Tumakur : ಮಳೆ ಆವಾಂತರಕ್ಕೆ ರಾಗಿ ಪೈರು ಭೂಮಿಪಾಲು

By Kannadaprabha News  |  First Published Dec 12, 2022, 5:44 AM IST

ರಾಗಿ ಪೈರು ಅಡ್ಡಾದಿಡ್ಡಿಯಾಗಿ ನೆಲಕ್ಕೆ ಉರುಳಿ, ಭೂಮಿ ತಾಯಿ ಪಾಲಾಗುತ್ತಿರುವುದರಿಂದ ಅನ್ನದಾತನ ಕೈಗೆ ಬಂದಿರುವ ತುತ್ತು ಬಾಯಿಗೆ ಬಾರದಂತಾಗಿದ್ದು, ‘ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದವೇ ನೀರು’ ಎಂಬಂತೆ ರೈತನ ಬದುಕು ಅತಂತ್ರವಾಗಿದೆ.


 ಬಿ. ರಂಗಸ್ವಾಮಿ

 ತಿಪಟೂರು :  ತಾಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆ ಭರ್ಜರಿಯಾಗಿ ಬೆಳೆದು ಹಚ್ಚ ಹಸಿರಾಗಿ ಉತ್ಕೃಷ್ಠ ತೆನೆಗಟ್ಟಿನೊಂದಿಗೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಆದರೆ ಬಂಪರ್‌ ಬೆಳೆಯಾಗಿ ಬೆಳೆದು ಬಂದಿರುವ ರಾಗಿ ಪೈರು ಅಳತೆ ಮೀರಿ ಬೆಳೆದ ಪರಿಣಾಮ ಹಾಗೂ ತೆನೆಗಳು ಬಲಿತ ಮೇಲೂ ಅಕಾಲಿಕ ಮಳೆ ಬರುತ್ತಿರುವುದರಿಂದ ಕಟಾವು ಮಾಡುವ ಈ ವೇಳೆಯಲ್ಲಿ ರಾಗಿ ಪೈರು ಅಡ್ಡಾದಿಡ್ಡಿಯಾಗಿ ನೆಲಕ್ಕೆ ಉರುಳಿ, ಭೂಮಿ ತಾಯಿ ಪಾಲಾಗುತ್ತಿರುವುದರಿಂದ ಅನ್ನದಾತನ ಕೈಗೆ ಬಂದಿರುವ ತುತ್ತು ಬಾಯಿಗೆ ಬಾರದಂತಾಗಿದ್ದು, ‘ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದವೇ ನೀರು’ ಎಂಬಂತೆ ರೈತನ ಬದುಕು ಅತಂತ್ರವಾಗಿದೆ.

