ ಪಾವತಿಯಾಗಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
‘ಹಾಗೆಯೇ, ಕೆಲವು ರೈತರ ಖಾತೆಗೆ ಜಮೆಯಾಗಿರುವ ₹2,000ಗಳೇ ಅವರಿಗೆ ಸಿಗುವ ಅಂತಿಮ ಪರಿಹಾರವಲ್ಲ. ಬರಪೀಡಿತ ಪ್ರದೇಶದ ಅರ್ಹ ರೈತರೆಲ್ಲರಿಗೂ ಕನಿಷ್ಠ ₹5,000 ಪರಿಹಾರ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕೂಡ ಸ್ಪಷ್ಟಪಡಿಸಿದ್ದಾರೆ.
‘₹2,500 ಬರ ನಿರೀಕ್ಷೇಲಿದ್ದ ರೈತರಿಗೆ ಶಾಕ್ !’ ಶೀರ್ಷಿಕೆಯಡಿ ಮಂಗಳವಾರ ‘ಕನ್ನಡಪ್ರಭ’ದ ಮುಖಪುಟದಲ್ಲಿ ಪ್ರಕಟಗೊಂಡಿದ್ದ ವರದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಸುದ್ದಿ ಬೆನ್ನಲ್ಲೇ, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಹಾಗೂ ರೈತ ಸಂಘಟನೆಗಳು ಮುಗಿ ಬಿದ್ದು, ವಾಗ್ದಾಳಿ ನಡೆಸಿದ್ದರು. ಬಳಿಕ, ರಾಜ್ಯದ ಹಲವೆಡೆ ಇಂತಹ ಪ್ರಕರಣಗಳು ಬಯಲಿಗೆ ಬಂದಿದ್ದವು. ವರದಿಯಾಧರಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ವಿಪಕ್ಷ ನಾಯಕರುಗಳಿಂದ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ರೈತ ಸಂಘಟನೆಗಳ ಆಕ್ರೋಶ ಭುಗಿಲೆದ್ದಿತ್ತು.
ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಮೊದಲ ಕಂತಿನಲ್ಲಿ ₹2,000 ಪಡೆದಿರುವ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ ₹3,000 ಪಾವತಿಸಲಾಗುವುದು. ಅದೇ ರೀತಿ, ಈಗಾಗಲೇ ₹2,500 ಪಡೆದಿರುವ ರೈತರಿಗೆ ಮತ್ತೊಂದು ₹2,500 ನೀಡಲಾಗುವುದು. ಅರ್ಹ ರೈತರೆಲ್ಲರಿಗೂ ತಲಾ ಕನಿಷ್ಠ ₹5,000 ಪರಿಹಾರ ತಲುಪುವುದನ್ನು ಖಚಿತಪಡಿಸಲಾಗುವುದು, ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ ₹5,000 ಪರಿಹಾರ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ರೈತರಿಗೆ ಪೂರ್ಣ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ತಪ್ಪು ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.
ಆ ಮೂಲಕ, ಯಾದಗಿರಿ ಜಿಲ್ಲೆಯಾದ್ಯಂತವಷ್ಟೇ ಅಲ್ಲ, ರಾಜ್ಯದ ವಿವಿಧ ಜಿಲ್ಲೆಗಳ ಬರಪೀಡಿತ 226 ತಾಲೂಕುಗಳ ಲಕ್ಷಾಂತರ ರೈತರಿಗೆ ನಿರುಮ್ಮಳ ಮೂಡಿಸಿದಂತಾಗಿದೆ.
ರಾಜ್ಯ ಸರ್ಕಾರ ರೈತರಿಗೆ ಘೋಷಿಸಿದ ಬರ ಪರಿಹಾರ ವಿಚಾರದಲ್ಲಿ, ₹2,500 ಬದಲು, ಕಡಿಮೆ ಮೊತ್ತದ ಹಣ, ₹1,500 ಮತ್ತು ₹2,000ಗಳಷ್ಟು ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದ್ದಕ್ಕೆ ಆಕ್ರೋಶಗೊಂಡ ಯಾದಗಿರಿ ಜಿಲ್ಲೆಯ ವಿವಿಧೆಡೆಯ ರೈತರು, ಹೆಚ್ಚುವರಿ ₹500 ಹಣ ಸೇರಿಸಿ, ಕರ್ನಾಟಕ ಸರಕಾರದ ಹೆಸರಲ್ಲಿ ₹2000 ಚೆಕ್ ಬರೆದು, ಸರ್ಕಾರಕ್ಕೆ ಮರಳಿಸುತ್ತಿದ್ದಾರೆ.
ಘೋಷಣೆಗಿಂತ ಕಡಿಮೆ ಹಣ ಬಂದಿದ್ದಕ್ಕೆ ಆಕ್ರೋಶಗೊಂಡ ರೈತರು, ಬುಧವಾರ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ, ಬಿಳ್ಹಾರ ಗ್ರಾಮದ ರೈತ ಸದಾಶಿವರೆಡ್ಡಿ ಎಂಬುವರು ಸರ್ಕಾರಕ್ಕೆ ಮರಳಿ ₹2,000ನ ಚೆಕ್ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ₹1,500 ಪರಿಹಾರದ ಹಣ ಬೇಡ, ನಾವೇ ಸರ್ಕಾರಕ್ಕೆ ₹2 ಸಾವಿರ ಕೊಡುತ್ತೇವೆಂದು ರೈತರು ಕಿಡಿ ಕಾರಿದರು. ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಹಣ ಪಾವತಿ ಮಾಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಬಿಳ್ಹಾರ, ಹೊನಗೇರಾ, ಹಾಲಗೇರಾ, ಬೆಟ್ಟದಹಳ್ಳಿಗಳ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರೈತರ ಬರ ಪರಿಹಾರದಲ್ಲಾದ ತಾರತಮ್ಯ ಕುರಿತು ‘ಕನ್ನಡಪ್ರಭ’ದ ವರದಿ ರಾಜ್ಯ ಸರ್ಕಾರವನ್ನು ಬಡಿದೆಚ್ಚರಿಸಿದೆ. ಯಾದಗಿರಿ ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ಉಳಿದ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ರೈತರಿಗೂ ₹5,000 ಇನ್ಪುಟ್ ಸಬ್ಸಿಡಿ ನೀಡುವ ಬಗ್ಗೆ ಸಿಎಂ, ಡಿಸಿಎಂ ಘೋಷಣೆ ಮಾಡಿರುವುದು ನಿರಮ್ಮಳ ಮೂಡಿಸಿದೆ. ರೈತಪರ ಕಾಳಜಿ ವ್ಯಕ್ತಪಡಿಸಿದ ‘ಕನ್ನಡಪ್ರಭ’ಕ್ಕೆ ಧನ್ಯವಾದಗಳು.
- ಅಶೋಕರಾವ್ ಮಲ್ಲಾಬಾದಿ, ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತರು, ಶಹಾಪುರ.