ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸೂಚನೆ ಮೇರೆಗೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿ ಬುಧವಾರದಿಂದ ಗಣಿ ಸರ್ವೆ ಕಾರ್ಯ ಶುರುಗೊಳ್ಳಲಿದೆ.
ಬಳ್ಳಾರಿ (ಮೇ.29): ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸೂಚನೆ ಮೇರೆಗೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿ ಬುಧವಾರದಿಂದ ಗಣಿ ಸರ್ವೆ ಕಾರ್ಯ ಶುರುಗೊಳ್ಳಲಿದೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ಸಂಡೂರು ತಾಲೂಕಿನ ತುಮಟಿ, ರಾಯದುರ್ಗಂ ತಾಲೂಕಿನ ಓಬಳಾಪುರಂ ಹಾಗೂ ಮಲಪನಗುಡಿ ಸೇರಿದಂತೆ ಒಟ್ಟು ಏಳು ಗಣಿಗಳನ್ನು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಲಿದ್ದಾರೆ. ಮೇ 29ರಿಂದ ಜೂನ್ 8ರ ವರೆಗೆ ಜಂಟಿ ಸರ್ವೆ ಕಾರ್ಯ ನಡೆಯಲಿದೆ ಎಂದು ಭೂ ವಿಜ್ಞಾನ ಇಲಾಖೆ ಮೂಲಗಳು ಖಚಿತಪಡಿಸಿವೆ.
ಕಳೆದ ಮೇ 21ರಂದು ಕೇಂದ್ರ ಉನ್ನತಾಧಿಕಾರಿ ಸಮಿತಿ (ಸಿಇಸಿ) ಸಭೆಯಲ್ಲಿ ಉಭಯ ರಾಜ್ಯಗಳ ಏಳು ಗಣಿಗಳ ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಲಾಗಿದ್ದು, ಅಂತೆಯೇ ಮೇ 29ರಂದು ಮೆಹಬೂಬ್ ಟ್ರಾನ್ಸ್‌ಫೋರ್ಟ್ ಕಂಪನಿ (ಎಂಬಿಟಿ), ಮೇ 30ರಂದು ಹಿಂದ್ ಟ್ರೇಡರ್ಸ್ (ಎಚ್‌ಟಿ), 31ರಂದು ಎನ್. ರತ್ನಯ್ಯ (ಎನ್‌ಆರ್), ಜೂ. 1ರಂದು ಟಿ. ನಾರಾಯಣ ರೆಡ್ಡಿ (ಟಿಎನ್‌ಆರ್), ಜೂನ್ 2 ಮತ್ತು 3 ರಂದು ವಿಭೂತಿಗುಡ್ಡ ಮೈನ್ಸ್ ಪ್ರೈ ಲಿ., (ವಿಜಿಎಂ), 5ರಂದು ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಹಾಗೂ 6 ರಂದು ಬಳ್ಳಾರಿ ಮೈನಿಂಗ್ ಕಾರ್ಪೊರೇಷನ್‌ನ ಗಣಿ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಸರ್ವೆ ಕಾರ್ಯವನ್ನು ಸುರತ್ಕಲ್‌ನ ಎನ್‌ಐಟಿಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ, ಕಂದಾಯ, ಭೂ ದಾಖಲೆಗಳ ವಿಭಾಗ ಹಾಗೂ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಾಂತ್ರಿಕ ತಂಡ ಸರ್ವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ಬಿ-1 ಕೆಟಗರಿಯ ಏಳು ಕಬ್ಬಿಣ ಅದಿರು ಗಣಿಗಳ ಸಮೀಕ್ಷೆಗೆ ಚಾಲನೆ ದೊರೆತಂತಾಗಿದೆ. ಕರ್ನಾಟಕ ಹಾಗೂ ಆಂಧ್ರ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಹಾಗೂ ಹಿರಿಯ ಹೋರಾಟಗಾರ ಎಸ್.ಆರ್. ಹಿರೇಮಠ ಅವರು 2009ರಲ್ಲಿ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿದ್ದರು.
ರಾಜಕೀಯದಲ್ಲಿ ರಾಜೀಯಾಗಿದ್ದರೆ ನಾನೆಲ್ಲೋ ಇರ್ತಿದ್ದೆ: ವಾಟಳ್ ನಾಗರಾಜ್
ಈ ಸಂಬಂಧ ಕಳೆದ ಮಾ. 14ರಂದು ಸುಪ್ರೀಂಕೋರ್ಟ್ ಕರ್ನಾಟಕಾಂಧ್ರ ಗಡಿಪ್ರದೇಶದ ಕಬ್ಬಿಣದ ಅದಿರಿನ ಏಳು ಗಣಿ ಪ್ರದೇಶಗಳನ್ನು ಜಂಟಿ ಸರ್ವೆ ನಡೆಸಬೇಕು ಹಾಗೂ ನಕ್ಷೆ ಸಿದ್ಧಪಡಿಸಬೇಕು ಎಂದು ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಗಣಿಗಳ ಸರ್ವೆಗೆ ಎರಡು ರಾಜ್ಯಗಳ ಅಧಿಕಾರಿಗಳು ಮುಂದಾಗಿದ್ದಾರೆ.