Tap to resize

Latest Videos

ಈ ವರ್ಷ (Rain)  ಸಮರ್ಪಕವಾಗಿ ಬಂದ ಕಾರಣ  (Millet) ಬೆಳೆ ಹುಲುಸಾಗಿ ಬೆಳೆದು ತೆನೆ ಹಾಗೂ ಕಡ್ಡಿ ತೂಕ ಹೆಚ್ಚಾಗಿ ಬೆಳೆದ ಪೈರು ಸಂಪೂರ್ಣ ನೆಲಕಚ್ಚುವ ಮೂಲಕ ಭೂಮಿ ತಾಯಿ ಪಾಲಾಗಿದೆ. ಇದರಿಂದ ರಾಗಿ ತೆನೆ ಮತ್ತು ಜಾನುವಾರುಗಳ ಮೇವು ರೈತನ ಕಣ್ಣ ಮುಂದೆಯೇ ಹಾಳಾಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತನ ಕನಸು ನುಚ್ಚು ನೂರಾಗಿದೆ. ಬಿತ್ತಿದ ನಂತರ ಹುಲುಸಾಗಿ ಬೆಳೆದು ಬಂದ ಬಿರುಸು ನೋಡಿದರೆ ರೈತನ ಕಣಜ ತುಂಬ ಬೇಕಾಗಿದ್ದ ರಾಗಿ, ವರ್ಷ ಪೂರಾ ತಮ್ಮ ರಾಸುಗಳಿಗೆ ತಿನಿಸಿದರೂ ಸವೆಯದಂತೆ ಬವಣೆಗೆ ಸೇರಬೇಕಾಗಿದ್ದ ರಾಗಿ ಹುಲ್ಲು ನೋಡ ನೋಡುತ್ತಲೆ ಮಳೆಗೆ ನೆಂದು ನೆಲಕ್ಕುರುಳುತ್ತಿದೆ. ಕೆಲವು ರೈತರು ಈಗಾಗಲೆ ಕಟಾವು ಮುಗಿಸಿಕೊಂಡಿದ್ದು ಸಾಕಷ್ಟುರೈತರು ಕಟಾವು ಮಾಡಬೇಕಾಗಿರುವ ರಾಗಿ ಪೈರೆಲ್ಲಾ ಅಡ್ಡಾದಿಡ್ಡಿಯಾಗಿ ಬಿದ್ದಿರುವುದರಿಂದ ಕಟಾವು ಮಾಡುವುದು ಬಹಳ ಕಷ್ಟವಾಗಿರುವುದಲ್ಲದೆ ರಾಗಿ ತೆನೆಗಳೆಲ್ಲಾ ಕರಗಿದಂತಾಗಿ ಉದುರಿ ಬೀಳುತ್ತಿದ್ದು ರಾಗಿಕಾಳುಗಳು ಮತ್ತೆ ಮೊಳಕೆಯೊಡೆಯುತ್ತಿವೆ.

ಕಟಾವಿನ ಚಿಂತೆ: ರಾಗಿ ಪೈರು ಮಲಗಿರುವುದರಿಂದ ಕಟಾವು ಮಾಡುವುದು ಚಿಂತೆಯಾಗಿದೆ. ಕಟಾವು ಮಾಡುವ ಕಾರ್ಮಿಕರೇ ಇಲ್ಲದಂತಾಗಿರುವ ಈಗ ಕಟಾವು ಯಂತ್ರಗಳಿಂದ ಇದು ಕಷ್ಟವಾಗಿರುವುದರಿಂದ ನಷ್ಟವೇ ಜಾಸ್ತಿಯಾಗಿದೆ. ರಾಗಿ ಬೆಳೆಯುವುದೇ ನಷ್ಟದ ಕೃಷಿಯಾಗಿದ್ದು ಉಳುಮೆ, ಬಿತ್ತನೆ, ಗೊಬ್ಬರ, ಕಟಾವುಗಳಿಗೆ ತಗುಲುತ್ತಿರುವ ಖರ್ಚು ಮುಂದೆ ಕಣದ ಕೆಲಸ ಇವೆಲ್ಲವನ್ನೂ ಲೆಕ್ಕ ಹಾಕಿದರೆ ರಾಗಿಗೆ ಮಾಡುವ ಖರ್ಚು ರೈತರ ಮೈಮೇಲೆಯೇ ಬರುವಂತಾಗಿದ್ದು, ಶ್ರಮ ಹಾಕಿ ಬೆಳೆದ ಬೆಳೆಯನ್ನು ಕುಯಿಲು ಮಾಡದೆ ಬಿಡಲೂ ಆಗದೆ ರಾಗಿ ಬೆಳೆಗಾರರು ಇನ್ನು ಮುಂದೆ ರಾಗಿ ಬೆಳೆಯುವುದೇ ಬೇಡಪ್ಪಾ ಅನ್ನುತ್ತಿದ್ದಾರೆ.

ಒಟ್ಟಾರೆ ಕೃಷಿ ಯಾವತ್ತೂ ಲಾಭದಾಯಕವಾಗಲಾರದು ಎಂಬುದನ್ನು ಮಳೆಗೆ ಸಿಲುಕಿರುವ ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವುದು ನೋಡಿದರೆ ಈಗಾಗಲೆ ಅಳಿವಿನಂಚಿನಲ್ಲಿರುವ ಕೃಷಿಕಾಯಕಕ್ಕೆ ಮತ್ತಷ್ಟುಹೊಡೆತ ಬೀಳಬಹುದೇನೊ. ಸಾವಿರಾರು ರುಪಾಯಿ ಸಾಲ ತಂದು ದುಬಾರಿ ಖರ್ಚಿನೊಂದಿಗೆ ಬೀಜ-ಗೊಬ್ಬರ ಖರೀದಿಸಿ ಹೊಲ ಉತ್ತುಬಿತ್ತಿ ಹಗಲಿರುಳು ಜೋಪಾನ ಮಾಡಿದ್ದ ತಾಲೂಕಿನ ಪ್ರಮುಖ ಜನ-ಜಾನುವಾರುಗಳ ರಾಗಿ ಬೆಳೆ ಕಣ್ಣ ಮುಂದೆಯೂ ನೆಲಕಚ್ಚಿರುವುದನ್ನು ನೋಡಿದರೆ ರೈತನ ಭವಿಷ್ಯಕ್ಕೆ ಕೃಷಿ ಯಾವತ್ತೂ ಲಾಭದಾಯಕವಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.

ಕೋಟ್‌ 1 : ಸಾಲಸೋಲ ಮಾಡಿಕೊಂಡು ಬಿತ್ತಿದ್ದ ರಾಗಿ ಬೆಳೆಯನ್ನು ಕಟಾವು ಮಾಡಿಕೊಂಡು ಕಣಕ್ಕೆ ತರುವುದೇ ಒಂದು ದೊಡ್ಡ ಸಾಹಸವಾಗಿದೆ. ರಾಗಿ ಬೆಳೆ ತೆಗೆಯಲು ಭೂಮಿ ಉಳುವುದರಿಂದ ಬಿತ್ತನೆ, ಗೊಬ್ಬರ ಕಟಾವು, ಕಣಗೆಲಸದವರೆಗೂ ದುಬಾರಿ ಖರ್ಚು ಬರುತ್ತಿದ್ದು, ಸರ್ಕಾರ ಇವೆಲ್ಲಕ್ಕೂ ಸಾಧ್ಯವಾದಷ್ಟುಸಹಾಯಧನ ನೀಡಿದರೆ ಮಾತ್ರ ಇನ್ನು ಮುಂದೆ ರಾಗಿ ಬೆಳೆಯಬಹುದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಗಿ ಬೆಳೆಗಾರರು ರಾಗಿ ಬೆಳೆಯುವುದನ್ನೇ ಕೈಬಿಡುವ ಲೆಕ್ಕಾಚಾರದಲ್ಲಿದ್ದಾರೆ.

- ಬೂಸಾ ಗಂಗಣ್ಣ, ಲಿಂಗದಹಳ್ಳಿ ತಿಪಟೂರು

ಕೋಟ್‌ -2 : ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್‌ಗೂ ಹೆಚ್ಚು ರಾಗಿ ಬೆಳೆ ಬಿತ್ತನೆಯಾಗಿದ್ದು, ಉತ್ತಮ ಮಳೆ ಬಂದ ಕಾರಣ ರಾಗಿ ಬಂಪರ್‌ ಬೆಳೆಯಾಗಿ ಬೆಳೆದಿದೆ. ಕಟಾವಿನ ಈ ಸಮಯದಲ್ಲಿ ಮಳೆಗೆ ಸಿಲುಕಿ ರಾಗಿ ನೆಲಕಚ್ಚಿರುವುದರಿಂದ ರೈತರಿಗೆ ಕಟಾವು ಮಾಡಲು ದುಬಾರಿ ಖರ್ಚು ಬರುತ್ತಿದ್ದು, ನಷ್ಟವಾಗುವ ಸಂಭವವೇ ಹೆಚ್ಚಿದೆ. ನಮ್ಮ ಮೇಲಧಿಕಾರಿಗಳಿಗೂ ಈ ಬಗ್ಗೆ ವರದಿ ನೀಡಲಾಗುವುದು.

- ಎಚ್‌. ಚನ್ನಕೇಶವ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕರು. ತಿಪಟೂರು

click me!